More

    ಒಟಿಪಿ ಇಲ್ಲದೆ ಬ್ಯಾಂಕ್ ಖಾತೆಗೆ ಕನ್ನ; ಗುಜರಾತ್​ನ ವಡೋದರದಲ್ಲಿ ಸೈಬರ್ ವಂಚಕರ ಕೃತ್ಯ

    ವಡೋದರ: ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಗೆ ಯಾವುದಾದರೂ ಫಲಾನುಭವಿಯ ಅನಧಿಕೃತ ಖಾತೆ ಸೇರ್ಪಡೆಯಾಗಿದ್ದರೆ ತಕ್ಷಣವೇ ತೆಗೆದುಹಾಕಿ ಮತ್ತು ಪೊಲೀಸರಿಗೆ ತಿಳಿಸಿ. ಇಲ್ಲದಿದ್ದರೆ ನೀವು ಕಷ್ಟಪಟ್ಟು ಸಂಪಾದಿಸಿದ ಹಣ ನಿಮಿಷಾರ್ಧದಲ್ಲಿ ಮಾಯವಾಗಬಹುದು. ಇಂಥದ್ದೊಂದು ಘಟನೆ ಗುಜರಾತ್​ನ ವಡೋದರದಲ್ಲಿ ನಡೆದಿದೆ.

    ವ್ಯಕ್ತಿಯೊಬ್ಬರ ನೆಟ್ ಬ್ಯಾಂಕಿಂಗ್ ಖಾತೆಗೆ ಅಪರಿಚಿತ ಖಾತೆಯನ್ನು ಫಲಾನುಭವಿಯಾಗಿ ಸೇರ್ಪಡೆ ಮಾಡಲಾಗಿತ್ತು. ಆರಂಭದಲ್ಲಿ ವ್ಯಕ್ತಿ ಆ ಬಗ್ಗೆ ಗಮನ ಹರಿಸಿರಲಿಲ್ಲ. ಬ್ಯಾಂಕ್​ನ ತಾಂತ್ರಿಕ ದೋಷವಿರಬಹುದೆಂದು ಭಾವಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ವ್ಯಕ್ತಿಯ ಖಾತೆಯಿಂದ ವಂಚಕನ ಬ್ಯಾಂಕ್ ಖಾತೆಗೆ ಲಕ್ಷಾಂತರ ಹಣ ವರ್ಗಾವಣೆಯಾಗಿತ್ತು. ಆಸಕ್ತಿದಾಯಕ ವಿಷಯವೆಂದರೆ ಫಲಾನುಭವಿಯ ಸೇರ್ಪಡೆ ಅನು ಮೋದಿಸಲು ವ್ಯಕ್ತಿಗೆ ಯಾವುದೇ ಒಟಿಪಿ ಬಂದಿರಲಿಲ್ಲ.

    ನಿಗಾ ವಹಿಸಲು ಪೊಲೀಸರ ಮನವಿ: ನೆಟ್ ಬ್ಯಾಂಕಿಂಗ್ ಖಾತೆಗೆ ಅನುಮೋದನೆಯಿಲ್ಲದೆ ಫಲಾನುಭವಿಗಳನ್ನು ಸೇರ್ಪಡೆಗೊಳಿಸಿರುವ ಕುರಿತು ನಗರದಲ್ಲಿ ಮೂರು ದೂರುಗಳು ಬಂದಿವೆ. ಈ ಘಟನೆಗಳು ವ್ಯಕ್ತಿಗಳು ಮತ್ತು ಉದ್ಯಮಿಗಳು ವ್ಯಾಪಕವಾಗಿ ಬಳಸುತ್ತಿರುವ ನೆಟ್ ಬ್ಯಾಂಕಿಂಗ್ ಸುರಕ್ಷತೆ ಬಗ್ಗೆ ಕಳವಳ ಮೂಡಿಸಿದೆ. ಆದ್ದರಿಂದ ನೆಟ್ ಬ್ಯಾಂಕಿಂಗ್ ಬಳಕೆದಾರರು ತಮ್ಮ ಖಾತೆಗಳಲ್ಲಿ ಫಲಾನುಭವಿಗಳ ಬಗ್ಗೆ ನಿಯಮಿತವಾಗಿ ನಿಗಾ ಇಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ವಹಿವಾಟುಗಳಿಗೆ ಹೆಚ್ಚು ಬಳಸದ ಖಾತೆಗಳನ್ನು ಡಿಲೀಟ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

    ಸಿಮ್ ಕಾರ್ಡ್ ಸಕ್ರಿಯ

    ಸಾಮಾನ್ಯವಾಗಿ ಸೈಬರ್ ವಂಚಕರು ಈ ಹಿಂದೆ ಸಂತ್ರಸ್ತರಿಗೆ ಒಟಿಪಿ ಬರುವುದನ್ನು ತಡೆಯಲು ಅವರ ಸಿಮ್ ಸಂಪರ್ಕ ಕಡಿತಗೊಳಿಸುವ ಕೆಲಸ ಮಾಡುತ್ತಿದ್ದರು. ನಂತರ ಸಂತ್ರಸ್ತರ ಗುರುತಿನ ದಾಖಲೆಗಳನ್ನು ಕದ್ದು ಅವರ ಹೆಸರಿನಲ್ಲಿ ಹೊಸ ಸಿಮ್ ಖರೀದಿಸಿ ಅವುಗಳನ್ನು ಸಂತ್ರಸ್ತರ ನೆಟ್ ಬ್ಯಾಂಕಿಂಗ್ ಖಾತೆಗಳಿಗೆ ಲಿಂಕ್ ಮಾಡುತ್ತಿದ್ದರು. ಆದರೆ ಈ ಪ್ರಕರಣದಲ್ಲಿ ಸಂತ್ರಸ್ತನ ಸಿಮ್ ಕಾರ್ಡ್ ಸಕ್ರಿಯವಾಗಿದೆ. ಅನುಮೋದನೆಯಿಲ್ಲದೆ ಅನಧಿಕೃತ ಖಾತೆ ಸೇರ್ಪಡೆ ಬಗ್ಗೆ ಯಾವುದೇ ತಾಂತ್ರಿಕ ಲೋಪದೋಷವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್​ಗೆ ಪತ್ರ ಬರೆದಿದ್ದೇವೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಸೈಬರ್ ಕ್ರೈ ) ಹಾರ್ದಿಕ್ ಮಕಾಡಿಯಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts