More

    ದೇಶೀಯ ಕ್ರಿಕೆಟಿಗರಿಗೆ ಭರ್ಜರಿ ಕೊಡುಗೆ ನೀಡಿದ ಬಿಸಿಸಿಐ

    ನವದೆಹಲಿ: ಮುಂಬರುವ ದೇಶೀಯ ಕ್ರಿಕೆಟ್ ಋತು ಆರಂಭಕ್ಕೆ ಮುನ್ನ ಎಲ್ಲ ಕ್ರಿಕೆಟಿಗರಿಗೆ ಬಿಸಿಸಿಐ ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ದೇಶೀಯ ಕ್ರಿಕೆಟಿಗರ ವೇತನವನ್ನು ಭಾರಿ ಏರಿಕೆ ಮಾಡಲು, ಸೋಮವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಲಾಗಿದೆ.

    ಕಿರಿಯ ಮತ್ತು ಹಿರಿಯ ಕ್ರಿಕೆಟಿಗರಿಗೆ ಪ್ರತ್ಯೇಕ ವೇತನ ಶ್ರೇಣಿಯನ್ನು ಪ್ರಕಟಿಸಲಾಗಿದೆ. ಇದರನ್ವಯ 40ಕ್ಕಿಂತ ಹೆಚ್ಚು ಪಂದ್ಯ ಆಡಿದ ಆಟಗಾರರು ಪ್ರತಿದಿನಕ್ಕೆ 60 ಸಾವಿರ ರೂ. ಪಡೆಯಲಿದ್ದಾರೆ. ಅಂದರೆ ಪ್ರತಿ ಪ್ರಥಮ ದರ್ಜೆ ಪಂದ್ಯದಿಂದ ಒಟ್ಟು 2.40 ಲಕ್ಷ ರೂ. ಸಂಭಾವನೆ ಗಳಿಸಲಿದ್ದಾರೆ. 40ರಿಂದ 21ರೊಳಗೆ ಪಂದ್ಯ ಆಡಿದ ಆಟಗಾರರು ಪ್ರತಿ ದಿನಕ್ಕೆ 50 ಸಾವಿರ ರೂ. ಸಂಭಾವನೆ ಗಳಿಸಲಿದ್ದಾರೆ. ಅಂದರೆ ಪ್ರತಿ ಪ್ರಥಮ ದರ್ಜೆ ಪಂದ್ಯದಿಂದ 2 ಲಕ್ಷ ರೂ. ವೇತನ ಪಡೆಯಲಿದ್ದಾರೆ. ಇನ್ನು 20ಕ್ಕಿಂತ ಕಡಿಮೆ ಪಂದ್ಯ ಆಡಿದವರು ಪ್ರತಿ ದಿನ 40 ಸಾವಿರ ರೂ. ವೇತನ ಗಳಿಸಲಿದ್ದಾರೆ. ಈ ಮುನ್ನ ಎಲ್ಲ ಆಟಗಾರರಿಗೆ ಪ್ರತಿದಿನಕ್ಕೆ 35 ಸಾವಿರ ರೂ. ವೇತನ ನೀಡಲಾಗುತ್ತಿತ್ತು.

    ತಂಡದಲ್ಲಿದ್ದರೂ, ಆಡುವ ಬಳಗದಲ್ಲಿ ಸ್ಥಾನ ಪಡೆಯದೆ ಮೀಸಲು ಆಟಗಾರರಾಗಿ ಉಳಿಯುವವರು ಕ್ರಮವಾಗಿ 20 ಸಾವಿರ, 25 ಸಾವಿರ ಮತ್ತು 30 ಸಾವಿರ ರೂ. ಶ್ರೇಣಿಯಲ್ಲಿ ಸಂಭಾವನೆ ಪಡೆಯಲಿದ್ದಾರೆ. ಈ ಮುನ್ನ ಎಲ್ಲ ಮೀಸಲು ಆಟಗಾರರಿಗೆ 17,500 ರೂ. ನೀಡಲಾಗುತ್ತಿತ್ತು. ಎಲ್ಲ ವಿಭಾಗದಲ್ಲೂ ಟಿ20 ಪಂದ್ಯಗಳಿಗೆ ಶೇ. 50 ಸಂಭಾವನೆ ಸಿಗಲಿದೆ. ಅಂದರೆ ಸೀನಿಯರ್ ವಿಭಾಗದಲ್ಲಿ 40ಕ್ಕಿಂತ ಹೆಚ್ಚು ಪಂದ್ಯ ಆಡಿದ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 30 ಸಾವಿರ ರೂ. ಸಿಗಲಿದೆ. ಈ ಮುನ್ನ ಅವರಿಗೆ ಪ್ರತಿ ಟಿ20 ಪಂದ್ಯಕ್ಕೆ 17,500 ರೂ. ನೀಡಲಾಗುತ್ತಿತ್ತು. 16 ವಯೋಮಿತಿಯಿಂದ ಸೀನಿಯರ್ ಹಂತದವರೆಗೆ ಒಟ್ಟಾರೆ 2 ಸಾವಿರಕ್ಕೂ ಅಧಿಕ ಪುರುಷ ಕ್ರಿಕೆಟಿಗರು ಈ ವೇತನ ಹೆಚ್ಚಳದ ಲಾಭ ಪಡೆಯಲಿದ್ದಾರೆ.

    ಮಹಿಳೆಯರ ವೇತನವೂ ಹೆಚ್ಚಳ: ಪುರುಷರ ಜತೆಗೆ ಮಹಿಳಾ ಕ್ರಿಕೆಟಿಗರ ವೇತನವೂ ಏರಿಕೆಯಾಗಿದ್ದು, ಸೀನಿಯರ್ ಮಹಿಳಾ ಕ್ರಿಕೆಟಿಗರ ವೇತನ ಪ್ರತಿದಿನಕ್ಕೆ 20 ಸಾವಿರ ರೂ.ಗೆ ಏರಿಕೆಯಾಗಿದೆ. ಮೀಸಲು ಆಟಗಾರ್ತಿಯರು 10 ಸಾವಿರ ರೂ. ಗಳಿಸಲಿದ್ದಾರೆ. ಈ ಮುನ್ನ ಕ್ರಮವಾಗಿ 12,500 ಮತ್ತು 6,250 ರೂ. ನೀಡಲಾಗುತ್ತಿತ್ತು. 23 ವಯೋಮಿತಿ ಮಹಿಳಾ ಕ್ರಿಕೆಟಿಗರು ಮತ್ತು 19/16 ವಯೋಮಿತಿ ಮಹಿಳಾ ಕ್ರಿಕೆಟಿಗರ ವೇತನವೂ 10 ಸಾವಿರ ರೂ.ಗೆ ಏರಿಕೆಯಾಗಿದೆ.

    ಕಿರಿಯ ಕ್ರಿಕೆಟಿಗರಿಗೂ ಹೈಕ್
    ಸೀನಿಯರ್ ಕ್ರಿಕೆಟಿಗರಲ್ಲದೆ, ಕಿರಿಯ ಕ್ರಿಕೆಟಿಗರಿಗೂ ವೇತನ ಹೆಚ್ಚಳವಾಗಿದ್ದು, 23 ವಯೋಮಿತಿ ಆಟಗಾರರು ಪ್ರತಿದಿನಕ್ಕೆ 25 ಸಾವಿರ ರೂ. ಸಂಭಾವನೆ ಪಡೆಯಲಿದ್ದಾರೆ. ಮೀಸಲು ಆಟಗಾರರು 12,500 ರೂ. ಗಳಿಸಲಿದ್ದಾರೆ. ಈ ಮುನ್ನ ಕ್ರಮವಾಗಿ 17,500 ಮತ್ತು 8,750 ರೂ. ನೀಡಲಾಗುತ್ತಿತ್ತು. ಇನ್ನು 19 ವಯೋಮಿತಿ ಆಟಗಾರರ ವೇತನ ಪ್ರತಿದಿನಕ್ಕೆ 20 ಸಾವಿರ ರೂ.ಗೆ ಏರಿಕೆಯಾಗಿದ್ದು, ಮೀಸಲು ಆಟಗಾರರು 10 ಸಾವಿರ ರೂ. ಗಳಿಸಲಿದ್ದಾರೆ. ಈ ಮುನ್ನ 10,500 ಮತ್ತು 5,250 ರೂ. ನೀಡಲಾಗುತ್ತಿತ್ತು. 16 ವಯೋಮಿತಿ ಆಟಗಾರರ ವೇತನ 7 ಸಾವಿರ ರೂ.ಗೆ ಏರಿಕೆಯಾಗಿದೆ. ಮೀಸಲು ಆಟಗಾರರು 3,500 ರೂ. ಗಳಿಸಲಿದ್ದಾರೆ. ಈ ಮುನ್ನ ಕ್ರಮವಾಗಿ 3,500 ಮತ್ತು 1,750 ರೂ. ನೀಡಲಾಗುತ್ತಿತ್ತು.

    ಶೇ. 50 ಪರಿಹಾರ
    ಕೋವಿಡ್ ಹಾವಳಿಯಿಂದಾಗಿ 2020-21ರ ಸಾಲಿನ ರಣಜಿ ಟ್ರೋಫಿ ರದ್ದುಗೊಂಡಿದ್ದಕ್ಕೆ ಆಟಗಾರರ ಸಂಭಾವನೆಯ ಶೇ. 50 ಪರಿಹಾರ ನೀಡಲು ಬಿಸಿಸಿಐ ನಿರ್ಧರಿಸಿದೆ. 2019-20ರ ಸಾಲಿನಲ್ಲಿ ಆಡಿದ್ದ ಎಲ್ಲ ಆಟಗಾರರಿಗೂ ಈ ಪರಿಹಾರ ಮೊತ್ತ ಸಿಗಲಿದೆ. ರಣಜಿ ಟ್ರೋಫಿ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ರದ್ದುಗೊಂಡಿದ್ದರಿಂದ ದೇಶೀಯ ಕ್ರಿಕೆಟಿಗರು ಆರ್ಥಿಕ ಸಂಕಷ್ಟ ಎದುರಿಸಿದ್ದರು. ಸೀನಿಯರ್ ಮಹಿಳಾ ಟಿ20 ಟೂರ್ನಿ ರದ್ದಾಗಿದ್ದಕ್ಕೂ ಮಹಿಳಾ ಕ್ರಿಕೆಟಿಗರಿಗೆ ಸಂಭಾವನೆಯ ಶೇ. 50 ಪರಿಹಾರ ಸಿಗಲಿದೆ.

    ಅಫ್ಘಾನಿಸ್ತಾನದಲ್ಲಿ ಐಪಿಎಲ್ ಪಂದ್ಯಗಳ ಪ್ರಸಾರ ನಿಷೇಧಿಸಿದ ತಾಲಿಬಾನಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts