More

    ಸಮಾನವೇತನ ನೀಡಲು ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ

    ಬಸವನಬಾಗೇವಾಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ಸಮಾನ ಮೂಲ ವೇತನ ನೀಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಬಂದ್ ಕರೆಯ ಹಿನ್ನೆಲೆ ಬಸವನಬಾಗೇವಾಡಿ ಬಸ್ ನಿಲ್ದಾಣ ಆವರಣದಲ್ಲಿ ಸ್ವಯಂ ಪ್ರೇರಿತವಾಗಿ ಕೆಎಸ್‌ಆರ್‌ಟಿಸಿ ನೌಕರರು ಬಸ್ ಏರದೆ ಬಸ್ ಸಂಚಾರ ಸ್ಥಗಿತಗೊಳಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಸಾರಿಗೆ ನೌಕರರಿಗೆ ಬೆಂಬಲ ನೀಡಿದ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೆಎಸ್‌ಆರ್‌ಟಿಸಿ ನೌಕರಸ್ಥರಿಗೆ ಅತ್ಯಂತ ಕಡಿಮೆ ಮೂಲ ವೇತನ ಕೊಡುತ್ತಿದ್ದು, ಇದರಿಂದ ಅವರ ಕುಟುಂಬದ ನಿರ್ವಹಣೆ ಕಷ್ಟವಾಗುತ್ತಿದೆ. ರಾಜ್ಯ ಸರ್ಕಾರ ವೇತನ ಹೆಚ್ಚಿಸುವ ಜತೆಗೆ ರಾಜ್ಯ ಸರ್ಕಾರದ ನೌಕರರು ಎಂದು ಪರಿಗಣಿಸಬೇಕೆಂದು ಆಗ್ರಹಿಸಿದರು.

    ಇನ್ನುಳಿದ ಬೇರೆ ಇಲಾಖೆಯ ಸರ್ಕಾರಿ ನೌಕರಸ್ಥರಿಗೆ ಕನಿಷ್ಠ ಮೂಲ ವೇತನ 25 ಸಾವಿರ ರೂಪಾಯಿ ಇದ್ದು, ಆದರೆ, ಕೆಎಸ್‌ಆರ್‌ಟಿಸಿ ನೌಕರರಿಗೆ ಮಾತ್ರ ಕಡಿಮೆ ವೇತನ ನೀಡುತ್ತ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಇವರೆಗೂ ಕೂಡ ಕನಿಷ್ಠ ಮೂಲ ವೇತನ 25 ಸಾವಿರದಷ್ಟು ಹೆಚ್ಚಿಸಬೇಕು. ಮತ್ತು ಕೆಎಸ್‌ಆರ್‌ಟಿಸಿಯಲ್ಲಿ ನೌಕರಿ ಮಾಡುವ ಸಿಬ್ಬಂದಿಗೆ ಗೌರವದಿಂದ ಕಾಣುವ ನಿಟ್ಟಿನಲ್ಲಿ ಹಾಗೂ ಕುಟುಂಬದ ಹಿತ ಕಾಪಾಡಲು ಸರ್ಕಾರ ತನ್ನ ಜವಾಬ್ದಾರಿ ಪ್ರದರ್ಶಿಸಬೇಕೆಂದು ಒತ್ತಾಯಿಸಿದರು.

    ರೈತ ಸಂಘದ ತಾಲೂಕಾಧ್ಯಕ್ಷ ಸಿದ್ರಾಮ ಅಂಗಡಗೇರಿ ಮಾತನಾಡಿದರು. ಕೆಎಸ್‌ಆರ್‌ಟಿಸಿ ನೌಕರರಾದ ಪ್ರಕಾಶ ಚೌಡೇಕರ, ವಾಗು ಲಮಾಣಿ, ಪರಶುರಾಮ ಪೂಜಾರಿ, ಶಿವು ಚಲವಾದಿ, ದೇವು ಲಮಾಣಿ, ಬಿ.ಜಿ. ಮುಲ್ಲಾ, ಶಫೀಕ್ ಹೊನ್ನುಟಗಿ, ಶಿವು ಮಾಳಜಿ, ರಫೀಕ್ ಭಾವಿಕಟ್ಟಿ, ವೈ.ಬಿ. ನಾಗೋಡ, ಸಿ.ಎಲ್. ರಿಸಾಲ್ದಾರ್, ಟಿ.ಬಿ. ಪೂಜಾರಿ, ಜೆ.ಬಿ. ಬೇನಾಳ, ಯಲ್ಲಪ್ಪ ಮಾದರ, ಎಂ.ಪಿ. ಮುರಾಳ, ಎ.ಬಿ. ಕನ್ನೂರ, ಪಿ.ಎಸ್. ಚವಾಣ್, ಸಿ.ಬಿ. ಮೂಕಿಹಾಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts