More

    ವಿಧಾನಸಭೆ ಚುನಾವಣೆಗೆ ಬಸನಗೌಡ ದ್ವಯರಿಗೆ ಕೈ ಟಿಕೆಟ್

    ಶಿವಮೂರ್ತಿ ಹಿರೇಮಠ ರಾಯಚೂರು

    ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಟಿಕೆಟ್ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಕೆಲ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ರಾಯಚೂರು ಗ್ರಾಮೀಣ ಮತ್ತು ಮಸ್ಕಿ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ.

    ಕಾಂಗ್ರೆಸ್ ಹೈಕಮಾಂಡ್ ರಾಜ್ಯದ 124 ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಶನಿವಾರ ಪ್ರಕಟಿಸಿದೆ. ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಶಾಸಕ ಬಸನಗೌಡ ದದ್ದಲ್, ಮಸ್ಕಿ ಕ್ಷೇತ್ರಕ್ಕೆ ಶಾಸಕ ಬಸನಗೌಡ ತುರ್ವಿಹಾಳ ಹೆಸರು ಪ್ರಕಟಿಸಲಾಗಿದೆ. ಮಸ್ಕಿ ಕ್ಷೇತ್ರದಲ್ಲಿ ಬಸನಗೌಡ ತುರ್ವಿಹಾಳ ಹೊರತುಪಡಿಸಿ ಬೇರೆಯವರು ಅರ್ಜಿ ಸಲ್ಲಿಸಲಿರಲಿಲ್ಲ.

    ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಹೆಚ್ಚಿನ ಪೈಪೋಟಿ ಇಲ್ಲದಿದ್ದರೂ, ಚಂದ್ರಶೇಖರ ನಾಯಕ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಪಕ್ಷದಿಂದ ಕೈಗೊಳ್ಳಲಾದ ಸಮೀಕ್ಷೆಯಲ್ಲಿ ಬಸನಗೌಡ ದದ್ದಲ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

    ರಾಯಚೂರು ನಗರ, ಸಿಂಧನೂರು, ಮಾನ್ವಿ, ಲಿಂಗಸುಗೂರು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಹೆಚ್ಚಿನ ಪೈಪೋಟಿಯಿದೆ. ದೇವದುರ್ಗ ಮತ್ತು ಮಾನ್ವಿಯಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಹೆಚ್ಚಿನ ಗೊಂದಲವಿದೆ. ರಾಯಚೂರು ನಗರ ಕ್ಷೇತ್ರದಲ್ಲಿ 17 ಜನರು ಅರ್ಜಿ ಸಲ್ಲಿಸಿದ್ದರೆ, ಸಿಂಧನೂರಿನಲ್ಲಿ ಮೂರು, ಲಿಂಗಸುಗೂರಿನಲ್ಲಿ ಆರು, ಮಾನ್ವಿ ಮತ್ತು ದೇವದುರ್ಗದಲ್ಲಿ ತಲಾ ಐದು ಅರ್ಜಿಗಳು ಸಲ್ಲಿಕೆಯಾಗಿವೆ. ಪಕ್ಷದ ನಾಯಕರು ಗೆಲ್ಲುವ ಅಭ್ಯರ್ಥಿಯತ್ತ ಚಿತ್ತ ಹರಿಸಿದ್ದು, ಸೂಕ್ತ ಅಭ್ಯರ್ಥಿ ಆಯ್ಕೆಗೆ ಪ್ರಯತ್ನ ನಡೆಸಿದ್ದಾರೆ.

    ಕಗ್ಗಂಟಿನ ಪರಿಸ್ಥಿತಿಗೆ ಕಾರಣಗಳೇನು ?: ಲಿಂಗಸುಗೂರಿನಲ್ಲಿ ಶಾಸಕ ಡಿ.ಎಸ್.ಹೂಲಗೇರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಪ್ತರಾಗಿರುವ ಆರ್.ರುದ್ರಯ್ಯ ಪೈಪೋಟಿವೊಡ್ಡಿದ್ದಾರೆ. ಅಸ್ಪಶ್ಯ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಹೂಲಗೇರಿಗೆ ಸಂಕಷ್ಟ ತಂದೊಡ್ಡಿದೆ. ಸಿಂಧನೂರಿನಲ್ಲಿ ಸಂಬಂಧಿಗಳಾದ ಹಂಪನಗೌಡ ಬಾದರ್ಲಿ ಹಾಗೂ ಬಸನಗೌಡ ಬಾದರ್ಲಿ ಜತೆಗೆ ಕುರುಬ ಸಮಾಜದ ಕೆ.ಕರಿಯಪ್ಪ ಪ್ರಬಲ ಆಕಾಂಕ್ಷಿಗಳಾಗಿರುವುದು ವರಿಷ್ಠರಿಗೆ ತಲೆ ನೋವು ತಂದಿದೆ. ಮಾನ್ವಿಯಲ್ಲಿ ಮಾಜಿ ಶಾಸಕ ಹಂಪಯ್ಯ ನಾಯಕ ಜತೆಗೆ ಮಾಜಿ ಸಂಸದ ಬಿ.ವಿ.ನಾಯಕ, ಶರಣಪ್ಪ ಗುಡದಿನ್ನಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ದೇವದುರ್ಗದಲ್ಲಿ ಬಿ.ವಿ.ನಾಯಕ ಸೇರಿ ಒಂದೇ ಕುಟುಂಬದ ಐವರು ಅರ್ಜಿ ಸಲ್ಲಿಸಿದ್ದಾರೆ. ಕಾರ್ಯಕರ್ತರಲ್ಲಿ ಬಿ.ವಿ.ನಾಯಕ ಬಗ್ಗೆ ಒಲವಿದ್ದರೂ, ಬಿ.ವಿ.ನಾಯಕ ರಾಯಚೂರು ಗ್ರಾಮೀಣ ಇಲ್ಲವೇ ಮಾನ್ವಿ ಕ್ಷೇತ್ರದತ್ತ ಕಣ್ಣಿಟ್ಟಿದ್ದರು. ರಾಯಚೂರು ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟಿಸಿರುವುದರಿಂದ ಬಿ.ವಿ.ನಾಯಕ ಮಾನ್ವಿಯತ್ತ ಮಾತ್ರ ಗಮನ ಹರಿಸುವಂತಾಗಿದೆ.

    ರಾಯಚೂರು ನಗರ ಹೈಕಮಾಂಡ್‌ಗೆ ಬಿಸಿತುಪ್ಪ: ರಾಯಚೂರು ನಗರ ಕ್ಷೇತ್ರದ ಟಿಕೆಟ್ ಹಂಚಿಕೆ ಪಕ್ಷದ ಹೈಕಮಾಂಡ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದುವರೆಗೂ ನಡೆದಿರುವ ಚುನಾವಣೆಯಲ್ಲಿ ಪಕ್ಷದ ಅಲ್ಪಸಂಖ್ಯಾತರಿಗೆ ಮಣೆ ಹಾಕುತ್ತಾ ಬಂದಿದ್ದು, ಈ ಬಾರಿ ಅಲ್ಪ ಸಂಖ್ಯಾತರನ್ನು ಹೊರತುಪಡಿಸಿ ಬೇರೆ ಸಮುದಾಯದವರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜುಗೆ ಟಿಕೆಟ್ ಪಕ್ಕಾ ಆಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದರೂ ಮುಸ್ಲಿಂ ಸಮುದಾಯದವರಿಗೇ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ 17 ಜನರ ಪೈಕಿ 10ಕ್ಕೂ ಹೆಚ್ಚು ಜನರು ಮುಸ್ಲಿಮರಾಗಿದ್ದಾರೆ. ಇಬ್ಬರ ಹೆಸರನ್ನು ಹೈಕಮಾಂಡ್ ಪರಿಗಣಿಸಿದ್ದು, ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಲಾಗುವುದು ಎನ್ನುವುದು ಕುತೂಹಲದ ವಿಚಾರವಾಗಿದೆ.

    ಕಳೆದ ಐದು ವರ್ಷಗಳ ನನ್ನ ಕಾರ್ಯನಿರ್ವಹಣೆ ಗುರುತಿಸಿ ಪಕ್ಷದ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಯನ್ನಾಗಿ ಹೆಸರು ಪ್ರಕಟಿಸಿರುವುದು ಖುಷಿ ತಂದಿದೆ. ನಾಯಕರ ನಂಬಿಕೆ ಹಾಗೂ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ಕೆಲಸ ಮಾಡಲಾಗುವುದು.
    | ಬಸನಗೌಡ ದದ್ದಲ್, ಶಾಸಕ, ರಾಯಚೂರು ಗ್ರಾಮೀಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts