More

    ಗಜೇಂದ್ರಗಡದಲ್ಲಿ ಬಾಣಂತಿ, ಅವಳಿ ಶಿಶು ಸಾವು

    ಗಜೇಂದ್ರಗಡ: ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಅವಳಿ ಶಿಶುಗಳು ಹಾಗೂ ಬಾಣಂತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಪಟ್ಟಣದ ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಮೃತರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
    ಕೊಪ್ಪಳ ಜಿಲ್ಲೆಯ ವಿರುಪಾಪುರದ ನಂದಿನಿ (27) ತವರು ಮನೆಯಾದ ಗಜೇಂದ್ರಗಡಕ್ಕೆ ಹೆರಿಗೆಗೆ ಬಂದಿದ್ದರು. ಫೆ.2ರಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆ ಬಳಿಕ ಅವಳಿ ಶಿಶುಗಳು ಮೃತಪಟ್ಟಿವೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ನಂದಿನಿಯನ್ನು ಬಾದಾಮಿಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಭಾನುವಾರ ರಾತ್ರಿ ಅವರೂ ಮೃತಪಟ್ಟಿದ್ದಾರೆ. ಈ ಸಾವುಗಳಿಗೆ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷೃವೇ ಕಾರಣ ಎಂದು ಆರೋಪಿಸಿ ಕುಟುಂಬದವರು ಆಸ್ಪತ್ರೆಯಲ್ಲಿ ಪ್ರತಿಭಟಿಸಿದರು.
    ‘ವೈದ್ಯರು ಎರಡು ಬಾರಿ ಸ್ಕಾೃನ್ ಮಾಡಿ ಅವಳಿ ಮಕ್ಕಳಿದ್ದು, ತಾಯಿ, ಮಕ್ಕಳ ಆರೋಗ್ಯ ಚೆನ್ನಾಗಿದೆ. ಶಸ್ತ್ರಚಿಕಿತ್ಸೆ ಮಾಡಿಯೇ ಹೆರಿಗೆ ಮಾಡಿಬೇಕಿದೆ ಎಂದು ತಿಳಿಸಿದ್ದರು. ಇದಕ್ಕೆ ನಾವು ಒಪ್ಪಿಗೆ ನೀಡಿದ್ದೆವು. ಆದರೆ ಫೆ. 2ರಂದು ಹೆರಿಗೆ ಬಳಿಕ ಎರಡೂ ಶಿಶುಗಳು ಮೃತಪಟ್ಟಿವೆ. ಬಾಣಂತಿಯನ್ನು ಬಾದಾಮಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಅಲ್ಲಿ ಎರಡು ದಿನ ಚಿಕಿತ್ಸೆ ಕೊಡಿಸಲಾಗಿದೆ. ಆದರೂ ನಂದಿನಿ ಮೃತಪಟ್ಟಿದ್ದಾರೆ. ಈ ಸಾವುಗಳಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ’ ಎಂದು ಮೃತ ನಂದಿನಿ ಅವರ ಮಾವ ಸಂಗಪ್ಪ ಯಲಿಗಾರ, ಇತರರು ಆಪಾದಿಸಿದ್ದಾರೆ.

    ವೈದ್ಯರು ಹೇಳುವುದೇನು?
    ‘ನಮ್ಮ ಕಡೆಯಿಂದ ಎಲ್ಲ ಪ್ರಯತ್ನ ಮಾಡಿದ್ದೇವೆ. ಯಾವುದೇ ನಿರ್ಲಕ್ಷೃ ಮಾಡಿಲ್ಲ. ಶಿಶುಗಳ ಹಾಗೂ ಗರ್ಭಿಣಿಯ ಸ್ಥಿತಿಗತಿಯ ಬಗ್ಗೆ ನಿರಂತರವಾಗಿ ಕುಟುಂಬದವರಿಗೆ ಮಾಹಿತಿ ನೀಡಿದ್ದೇವೆ. ಅವರು ಒಪ್ಪಿಗೆ ಪತ್ರ ಬರೆದುಕೊಟ್ಟ ನಂತರವೇ ಶಸ್ತ್ರಚಿಕಿತ್ಸೆ ಪ್ರಾರಂಭಿಸಿದ್ದೆವು. ಈಗ ಆರೋಪ ಹೊರಿಸುವುದು ಸರಿಯಲ್ಲ’ ಎನ್ನುತ್ತಾರೆ ಖಾಸಗಿ ಆಸ್ಪತ್ರೆ ವೈದ್ಯ ಡಾ. ವಿಠ್ಠಲ ಎಸ್.ಟಿ.
    ‘ನಂದಿನಿಗೆ ಇದು ಎರಡನೇ ಹೆರಿಗೆ. ಮೊದಲ ಹೆರಿಗೆಯೇ ಸಿಜೇರಿಯನ್ ಆಗಿತ್ತು. ಮೊದಲ ಹೆರಿಗೆಯಲ್ಲೇ ಗರ್ಭಚೀಲವನ್ನು ಹೊಲಿದಿರುತ್ತಾರೆ. ನಂದಿನಿಗೆ 16- 18 ತಾಸುಗಳ ಮೊದಲೇ ಪ್ರಸವ ವೇದನೆ ಕಾಣಿಸಿಕೊಂಡಾಗ ಪಾಲಕರ ಒಪ್ಪಿಗೆ ಪಡೆದು ಆಸ್ಪತ್ರೆಗೆ ದಾಖಲಿಸಿಕೊಳ್ಳ್ಳಲಾಗಿತ್ತು. ಆಪರೇಷನ್‌ಗೂ ಮುಂಚೆ ಮತ್ತೊಮ್ಮೆ ಸ್ಕಾೃನ್ ಮಾಡಿದಾಗ ಶಿಶುಗಳ ಹೃದಯ ಬಡಿತದಲ್ಲಿ ಏರುಪೇರಾಗಿತ್ತು. ಈ ಸಂಗತಿಯನ್ನು ಸಂಬಂಧಿಗೆ ತಿಳಿಸಿ ಅವರ ಒಪ್ಪಿಗೆ ಪಡೆದು ಚಿಕಿತ್ಸೆ ಮುಂದುವರಿಸಿದ್ದೆವು. ಬಾಣಂತಿಯ ಗರ್ಭಚೀಲ ಹರಿದು ರಕ್ತಸ್ರಾವವಾದಾಗ ಹೆಚ್ಚಿನ ಚಿಕಿತ್ಸೆಗೆ ಬಾದಾಮಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದೆವು. ಬಾದಾಮಿ ತಲುಪುವವರೆಗೂ ನಂದಿನಿ ಸಂಬಂಧಿಕರ ಜತೆ ಮಾತನಾಡಿದ್ದಾರೆ. ರಕ್ತಸ್ರಾವ ತಹಬಂದಿಗೆ ಬರದ ಕಾರಣ ಅಸುನೀಗಿದ್ದಾರೆ’ ಎನ್ನುತ್ತಾರೆ ಡಾ. ವಿಠ್ಠಲ.

    ಗಜೇಂದ್ರಗಡದ ನಿರ್ದಿಷ್ಟ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ದಾಖಲಾತಿಗಳನ್ನು ಪರಿಶೀಲಿಸಿದ್ದೇನೆ. ಇನ್ನಷ್ಟು ದಾಖಲಾತಿಗಳು ಬಾದಾಮಿ ಆಸ್ಪತ್ರೆಯಲ್ಲಿ ಇರುವುದರಿಂದ ಅವುಗಳನ್ನೂ ತರಿಸಿಕೊಂಡು ಪರಿಶೀಲಿಸಿದ ಬಳಿಕ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
    -ಟಿ.ಎಚ್. ಭಜಂತ್ರಿ, ತಾಲೂಕು ವೈದ್ಯಾಧಿಕಾರಿ, ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts