More

    ಪಾಶ್ಚಾತ್ಯ ಸಂಸ್ಕೃತಿಯಿಂದ ದೂರವಿರಿ

    ಕಿಕ್ಕೇರಿ: ಪಾಶ್ಚಾತ್ಯ ಸಂಸ್ಕೃತಿಯಿಂದ ದೂರವಾಗಿ, ನಮ್ಮ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೇಬಿ ಬೆಟ್ಟದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.

    ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಗುರುವಾರ ಲೋಕಾರ್ಪಣೆಗೊಂಡ ಬಸವೇಶ್ವರ ಹಾಗೂ ಲಕ್ಷ್ಮೀದೇವಿ ದೇಗುಲ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಪ್ರತಿ ಗ್ರಾಮಗಳಲ್ಲಿ ನೆಮ್ಮದಿ ನೀಡುವ ತಾಣ ದೇಗುಲವಾಗಿದೆ. ಪ್ರಸ್ತುತ ಧಾರ್ಮಿಕ ಚಿಂತನೆ ಜತೆಗೆ ಅಧಃಪತನವಾಗುತ್ತಿರುವ ನೈತಿಕತೆ ಉಳಿಸಿ ಬೆಳೆಸಿಕೊಳ್ಳಲು ಶ್ರೀಗಳ, ಮಠಮಾನ್ಯಗಳ ಪಾತ್ರ ದೊಡ್ಡದಿದೆ. ನಮ್ಮ ದೇಶದ ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ಕಲಿಯಲು ವಿದೇಶಿಗರು ಮುಗಿಬೀಳುತ್ತಿರುವುದು ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಬಿಂಬಿಸುತ್ತಿದೆ ಎಂದರು.

    ಹಳೆಯ ದೇಗುಲಗಳನ್ನು ನವೀಕರಣಗೊಳಿಸಲು ಎಲ್ಲೆಡೆ ಗ್ರಾಮಸ್ಥರು ಮುಂದಾಗುತ್ತಿರುವುದು ದೇಶ, ಗ್ರಾಮದ ನೆಮ್ಮದಿ, ಶಾಂತಿಗೆ ಕಾರಣವಾಗಲಿದೆ ಎಂದು ನುಡಿದರು.

    ಬಾಳೆಹೊನ್ನೂರು ಶಾಖಾ ಮಠ ತೆಂಡೆಕೆರೆಯ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವನ ಅಂತರಂಗ, ಬಹಿರಂಗ ಶುದ್ಧಿಗೊಳಿಸಲು ಭಗವಂತನ ಆರಾಧನೆ ಮುಖ್ಯ. ಭಗವಂತನಿಗೆ ಬೇಕಿರುವುದು ಆಡಂಬರದ ಪೂಜೆಯಲ್ಲ. ಹಳ್ಳಿಯ ಜನರಲ್ಲಿ ಭಗವಂತನ ಮೇಲೆ ಅಪಾರ, ನಿರ್ಮಲವಾದ ಭಕ್ತಿ ಇದೆ. ಕಷ್ಟ-ಸುಖ ಎರಡನ್ನೂ ಸ್ವೀಕರಿಸುವ ಮುಗ್ಧಜನರಾಗಿದ್ದಾರೆ. ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ, ಪೂರ್ವಜರು ಹಾಕಿಕೊಟ್ಟಿರುವ ಸಂಸ್ಕೃತಿ, ಪರಂಪರೆ ಉಳಿಸಿಕೊಂಡು ಯೋಗ, ಧ್ಯಾನದಲ್ಲಿ ಆಸಕ್ತಿ ತೋರಬೇಕಿದೆ ಎಂದು ತಿಳಿಹೇಳಿದರು.

    ಶಾಸಕ ಎಚ್.ಟಿ.ಮಂಜು ಮಾತನಾಡಿ, ಧರ್ಮದಲ್ಲಿ ಸಂಘರ್ಷ ಬೇಡ. ಗ್ರಾಮದ ನೆಮ್ಮದಿಯ ಸಂಕೇತ ದೇಗುಲವಾಗಿದ್ದು, ನಿತ್ಯ ಪೂಜಾರಾಧನೆಯಿಂದ ಗ್ರಾಮದಲ್ಲಿ ಐಕ್ಯತೆ, ಸಾಮರಸ್ಯ ಖಂಡಿತ ಲಭಿಸಲಿದೆ ಎಂದರು.

    ಕಾಪನಹಳ್ಳಿ ಗವಿಮಠದ ಸ್ವತಂತ್ರ ಚನ್ನವೀರ ಸ್ವಾಮೀಜಿ, ಬೇಬಿಮಠ ರಾಮೇಶ್ವರಯೋಗಿ ಮಠದ ಬಸವ ಸ್ವಾಮೀಜಿ, ಆರ್‌ಟಿಒ ಮಲ್ಲಿಕಾರ್ಜುನ, ಸುರೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಧನಂಜಯಕುಮಾರ್, ಮುಖಂಡರಾದ ದಿಂಕಾ ಮಹೇಶ್, ಈರಪ್ಪ, ಚಂದ್ರೇಗೌಡ, ಹರಳುಕುಪ್ಪೆ ಪ್ರತಾಪ್, ಲಿಂಗಾಪುರ ಗ್ರಾಮಸ್ಥರು, ಬಸವೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟಿಗಳು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts