More

    ಆಸ್ತಿ ತೆರಿಗೆ ಹೆಚ್ಚಳಕ್ಕೆ ಬಿಬಿಎಂಪಿ ಸಿದ್ಧತೆ

    ಬೆಂಗಳೂರು: ಹದಗೆಟ್ಟಿರುವ ಬಿಬಿಎಂಪಿಯ ಆಥಿರ್ಕ ಪರಿಸ್ಥಿತಿಯನ್ನು ಹಳಿಗೆ ತರಲು ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಿದ್ಧತೆ ನಡೆಸಲಾಗಿದೆ.
    ಜನಪ್ರತಿನಿಧಿಗಳ ಅವಧಿ ಮುಗಿಯುತ್ತಿದ್ದಂತೆ, ಬಿಬಿಎಂಪಿ ಆಥಿರ್ಕ ಪರಿಸ್ಥಿತಿ ಸದೃಢಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಕರ್ನಾಟಕ ಮುನ್ಸಿಪಲ್​ ಕಾಯ್ದೆ ಪ್ರಕಾರ ಪ್ರತಿ 3 ವರ್ಷಕ್ಕೊಮ್ಮೆ ಸ್ಥಳಿಯ ನಗರಾಡಳಿತವು ತನ್ನ ವ್ಯಾಪ್ತಿಯ ಆಸ್ತಿಗಳ ತೆರಿಗೆ ಹೆಚ್ಚಳ ಮಾಡಬೇಕಿದೆ. ಅದರಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2016&17ನೇ ಸಾಲಿನಲ್ಲಿ ಶೇ. 20ರಿಂದ 25 ತೆರಿಗೆ ಹೆಚ್ಚಳ ಮಾಡಲಾಗಿತ್ತು. ನಿಯಮದಂತೆ 2019&20ನೇ ಸಾಲಿನಲ್ಲಿ ತೆರಿಗೆ ಹೆಚ್ಚಳ ಮಾಡಬೇಕಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ಬಿಬಿಎಂಪಿ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ಆ ಕ್ರಮಕ್ಕೆ ಕೈ ಹಾಕಿರಲಿಲ್ಲ. ಇದೀಗ ಜನಪ್ರತಿನಿಧಿಗಳಿಲ್ಲದ ಕಾರಣ ಅಧಿಕಾರಿಗಳು ತೆರಿಗೆ ಹೆಚ್ಚಳದ ಕಡೆಗೆ ಗಮನಹರಿಸಿದ್ದಾರೆ.

    ತೆರಿಗೆ ಸಂಗ್ರಹ ಪ್ರಮಾಣ:

    ವರ್ಷ ಸಂಗ್ರಹಣೆ  (ಕೋಟಿ ರೂ.ಗಳಲ್ಲಿ)
    2010&11       1,008
    2011&12       1,210
    2012&13       1,358
    2013&14       1,323
    2014&15       1,810
    2015&16       1,960
    2016&17       2,179
    2017&18       2,173
    2018&19       2,554
    2019&20       2,669
    2020&21       1850 (ಆಗಸ್ಟ್​ ಅಂತ್ಯದವರೆಗೆ)

    ಶೇ. 20ರಿಂದ 25 ಹೆಚ್ಚಳ?:
    ಆಸ್ತಿ ತೆರಿಗೆ ಹೆಚ್ಚಳ ಕುರಿತಂತೆ ಕಳೆದ ವರ್ಷವೇ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅದಕ್ಕೆ ಸರ್ಕಾರ ಅನುಮೋದನೆ ನೀಡಿರಲಿಲ್ಲ. ಅದಾದ ನಂತರ ಇದೀಗ ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ಆಯುಕ್ತರು ತೆರಿಗೆ ಹೆಚ್ಚಳದ ಬಗ್ಗೆ ಚರ್ಚೆ ನಡೆಸಿದ್ದಾರೆ. ಈಗಿನ ತೆರಿಗೆ ಮೇಲೆ ಶೇ. 20ರಿಂದ 25 ಹೆಚ್ಚಳ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ. ಅಷ್ಟಾಗದಿದ್ದರೂ, ಶೇ. 15 ತೆರಿಗೆ ಹೆಚ್ಚಳ ಮಾಡುವಂತೆ ಕೋರಲೂ ಚಚಿರ್ಸಲಾಗಿದೆ.

    ಕೆಎಂಸಿ ಕಾಯ್ದೆಯಂತೆ ಪ್ರತಿ 3 ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಳಕ್ಕೆ ಅವಕಾಶವಿದೆ. ತೆರಿಗೆ ಹೆಚ್ಚಳಕ್ಕೆ ಕೌನ್ಸಿಲ್​ನಲ್ಲಿ 2 ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ, ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಆಡಳಿತಾಧಿಕಾರಿಗಳಿಂದ ಒಪ್ಪಿಗೆ ಪಡೆದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
    ಎನ್​. ಮಂಜುನಾಥಪ್ರಸಾದ್​, ಬಿಬಿಎಂಪಿ ಆಯುಕ್ತ

    ಇನ್ನಿತರ ಆದಾಯಕ್ಕೂ ಒತ್ತು:
    ಯಾವುದೇ ಪ್ರಮಾಣದ ಆಸ್ತಿ ತೆರಿಗೆ ಹೆಚ್ಚಳಕ್ಕೆ ಅನುಮತಿಸದಿದ್ದರೆ, ಹೊಸ ಕಟ್ಟಡಗಳಿಗೆ ಸ್ವಾಧಿನಾನುಭವ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಹೆಚ್ಚುವರಿ ತೆರಿಗೆ ವಸೂಲಿಗೆ ಅನುಮತಿಸುವಂತೆ ಸರ್ಕಾರಕ್ಕೆ ಕೋರಲಾಗುತ್ತದೆ. ಅಲ್ಲದೆ, ಖಾತಾ ವರ್ಗಾವಣೆ ಶುಲ್ಕದಲ್ಲಿ ಶೇ. 2ರಿಂದ 5 ಹೆಚ್ಚಳ, ನತ್ಯಾಜ್ಯ ಉಪಕರ ಹೆಚ್ಚಳ, ಭೂ ಸಾರಿಗೆ ಉಪಕರ ವಸೂಲಿಗೆ ಅವಕಾಶ ನೀಡುವಂತೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲು ಚಿಂತನೆ ನಡೆಸಲಾಗಿದೆ.
    ಆದಾಯವಿಲ್ಲದಿದ್ದರೆ ದಿವಾಳಿ?:
    ಸದ್ಯ ಬಿಬಿಎಂಪಿ ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳ ಪೈಕಿ ಪೂರ್ಣಗೊಂಡಿರುವ ಕಾಮಗಾರಿಗಳು, ಚಾಲ್ತಿಯಲ್ಲಿರುವ ಕಾಮಗಾರಿಗಳು ಹಾಗೂ ಕಾರ್ಯಾದೇಶ ನೀಡಿ ಆರಂಭವಾಗಬೇಕಿರುವ ಕಾಮಗಾರಿಗಳಿಗಾಗಿಯೇ 11,609.86 ಕೋಟಿ ರೂ. ಬೇಕಿದೆ. ಇದು ಬಿಬಿಎಂಪಿ ಬಜೆಟ್​ ಗಾತ್ರಕ್ಕಿಂತ ಹೆಚ್ಚಾದುದಾಗಿದೆ. ಹೀಗಾಗಿ ಬಿಬಿಎಂಪಿಗೆ ಆದಾಯ ವೃದ್ಧಿ ಮಾಡಬೇಕಿದ್ದು, ಅದಕ್ಕೆ ಆಸ್ತಿ ತೆರಿಗೆ ಹೆಚ್ಚಳ ಪ್ರಮುಖ ಮಾರ್ಗವಾಗಿದೆ.

    8 ವರ್ಷಗಳ ಬಳಿಕ ಹೆಚ್ಚಳವಾಗಿತ್ತು:
    ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿಯಾಗಿ ಪರಿವರ್ತನೆಗೊಂಡ ನಂತರದಿಂದ ತೆರಿಗೆ ಹೆಚ್ಚಳ ಮಾಡಿರಲಿಲ್ಲ. 2008ರಲ್ಲಿ ತೆರಿಗೆ ಹೆಚ್ಚಳ ಮಾಡಲಾಗಿತ್ತು. ಅದಾದ ನಂತರ ಬಿಬಿಎಂಪಿ ಚುನಾವಣೆ ಕಾರಣದಿಂದ ತೆರಿಗೆ ಹೆಚ್ಚಳವಾಗಿರಲಿಲ್ಲ. ಆದರೆ, 2013ರಲ್ಲಿ ತೆರಿಗೆ ಹೆಚ್ಚಿಸಬೇಕಿತ್ತು. ಆದರೆ, ವಿಧಾನಸಭೆ, ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆಗಳು ಎದುರಾದ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಳಕ್ಕೆ ಮುಂದಾಗಿರಲಿಲ್ಲ. 2015ರಲ್ಲಿ ಬಿಬಿಎಂಪಿ ಚುನಾವಣೆ ನಡೆದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಆಡಳಿತ 2016&17ರಿಂದ ತೆರಿಗೆ ಹೆಚ್ಚಳ ಮಾಡಿ ಕ್ರಮ ಕೈಗೊಂಡಿತ್ತು.

    ಭಾರತದಲ್ಲಿ ಸೈಬರ್ ಕ್ರೈಂ 500% ಹೆಚ್ಚಳ: ಎನ್​ಎಸ್​ಎ ಅಜಿತ್ ದೋವಲ್ ಕಳವಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts