More

    ಬರಡು ರಾಸುಗಳಿಗೆ ಉಚಿತ ಔಷಧೋಪಚಾರ, ಪಶುಪಾಲನ ಇಲಾಖೆಯಿಂದ ಉಚಿತ ಶಿಬಿರ

    ಬೆಂಗಳೂರು: ಹೈನೋದ್ಯಮದ ರೈತರಿಗೆ ತಲೆನೋವಾಗಿರುವ ಬರಡು (ಗರ್ಭಧರಿಸದ) ರಾಸುಗಳಿಗೆ ಉಚಿತ ಚಿಕಿತ್ಸೆ ನೀಡಿ ಆರ್ಥಿಕ ಸಬಲತೆ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮಾಂತರ ಜಿಲ್ಲೆಯ ಪಶುಪಾಲನಾ ಇಲಾಖೆ ಜಿಲ್ಲೆಯಾದ್ಯಂತ ಬರಡುರಾಸು ತಪಾಸಣೆ ಹಾಗೂ ಉಚಿತ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳುತ್ತಿದೆ.

    ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿಯಷ್ಟೆ ಹೈನುಗಾರಿಕೆಯೂ ಮುಂಚೂಣಿಯಲ್ಲಿರುವುದರಿಂದ ಪಶುಪಾಲನೆ ಇಲಾಖೆ ನಾಲ್ಕೂ ತಾಲೂಕುಗಳಲ್ಲೂ ಶಿಬಿರ ಆಯೋಜಿಸುತ್ತಿದೆ. ನುರಿತ ವೈದ್ಯರಿಂದ ಬರಡುರಾಸು ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆಯೊಂದಿಗೆ ಉಚಿತವಾಗಿ ಔಷಧೋಪಚಾರ ಸೌಲಭ್ಯ ಕಲ್ಪಿಸುತ್ತಿದೆ.

    ಬರಡು ರಾಸಿಗೆ ಪ್ರಮುಖ ಕಾರಣ: ಸಾವಿರಾರು ರೂ.ಮೌಲ್ಯದ ರಾಸುಗಳು ಗರ್ಭಧರಿಸದ ಪರಿಣಾಮ ಹೈನುಗಾರಿಕೆ ಅವಲಂಬಿಸಿರುವ ರೈತರನ್ನು ಕಂಗಾಲು ಮಾಡಿದೆ. ಈ ಹಿನ್ನೆಲೆಯಲ್ಲಿ ಪಶುಪಾಲನಾ ಇಲಾಖೆ ಖುದ್ದು ಗ್ರಾಮಗಳಿಗೆ ಭೇಟಿ ನೀಡಿ ಅಂಥ ರಾಸುಗಳ ಮಾಲೀಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ರಾಸುಗಳಲ್ಲಿ ಪೌಷ್ಟಿಕಾಂಶದ ಕೊರತೆ, ಗರ್ಭದಲ್ಲಿನ ಸೋಂಕು, ಹಾರ್ಮೋನ್‌ನಲ್ಲಿ ವ್ಯತ್ಯಯ ಮತ್ತಿತರ ಕಾರಣಗಳಿಂದ ರಾಸುಗಳು ಗರ್ಭವಂಚಿತವಾಗಿರುತ್ತವೆ ಎನ್ನಲಾಗಿದೆ. ಸೂಕ್ತ ಕಾಲದಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರೆ ರಾಸುಗಳು ಗರ್ಭಧರಿಸುತ್ತವೆ. ಈ ಬಗ್ಗೆ ರೈತರು ಕಾಲಕಾಲಕ್ಕೆ ರಾಸುಗಳನ್ನು ತಪಾಸಣೆಗೊಳಪಡಿಸಬೇಕು ಎಂದು ಗ್ರಾಮಾಂತರ ಜಿಲ್ಲೆ ಪಶುಪಾಲನೆ ಹಾಗೂ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಅನಿಲ್‌ಕುಮಾರ್ ತಿಳಿಸಿದ್ದಾರೆ.

    ಲಾಭದಾಯಕ ಉದ್ದಿಮೆ: ಹೈನುಗಾರಿಕೆ ರೈತರ ಪಾಲಿಗೆ ವರದಾನವಾಗಿದೆ. ಸರ್ಕಾರದ ಪ್ರೋತ್ಸಾಹಧನವೂ ರೈತರ ನೆರವಿಗೆ ಬಂದಿದೆ. ಅಲ್ಲದೆ 15 ದಿನಕ್ಕೊಮ್ಮೆ ಹಣ ಸಂದಾಯವಾಗುವುದರಿಂದ ಆರ್ಥಿಕ ಸಬಲತೆಗೂ ಹೈನೋದ್ಯಮ ನೆರವಾಗಿದೆ. ಆದರೆ ಬರಡುರಾಸುಗಳ ನಿರ್ವಹಣೆ ರೈತರಿಗೆ ತಲೆನೋವಾಗಿ ಪರಿಗಣಿಮಿಸಿದೆ. ಕೆಲವು ಭಾಗಗಳಲ್ಲಿ ಅವೈಜ್ಞಾನಿಕ ಕ್ರಮಗಳ ಮೂಲಕ ಗರ್ಭಧಾರಣೆಗೆ ಪ್ರಯತ್ನಿಸುವ ಪ್ರಕರಣ ಕಂಡುಬರುತ್ತಿವೆ. ಇದರಿಂದ ರಾಸುಗಳ ಆರೋಗ್ಯದ ಮೇಲೆ ದುಷ್ಪರಿಣಾಮದ ಜತೆಗೆ ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಖುದ್ದು ಪಶುಪಾಲನ ಇಲಾಖೆ ನುರಿತ ವೈದ್ಯರ ಮೂಲಕ ಬರಡುರಾಸುಗಳ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನೇರಳಘಟ್ಟದಲ್ಲಿ ಶಿಬಿರ: ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿಯ ನೇರಳಘಟ್ಟದಲ್ಲಿ ಇತ್ತೀಚೆಗೆ ಬರಡು ರಾಸು ತಪಾಸಣೆ ಹಾಗೂ ಪಶುಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ 74 ರಾಸುಗಳಿಗೆ ಚಿಕಿತ್ಸೆ, ಜಂತುನಾಶಕ ಔಷಧ, ರೋಗ ನಿರೋಧಕ ಲಸಿಕೆ,ಸೇರಿ ಖನಿಜಾಂಶ ಆಹಾರ ವಿತರಿಸಲಾಯಿತು.
    ಡಾ.ಅನಿಲ್‌ಕುಮಾರ್ ಹಾಗೂ ಡಾ.ಸತ್ಯನಾರಾಯಣ ಲಾಭದಾಯಕ ಹೈನುಗಾರಿಕೆ ಕುರಿತು ರೈತರಿಗೆ ಉಪನ್ಯಾಸ ನೀಡಿದರು. ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಬಾಲಚಂದ್ರ ಮಾರ್ಗದರ್ಶನದ ಕಾರ್ಯಕ್ರಮದಲ್ಲಿ ನೇರಳಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆರ್.ಲಕ್ಷ್ಮಿನಾರಾಯಣಗೌಡ, ಪಶು ವೈದ್ಯಾಧಿಕಾರಿ ಡಾ.ಎಂ.ಅಶ್ವಿನಿ, ಡಾ. ಸಹದೇವ, ಡಾ.ರಾಜೇಂದ್ರ, ಡಾ.ರಂಗಪ್ಪ, ಡಾ.ಕುಮಾರಸ್ವಾಮಿ, ಡಾ.ನಂದೀಶ, ಡಾ.ರಾಜೇಶ್ ಮತ್ತಿತರರು ಪಾಲ್ಗೊಂಡಿದ್ದರು.

    ಪಶುಪಾಲನ ಇಲಾಖೆಯಿಂದ ಬರಡುರಾಸುಗಳಿಗಾಗಿಯೇ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ರೈತರು ಈ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು. ಶಿಬಿರದಲ್ಲಿ ಮಾಹಿತಿಯನ್ನು ಸಮರ್ಪಕವಾಗಿ ಜಾರಿಗೆ ತಂದರೆ ಹೈನೋದ್ಯಮದಲ್ಲಿ ಆರ್ಥಿಕ ಸಬಲತೆ ಕಾಣಲು ಸಾಧ್ಯವಾಗಲಿದೆ.
    ಡಾ.ಅನಿಲ್‌ಕುಮಾರ್, ಗ್ರಾಮಾಂತರ ಜಿಲ್ಲೆ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts