

ಮುಂಬೈ: ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಚೀನಾದಲ್ಲಿ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಭಾಗವಹಿಸಲು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಅನುಮತಿ ನೀಡಲಾಗಿದೆ.
ಸೆಪ್ಟೆಂಬರ್ 19ರಿಂದ ಶುರುವಾಗುವ ಮಹಿಳೆಯರ ಕ್ರಿಕೆಟ್ಗೆ ಪೂರ್ಣ ಶ್ರೇಣಿಯ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಸೆಪ್ಟೆಂಬರ್ 27ರಂದು ಆರಂಭವಾಗಲಿರುವ ಪುರುಷರ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಎರಡನೇ ಶ್ರೇಣಿಯ ತಂಡ ಭಾಗವಹಿಸಲಿದೆ.
ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಮೂರು ಬಾರಿ ಕ್ರಿಕೆಟ್ ಆಡಲಾಗಿದೆ. 2014ರಲ್ಲಿಕೊನೆಯದಾಗಿ ಇಂಚಿಯಾನ್‌ನಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆದಿದ್ದವು. ಆ ವರ್ಷ ಭಾರತ ಕ್ರಿಕೆಟ್ ತಂಡ ಭಾಗವಹಿಸಿರಲಿಲ್ಲ.
ಅಕ್ಟೋಬರ್ 5ರಂದು ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಈ ನಿಟ್ಟಿನಲ್ಲಿ ಬಿಸಿಸಿಐ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಆಟಗಾರರನ್ನು ಕಣಕ್ಕಿಳಿಸಬೇಕಿದೆ.
ಪರಿಣಾಮಕಾರಿ ಯೋಜನೆ, ಸಂವಹನ ಮತ್ತು ಸಮನ್ವಯದ ಮೂಲಕ ಬಿಸಿಸಿಐ ಈ ಸವಾಲುಗಳನ್ನು ಯಶಸ್ವಿಯಾಗಿ ನೀಗಿಸುವ ಗುರಿಯನ್ನು ಹೊಂದಿದೆ. ಭಾರತ ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ಪುರುಷರು ಮತ್ತು ಮಹಿಳೆಯರ ತಮಡವನ್ನು ಏಷ್ಯನ್ ಗೇಮ್ಸ್ನಲ್ಲಿ ಕಣಕ್ಕಿಳಿಸಲು ಯೋಜಿಸಲಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.