More

    ಕಲಾಪದಿಂದ ಹೊರಗುಳಿದ ವಕೀಲರು

    ಶಿವಮೊಗ್ಗ: ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಶಿವಮೊಗ್ಗ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಕೋರ್ಟ್ ಕಲಾಪದಿಂದ ಹೊರಗುಳಿದು ಶುಕ್ರವಾರ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ಕೋರ್ಟ್ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬಾಲರಾಜ ಅರಸ್ ರಸ್ತೆ, ಸೀನಪ್ಪ ಶೆಟ್ಟಿ ವೃತ್ತ, ಅಮೀರ್ ಅಹ್ಮದ್ ವೃತದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ಬಳಿಕ ಸೀನಪ್ಪ ಶೆಟ್ಟಿ ವೃತ್ತಕ್ಕೆ ಮರಳಿ ಪ್ರತಿಭಟನಾ ಸಭೆ ನಡೆಸಿದರು. ಏಕಾಏಕಿ ಪ್ರತಿಭಟನೆಯಿಂದ ವಾಹನ ಸವಾರರು ಪರದಾಡಬೇಕಾಯಿತು. ಪೊಲೀಸರು ವಾಹನ ಸಂಚಾರಕ್ಕೆ ಪ್ರತ್ಯೇಕ ಮಾರ್ಗ ಸೂಚಿಸಿದರೂ ಸುಮಾರು ಒಂದು ತಾಸು ಸಾರ್ವಜನಿಕರಿಗೆ ಸಮಸ್ಯೆಯಾಯಿತು.
    ತಹಸೀಲ್ದಾರ್ ನಾಗರಾಜ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಸ್ಥಳಕ್ಕೆ ತೆರಳಿ ಮನವಿ ಸ್ವೀಕರಿಸಲು ಮುಂದಾದರು. ಇದನ್ನು ಒಪ್ಪದ ವಕೀಲರು ಜಿಲ್ಲಾಧಿಕಾರಿಯೇ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಅಂತಿಮವಾಗಿ ಡಿಸಿ ಡಾ. ಆರ್.ಸೆಲ್ವಮಣಿ ಹಾಗೂ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸ್ಥಳಕ್ಕೆ ತೆರಳಿ ಮನವಿ ಸ್ವೀಕರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.
    ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಂ ಎಂಬುವವರು ಶಿರಸ್ತ್ರಾಣ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಪ್ರೀತಂ ಅವರನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ವಕೀಲರು ಆಗ್ರಹಿಸಿದರು. ವಕೀಲರ ಮೇಲೆ ಹಲ್ಲೆ ಪ್ರಕರಣಗಳು ಪದೇಪದೆ ನಡೆಯುತ್ತಿವೆ. ಹೀಗಾಗಿ ಸರ್ಕಾರ ವಕೀಲರ ರಕ್ಷಣಾ ಕಾಯ್ದೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
    ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಉಪಾಧ್ಯಕ್ಷ ಟಿ.ಎಸ್. ಟೇಕೋಜಿರಾವ್, ಪ್ರಮುಖರಾದ ಎಸ್.ಗಿರೀಶ್, ವೈ.ಬಿ.ಚಂದ್ರಕಾಂತ್, ಮಹೇಂದ್ರಕುಮಾರ್, ಅಶೋಕ್, ಕೆ.ಪಿ.ಶ್ರೀಪಾಲ್, ವಿದ್ಯಾರಾಣಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts