More

    ಬಂಗಾಳ ರಾಜ್ಯಪಾಲರನ್ನು ಭೇಟಿಯಾದ ಗಂಗೂಲಿ, ರಾಜಕೀಯ ವಲಯದಲ್ಲಿ ಕೌತುಕ

    ಕೋಲ್ಕತ: ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಭಾನುವಾರ ಸಂಜೆ ದಿಢೀರನೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್‌ಖರ್ ಅವರನ್ನು ಭೇಟಿಯಾಗಿ ಒಂದು ಗಂಟೆ ಕಾಲ ಮಾತುಕತೆ ನಡೆಸಿದರು. ಇದೊಂದು ಸೌಹಾರ್ದ ಭೇಟಿ ಎಂದು ಹೇಳಲಾಗಿದ್ದರೂ, ಮುಂಬರುವ ಅಸೆಂಬ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಈ ಭೇಟಿಯ ಬಗ್ಗೆ ವಿಶೇಷ ಕೌತುಕ ಹರಡಿದೆ.

    ಮುಂದಿನ ವರ್ಷ ಏಪ್ರಿಲ್-ಮೇನಲ್ಲಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಸೌರವ್ ಗಂಗೂಲಿ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ಈಗಾಗಲೆ ರಾಜಕೀಯ ವಲಯದಲ್ಲಿ ಸುದ್ದಿಗಳು ಹರಿದಾಡಿವೆ. ಬಂಗಾಳದಲ್ಲಿ ಬಿಜೆಪಿಗೆ ಬಹುಮತ ಬಂದರೆ ಗಂಗೂಲಿ ಮುಖ್ಯಮಂತ್ರಿಯೂ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಗಂಗೂಲಿ ರಾಜ್ಯಪಾಲರನ್ನು ಭೇಟಿಯಾಗಿರುವುದಕ್ಕೆ ಹಲವು ಆಯಾಮಗಳನ್ನು ನೀಡಿ ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ ರಾಜಭವನ ಈಗ ಬಿಜಿಪಿಯ ಮುಖ್ಯಕಚೇರಿಯಂತಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಆರೋಪಿಸಿತ್ತು.

    ಇದನ್ನೂ ಓದಿ: ಕೋಟ್ಲಾ ಸ್ಟೇಡಿಯಂನಿಂದ ತನ್ನದೇ ಹೆಸರು ತೆಗೆಸಲು ಬಿಷನ್ ಸಿಂಗ್ ಬೇಡಿ ಹೋರಾಟ!

    ರಾಜ್ಯಪಾಲರನ್ನು ಭೇಟಿಯಾಗಿರುವುದಕ್ಕೆ ಸ್ಪಷ್ಟವಾದ ಕಾರಣವನ್ನು ಗಂಗೂಲಿ ತಿಳಿಸಿಲ್ಲ. ಆದರೆ ರಾಜ್ಯಪಾಲ ಜಗದೀಪ್ ಧನ್‌ಖರ್, ಭೇಟಿಯ ವೇಳೆ ನಾವು ‘ವಿವಿಧ ವಿಷಯ’ಗಳ ಕುರಿತು ಚರ್ಚಿಸಿದೆವು ಎಂದು ಹೇಳಿದ್ದಾರೆ. ಇದೇ ವೇಳೆ ಗಂಗೂಲಿ, ಈಡನ್ ಗಾರ್ಡನ್ಸ್ ಕ್ರೀಡಾಂಗಣಕ್ಕೆ ಬರುವಂತೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ದು, ಅದನ್ನು ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

    ಗಂಗೂಲಿ ಭೇಟಿಯ ಹಿಂದೆ ಯಾವುದೇ ರಾಜಕೀಯ ಬೆಳವಣಿಗೆಗಳ ಸಂಬಂಧ ಇಲ್ಲ ಎಂದು ರಾಜಭವನದ ಮೂಲಗಳು ತಿಳಿಸಿವೆ. ಜಗದೀಪ್ ಧನ್‌ಖರ್ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ 17 ತಿಂಗಳಲ್ಲಿ ಗಂಗೂಲಿ ಮೊದಲ ಬಾರಿಗೆ ಭೇಟಿಯಾಗಿದ್ದು, ರಾಜ್ಯಪಾಲರೇ ಸ್ವತಃ ಗಂಗೂಲಿಗೆ ಆಹ್ವಾನ ನೀಡಿದ್ದರು ಎನ್ನಲಾಗುತ್ತಿದೆ.

    ಇದನ್ನೂ ಓದಿ: ಶ್ರೀಶಾಂತ್ ಸೇರ್ಪಡೆಗೆ ಹಲವು ಐಪಿಎಲ್ ತಂಡಗಳ ಆಸಕ್ತಿ!

    ಗಂಗೂಲಿ ಈಗಾಗಲೆ ಬಿಜೆಪಿ ಜತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಬಿಸಿಸಿಐ ಅಧ್ಯಕ್ಷ ಪಟ್ಟ ಏರುವ ಮುನ್ನ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಆಪ್ತರಾಗಿದ್ದರು. ಬಿಜೆಪಿ ಬೆಂಬಲದಿಂದಲೇ ಅವರಿಗೆ ಬಿಸಿಸಿಐ ಅಧ್ಯಕ್ಷ ಪಟ್ಟಕ್ಕೇರುವುದು ಕೂಡ ಸುಲಭವಾಗಿತ್ತು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ದುರ್ಗಾ ಪೂಜೆಯಲ್ಲಿ ಗಂಗೂಲಿ ಪತ್ನಿ ಹಾಗೂ ಖ್ಯಾತ ಒಡಿಸ್ಸಿ ನೃತ್ಯ ಕಲಾವಿದೆ ಡೋನಾ ಅವರು ಕಾರ್ಯಕ್ರಮ ನೀಡಿದ್ದರು. ಬಂಗಾಳದ ಚುನಾವಣೆ ‘ದೀದಿ ವರ್ಸಸ್ ದಾದಾ’ ಆಗಲಿದೆ ಎಂದೂ ಹೇಳಲಾಗುತ್ತಿದೆ.

    ಮೆಲ್ಬೋರ್ನ್ ಟೆಸ್ಟ್‌ಗೆ ‘ಬಾಕ್ಸಿಂಗ್ ಡೇ’ ಹೆಸರು ಹೇಗೆ ಬಂತು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts