More

    ಕಾರಂತ ಲೇಔಟ್‌ನಲ್ಲಿ ಬಡವರ ಸೂರಿನ ಕನಸಿಗೆ ಬಿಡಿಎ ಅಡ್ಡಿ

    ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಿರುವ ನಿವೇಶನಗಳಿಗೆ ದುಬಾರಿ ದರ ನಿಗದಿ ಮಾಡುವ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಡವರ ಸೂರಿನ ಕನಸನ್ನು ಕಸಿದಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

    ನಗರ ಸುಧಾರಣೆ ಟ್ರಸ್ಟ್ ಮಂಡಳಿ (ಸಿಐಟಿಬಿ) ಅಸ್ತಿತ್ವದಲ್ಲಿದ್ದ ಕಾಲದಿಂದಲೂ (ಹಾಲಿ ಬಿಡಿಎ) ಲಾಭರಹಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ನಗರ ಬಡವರಿಗೆ ಕೈಗೆಟಕುವ ದರದಲ್ಲಿ ಸೂರು ಒದಗಿಸುವ ಗುರುತರ ಜವಾಬ್ದಾರಿಯನ್ನೂ ವಹಿಸಿದೆ. ರಾಜಧಾನಿಯಲ್ಲಿ ದಶಕಗಳ ಕಾಲ ಬದುಕು ಸವೆಸಿದ್ದರೂ, ಇನ್ನೂ ತಲೆಯ ಮೇಲೊಂದು ಸ್ವಂತ ಸೂರು ಹೊಂದದ ಲಕ್ಷಾಂತರ ಜನರು ಇದ್ದಾರೆ. ಇಂತಹವರ ನೆರವಿಗೆ ನಿಲ್ಲಬೇಕಿದ್ದ ಪ್ರಾಧಿಕಾರವು, ಕಾರಂತ ಲೇಔಟ್‌ನಲ್ಲಿ ಪ್ರತಿ ಚದರ ಅಡಿಗೆ 4,900 ರೂ. ನಿಗದಿ ಮಾಡಿ ಶಾಕ್ ನೀಡಿದೆ. ಅದರಲ್ಲೂ ಪರಿಶಿಷ್ಟರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲುೃಎಸ್) ಅಡಿಯಲ್ಲಿ ಬರುವ ಬಡವರಿಗೆ ಕಡಿಮೆ ದರದಲ್ಲಿ ಸೂರು ಒದಗಿಸಬೇಕು ಎಂಬ ನಿಯಮ ಇದೆ. ಆದರೆ, ಈ ನಿಯಮವನ್ನು ಗಾಳಿಗೆ ತೂರಿ ಪ್ರಾಧಿಕಾರವು ಎಲ್ಲ ಬಗೆಯ ಸೈಟ್‌ಗಳಿಗೆ ಒಂದೇ ರೀತಿಯ ದರ ನಿಗದಿ ಮಾಡಿ ಸಾರ್ವಜನಿಕರಿಗೆ ‘ಬಿಡಿಎ ಸೈಟ್ ಗಗನಕುಸುಮ’ ಆಗಲಿದೆ ಎಂಬ ಸಂದೇಶವನ್ನು ಸಾರಿದಂತಿದೆ.

    ಉಳ್ಳವರಿಗಷ್ಟೇ ಬಿಡಿಎ ಸೈಟ್ ಮೀಸಲೇ?:

    ಉದ್ದೇಶಿತ ಲೇಔಟ್ 17 ಹಳ್ಳಿಗಳಿಗೆ ಸೇರಿದ ಒಟ್ಟು 3,546 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದ್ದು, ಅಂದಾಜು 35 ಸಾವಿರ ನಿವೇಶನಗಳನ್ನು ರಚಿಸಲು ಗುರಿ ಹೊಂದಲಾಗಿದೆ. ಇವುಗಳಲ್ಲಿ ಲೇಔಟ್‌ಗಾಗಿ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ಪರಿಹಾರ ರೂಪದಲ್ಲಿ 9,500 ಸೈಟ್‌ಗಳನ್ನು ವಿತರಿಸಬೇಕಿದೆ. ಕಂದಾಯ ಜಮೀನಿನಲ್ಲಿ ಮನೆ/ಸೈಟ್ ಹೊಂದಿರುವವರಿಗೆ 10 ಸಾವಿರ ಸೈಟ್‌ಗಳನ್ನು ಮೀಸಲಿಟ್ಟಿದ್ದು, ಮೂಲೆ ನಿವೇಶನಗಳಾಗಿ 4,750 ಸೈಟ್‌ಗಳಾಗಿ ರಚನೆಯಾಗಲಿವೆ. ಉಳಿದ 10 ಸಾವಿರ ನಿವೇಶನಗಳು ಮಾತ್ರ ಸಾರ್ವಜನಿಕರಿಗೆ ಲಭ್ಯವಾಗಲಿದೆ.

    ಇತ್ತೀಚಿಗೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾರಂತ ಲೇಔಟ್‌ನಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಿರುವ ಪ್ರತಿ ಸೈಟ್ ದರ ಚದರ ಅಡಿಗೆ 4,900 ರೂ. ನಿಗದಿ ಮಾಡಲಾಗಿದೆ ಎಂಬುದಾಗಿ ೋಷಿಸಿದ್ದಾರೆ. ಇದರನ್ವಯ 20/30 ಅಡಿ ವಿಸ್ತೀರ್ಣದ ಸೈಟ್‌ಗೆ 29.40 ಲಕ್ಷ ರೂ., 30/40 ಅಡಿ ಸೈಟ್‌ಗೆ 58.80 ಲಕ್ಷ ರೂ., 40/60 ಅಡಿ ಸೈಟ್‌ಗೆ 1.17 ಕೋಟಿ ರೂ. ಹಾಗೂ 50/80 ಅಡಿ ಸೈಟ್‌ಗೆ 1. 96 ಕೋಟಿ ರೂ. ಆಗಲಿದೆ. ಇಷ್ಟೊಂದು ದುಬಾರಿ ದರ ನೀಡಿ ಸೈಟ್ ಖರೀದಿಸಿದರೂ, ಮತ್ತಷ್ಟು ಹಣ ಹೂಡಿ ಮನೆ ನಿರ್ಮಿಸಿಕೊಳ್ಳಲು ಜನ ಹೈರಾಣರಾಗಲಿದ್ದಾರೆ. ವಿಶೇಷವೆಂದರೆ ಸರ್ಕಾರಿ ಸಿಬ್ಬಂದಿ (ಕ್ಲಾಸ್ 1 ಕೆಳಗಿನವರು) ಕೂಡ 40/60 ಅಡಿ ಸೈಟ್ ಖರೀದಿಸಲು ಸಾಧ್ಯವಿಲ್ಲ. ಏಕೆಂದರೆ ಈ ವರ್ಗದ ನೌಕರರು ತಮ್ಮ ಆದಾಯ ಮೇಲೆ ಸೈಟ್ ಖರೀದಿಸಬೇಕಿದ್ದು, ದೊಡ್ಡ ವಿಸ್ತೀರ್ಣದ ನಿವೇಶನ ಹೊಂದುವ ಆಸೆಯನ್ನು ಕೈಬಿಡಬೇಕಿದೆ.

    ಲೇಔಟ್ ನಿರ್ಮಾಣ ವೆಚ್ಚಕ್ಕಿಂತ ಅಧಿಕ ಮೊತ್ತ ವಸೂಲಿ:

    ಉದ್ದೇಶಿತ ಬಡಾವಣೆಯ ಕಾಮಗಾರಿಗೆ 2022ರ ಜು.8ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆ ಸಂದರ್ಭದಲ್ಲಿ ಹಿಂದಿನ ಬಡಾವಣೆಗಳಾದ ಸರ್ ಎಂ.ವಿ. ಲೇಔಟ್, ಅರ್ಕಾವತಿ ಲೇಔಟ್ ಹಾಗೂ ಕೆಂಪೇಗೌಡ ಲೇಔಟ್ ನಿರ್ಮಾಣದಲ್ಲಾದ ಲಾಭ-ನಷ್ಟವನ್ನು ಪರಿಗಣಿಸಿ ಕಾರಂತ ಲೇಔಟ್‌ಗೆ ಹೊಸ ದರ ನಿಗದಿ ಮಾಡಲಾಗಿದೆ. ಜತೆಗೆ 2024-25ರ ವರೆಗೆ ಆಗುವ ವೆಚ್ಚವನ್ನು ಗಮನಿಸಿ ಒಟ್ಟು ಯೋಜನಾ ವೆಚ್ಚ 6,372.79 ಕೋಟಿ ರೂ. ಆಗಲಿದೆ ಎಂಬುದಾಗಿ 2023ರ ೆಬ್ರವರಿಯಲ್ಲಿ ನಡೆದ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರದ ಅನುಮೋದನೆ ಪಡೆಯಲಾಗಿದೆ. ಇದರನ್ವಯ 20/30 ಅಡಿ ಸೈಟ್ ಇಡಬ್ಲುೃಎಸ್ ವರ್ಗಕ್ಕೆ ಚದರಡಿಗೆ 1,505 ರೂ. (ಮೌಲ್ಯ 8.74 ಲಕ್ಷ ರೂ.) ಹಾಗೂ ಸಾಮಾನ್ಯ ವರ್ಗಕ್ಕೆ 3,010 ರೂ.ನಂತೆ 17.49 ಲಕ್ಷ ರೂ. ನಿಗದಿ ಮಾಡಲಾಗಿತ್ತು.

    ಆದರೆ, ಈ ನಿರ್ಣಯ ಕೈಗೊಂಡು ವರ್ಷ ಮುಗಿಯುವುದರೊಳಗೆ ಎಲ್ಲ ಬಗೆಯ ವಿಸ್ತೀರ್ಣದ ಸೈಟ್‌ಗಳಿಗೆ ಒಂದೇ ರೀತಿಯಾಗಿ ಚದರಡಿಗೆ 4,900 ರೂ. ದರ ನಿಗದಿ ಮಾಡಲಾಗಿದೆ. ಬಡವರಿಗೆ ರಿಯಾಯಿತಿ ನೀಡುವ ಗೋಜಿಗೆ ಹೋಗದ ಬಿಡಿಎ, ಸೂರು ಯೋಜನೆಯ ನಿಯಮಾವಳಿಯನ್ನೇ ಗಾಳಿಗೆ ತೂರಿದೆ. ಜತೆಗೆ ಒಮ್ಮೆ ಸರ್ಕಾರದಿಂದ ಒಪ್ಪಿಗೆ ಪಡೆದ ಬಳಿಕ ಪರಿಷ್ಕರಣೆ ಮಾಡುವುದಿದ್ದಲ್ಲಿ ಮತ್ತೆ ಸರ್ಕಾರದಿಂದ ಅನುಮೋದನೆ ಪಡೆಯಬೇಕು. ಈ ನಿಯಮ ಪಾಲಿಸದೆ ಪ್ರಾಧಿಕಾರವು ಏಕಾಏಕಿ ತೀರ್ಮಾನ ಕೈಗೊಂಡಿದೆ. ಒಂದು ವೇಳೆ ಸರ್ಕಾರ ಮೌಖಿಕ ಒಪ್ಪಿಗೆ ನೀಡಿದ್ದಲ್ಲಿ ಅದೂ ಕೂಡ ಬಡವರ ವಿರೋಧಿ ನಿಲುವಾಗಲಿದೆ ಎಂದು ಸೈಟ್ ಆಕಾಂಕ್ಷಿಗಳು ಆಕ್ರೋಶವನ್ನು ಹೊರಹಾಕಿದ್ದಾರೆ.

    ನಿವೇಶನ ಹಂಚಿಕೆ ದರ ನಿಗದಿ ವಿವರ (2023):
    ಸೈಟ್ ಅಳತೆ (ಅಡಿ) ಚದರ ಅಡಿ ಸೈಟ್ ಮೌಲ್ಯ
    6/9 ಇಡಬ್ಲುೃಎಸ್ 1,505 ರೂ. 8.74 ಲಕ್ಷ ರೂ.
    6/9 ಸಾಮಾನ್ಯ 3,010 ರೂ. 17.49 ಲಕ್ಷ ರೂ.
    9/12 3,100 ರೂ. 34.99 ಲಕ್ಷ ರೂ.
    12/18 3,300 ರೂ. 76.72 ಲಕ್ಷ ರೂ.
    15/24 3,500 ರೂ. 1.35 ಕೋಟಿ ರೂ.

    ಕಾರಂತ ಲೇಔಟ್ ಆಸುಪಾಸಿನಲ್ಲಿ ಚದರಡಿಗೆ 2,500 ರೂ.ನಿಂದ 3,000 ರೂ. ದರದಲ್ಲಿ ಸೈಟ್ ಲಭ್ಯವಿದೆ. ಬಿಡಿಎ ನಿಗದಿ ಮಾಡಿರುವ ದರ ದುಬಾರಿ ಇದ್ದು, ನಿವೇಶನ ಖರೀದಿದಾರರಿಗೆ ಹೊರೆಯಾಗಲಿದೆ. ಬಡವರ ದೃಷ್ಟಿಯಿಂದ ಸೈಟ್ ದರವನ್ನು ಇಳಿಸಲು ಬಿಡಿಎ ಮುಂದಾಗಲಿ.
    – ಹರೀಶ್, ಕೊಡಿಗೇಹಳ್ಳಿ

    ಬಡಾವಣೆ ನಿರ್ಮಾಣಕ್ಕೆ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ಪರಿಹಾರದ ಸೈಟ್‌ಗಳನ್ನು ವಿತರಿಸದೆ ನಾಗರಿಕರಿಗೆ ಹಂಚಿಕೆ ಮಾಡುತ್ತಿರುವುದು ಸರಿಯಲ್ಲ. ಬಡಜನರಿಗೆ ಕಡಿಮೆ ದರದಲ್ಲಿ ಸೈಟ್ ನೀಡುವ ತನ್ನದೇ ನಿಯಮಕ್ಕೆ ವಿರುದ್ಧವಾಗಿ ಬಿಡಿಎ ನಡೆದುಕೊಳ್ಳುತ್ತಿದೆ. ಸೈಟ್‌ಗಳಿಗೆ ದುಬಾರಿ ದರ ನಿಗದಿ ಮಾಡಿರುವುದು ಶ್ರೀಮಂತರಿಗೆ ಲೇಔಟ್ ನಿರ್ಮಿಸುತ್ತಿರುವಂತಿದೆ.
    – ರಮೇಶ್ ಎಂ, ಕಾರಂತ ಲೇಔಟ್ ವ್ಯಾಪ್ತಿಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts