More

    ಬಿಬಿಎಂಪಿ: ವಿಪತ್ತು ನಿರ್ವಹಣೆಗೆ ವಾರ್ಡ್‌ಗೊಬ್ಬ ಇಂಜಿನಿಯರ್‌ಗೆ ಜವಾಬ್ದಾರಿ

    ಬೆಂಗಳೂರು: ರಾಜಧಾನಿಯಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆ ಇನ್ನೂ ಕೆಲ ದಿನ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆಗಾಗಿ ವಾರ್ಡ್‌ಗೊಬ್ಬ ಇಂಜಿನಿಯರ್‌ಗೆ ಜವಾಬ್ದಾರಿ ವಹಿಸುವ ನಿರ್ಧಾರವನ್ನು ಬಿಬಿಎಂಪಿ ಕೈಗೊಂಡಿದೆ.

    ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮಂಗಳವಾರ ಹಿರಿಯ ಅಧಿಕಾರಿಗಳೊಂದಿಗೆ ವರ್ಚುಯಲ್ ಮೂಲಕ ತುರ್ತು ಸಭೆ ನಡೆಸಿದ ವೇಳೆ ಅವರು, ಈ ಸೂಚನೆಯನ್ನು ನೀಡಿದರು. ತಕ್ಷಣವೇ ಆಯಾ ವಾರ್ಡ್‌ಗಳಿಗೆ ಇಂಜಿನಿಯರ್‌ಗಳನ್ನು ನಿಯೋಜಿಸುವಂತೆ ವಲಯ ಆಯುಕ್ತರುಗಳಿಗೆ ಸೂಚಿಸಿದರು.

    ವಿಪತ್ತು ನಿರ್ವಹಣೆ, ರಸ್ತೆಗುಂಡಿ, ಕಸದ ಸಮಸ್ಯೆ, ಪಾದಚಾರಿ ಮಾರ್ಗ ದುರಸ್ತಿಪಡಿಸುವ ಸಲುವಾಗಿ ಪ್ರತಿ ವಾರ್ಡ್‌ನಲ್ಲೂ ಪ್ರತ್ಯೇಕವಾಗಿ ಒಬ್ಬೊಬ್ಬ ಇಂಜಿನಿಯರ್ ಗೆ ಜವಾಬ್ದಾರಿ ವಹಿಸಬೇಕು. ಬೆಸ್ಕಾಂ, ಮೆಟ್ರೋ, ಜಲಮಂಡಳಿ ಕೆಲಸ ನಡೆಯುವ ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಸ್ಥಳದಲ್ಲಿ ಸಮಸ್ಯೆ ಇದ್ದರೆ ಅದಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿ ನಂತರ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜತೆಗೆ ಸಂಬಂಧಪಟ್ಟ ಇಲಾಖೆಗಳಿಗೆ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.

    ರಸ್ತೆ ಮೇಲೆ ನೀರು ನಿಲ್ಲದಂತೆ ನಿಗಾ ವಹಿಸಿರಿ:

    ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ನಗರದಲ್ಲಿ ಇನ್ನೂ 2-3 ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಳೆಹಾನಿ ತಡೆಗೆ ಎಲ್ಲ ಅಧಿಕಾರಿಗಳು ಸಜ್ಜಾಗಿರಬೇಕು. ಜೋರು ಮಳೆಯಾಗುವ ವೇಳೆ ರಸ್ತೆಗಳ ಮೇಲೆ ನೀರು ನಿಂತು ವಾಹನಗಳ ಸಂಚಾರಕ್ಕೆ ಹೆಚ್ಚು ಸಮಸ್ಯೆಯಾಗುತ್ತದೆ. ಹೀಗಾಗಿ ರಸ್ತೆ ಮೇಲೆ ಬೀಳುವ ಮಳೆನೀರು ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ಶೋಲ್ಡರ್ ಡ್ರೈನ್‌ಗಳ ಬಳಿ ಸ್ವಚ್ಚಗೊಳಿಸಬೇಕು ಎಂದು ಸೂಚಿಸಿದರು.

    ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಅಳವಡಿಸಿರುವ ತಾತ್ಕಾಲಿಕ ಬ್ಯಾರಿಕೇಡ್‌ಗಳಿಂದ ಕೆಲವೆಡೆ ಮಳೆ ನೀರು ನಿಲ್ಲುತ್ತದೆ. ಇದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗಲಿದ್ದು, ಮೆಟ್ರೊ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಸರ್ವೀಸ್ ರಸ್ತೆಗಳಲ್ಲಿ ನೀರು ನಿಲ್ಲದಂತೆ ನಿಗಾ ವಹಿಸಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಜಲಾವೃತವಾಗುವ ಸ್ಥಳಗಳಲ್ಲಿ ಪಂಪ್‌ಗಳನ್ನಿಟ್ಟು ನೀರು ತೆರವುಗೊಳಿಸಬೇಕು. ರಸ್ತೆ ಬದಿ ಚರಂಡಿ ಹಾಗೂ ರಾಜಕಾಲುವೆಗಳಲ್ಲಿ ಹೂಳನ್ನು ತೆರವುಗೊಳಿಸುತ್ತಿರಬೇಕು. ಅಂತಹ ಹೂಳನ್ನು ಕೂಡಲೆ ಸ್ಥಳದಿಂದ ತೆರವು ಮಾಡಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

    ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್‌ ಚಂದ್ರ, ಎಲ್ಲ ವಲಯ ಆಯುಕ್ತರು, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಅಗ್ನಿ ಶಾಮಕ ಇಲಾಖೆ, ಎನ್‌ಡಿಆರ್‌ಎಫ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಮನೆಗಳಿಗೆ ನೀರು ನುಗ್ಗಿರುವ ಪಟ್ಟಿ ಸಿದ್ದಪಡಿಸಿ:
    ನಗರದಲ್ಲಿ ಮಳೆಯಿಂದ ಅನಾಹುತ ಸಂಭವಿಸಿರುವ ವಿವರಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಆಯಾ ವಲಯದಲ್ಲಿ ಎಷ್ಟು ಮನೆಗಳಿಗೆ ನೀರು ನುಗ್ಗಿದೆ ಎಂಬುದನ್ನು ಗುರುತಿಸಿ ಪರಿಹಾರ ನೀಡುವ ಕೆಲಸ ಮಾಡಬೇಕು. ಈ ಸಂಬಂಧ ಯಾವ ವಲಯದಲ್ಲಿ ಎಷ್ಟು ಮನೆಗಳಿಗೆ ನೀರು ನುಗ್ಗಿದೆ ಎಂಬ ಪಟ್ಟಿಯನ್ನು ಸಿದ್ದಪಡಿಸಲು ಆಯಾ ವಲಯ ಆಯುಕ್ತರಿಗೆ ಸೂಚಿಸಲಾಗಿದೆ.

    ಸ್ಲೂಯಿಸ್ ಗೇಟ್ ತೆಗೆಯಲು ಸೂಚನೆ:
    ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಬೆಳ್ಳಂದೂರು ಹಾಗೂ ವರ್ತೂರು ಕೆರೆಗೆ ಅಳವಡಿಸಿರುವ ಸ್ಲೂಯಿಸ್ ಗೇಟ್‌ಗಳನ್ನು ಕೂಡಲೇ ತೆಗೆದು ನೀರನ್ನು ಹೊರಬಿಡುವಂತೆ ಬಿಡಿಎ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಕೇಶ್ ಸಿಂಗ್ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು.

    ರಸ್ತೆಗುಂಡಿ ಮುಚ್ಚಲು ತಾಕೀತು:
    ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಬೇಕು. ರಸ್ತೆಗುಂಡಿ ಮುಚ್ಚಲು ಟೆಂಡರ್ ಪ್ರಕ್ರಿಯೆ ನಡೆಯದಿದ್ದರೆ ಕೂಡಲೆ ಟೆಂಡರ್ ಆಹ್ವಾನಿಸಿ ರಸ್ತೆಗುಂಡಿಗಳನ್ನು ಮುಚ್ಚಬೇಕು. ಮಳೆಗಾಲದ ವೇಳೆ ಕೋಲ್ಡ್ ಮಿಕ್ಸ್‌ಅನ್ನು ಬಳಸಿ ಗುಂಡಿಗಳನ್ನು ಮುಚ್ಚಲು ಎಲ್ಲ ವಲಯಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts