More

    ಜ.25ರಿಂದ 30ರ ವರೆಗೆ ಮಹಾರಾಷ್ಟ್ರದಲ್ಲಿ ಬಂಜಾರಾ ಮಹಾಕುಂಭ ಮೇಳ

    ವಿಜಯಪುರ: ಬಂಜಾರಾ ಸಮಾಜ ಸನಾತನ ಸಂಸ್ಕೃತಿಯ ಅಂಗವಾಗಿದೆ. ಹಿಂದು ಧರ್ಮದಲ್ಲಿ ಆಚರಿಸುವ ಎಲ್ಲ ರೀತಿಯ ಹಬ್ಬಗಳನ್ನು ಆಚರಿಸುತ್ತೇವೆ. ಆದರೆ ಕೆಲ ದುಷ್ಟಶಕ್ತಿಗಳು ಸಮಾಜದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಸರಿಯಲ್ಲ ಎಂದು ಕೇಸರಟ್ಟಿಯ ಸೋಮಲಿಂಗ ಸ್ವಾಮೀಜಿ ಹೇಳಿದರು.

    ತಾಂಡಾಗಳಲ್ಲಿ ವಿವಿಧ ಸಂಸ್ಕೃತಿ, ಕಲೆ ಮೂಲಕ ಛಾಪು ಮೂಡಿಸುತ್ತಿರುವ ಬಂಜಾರಾ ಸಮಾಜವನ್ನು ನಾಶ ಪಡಿಸಲು ಕೆಲ ದುಷ್ಟ ಶಕ್ತಿಗಳು ನಿಮ್ಮ ಸಮಾಜ ಹಿಂದು ಧರ್ಮಕ್ಕೆ ಸೇರಿಲ್ಲ. ನಿಮ್ಮದೆ ಆದ ಧರ್ಮ ಇದೆ. ದೇವರನ್ನು ಆರಾಧನೆ ಮಾಡಬೇಡಿ ಎನ್ನುವ ಮೂಲಕ ನಮ್ಮ ಧಾರ್ಮಿಕ ಮನೋಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಬಂಜಾರಾ ಸಮಾಜದಲ್ಲಿ ಸನಾತನ ಸಂಸ್ಕೃತಿ ಪ್ರಕಾರ ದುರ್ಗಾ ಪೂಜೆ, ದಸರಾ ಆಚರಣೆ ಹೀಗೆ ಅನೇಕ ಧಾರ್ಮಿಕ ಹಬ್ಬಗಳನ್ನು ಆಚರಿಸುತ್ತಾರೆ. ಸಂಸ್ಕಾರ, ಸಂಸ್ಕೃತಿಯ ಪ್ರತೀಕವಾಗಿರುವ ಬಂಜಾರಾ ಸಮಾಜದ ಮೇಲೆ ನಿರಂತರ ದಬ್ಬಾಳಿಕೆಗಳು ನಡೆಯುತ್ತಿವೆ. ಇಂದಿನ ದಿನಗಳಲ್ಲಿ ಯುವ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದರು.

    ಮುಗ್ಧಜನರ ಮತಾಂತರ ಸಲ್ಲ:
    ಲಂಬಾಣಿಗರು ಮುಗ್ಧ ಜನರು. ಅವರ ಬಡತನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕ್ರಿಶ್ಚಿಯನ್ ಮಿಷನರಿಗಳು ಮತಾಂತರ ಮಾಡುತ್ತಿರುವುದು ಸರಿಯಲ್ಲ. ಹೊಟ್ಟೆಪಾಡಿಗಾಗಿ ರಾಜ್ಯ ಅಲ್ಲದೆ ಮಹಾರಾಷ್ಟ್ರ, ಗೋವಾ ಭಾಗದಲ್ಲಿ ಕೆಲಸಕ್ಕೆ ಹೋಗುವ ಬಂಜಾರಾ ಸಮಾಜದ ಜನರನ್ನು ಆಮೀಷವೊಡ್ಡಿ ಅವರನ್ನು ಮತಾಂತರ ಮಾಡುವುದು ಗಮನಕ್ಕೆ ಬಂದಿದೆ. ಈಗಾಗಲೇ ಈ ಹಿಂದೆಯೇ ಬಸವನ ಬಾಗೇವಾಡಿ ತಾಲೂಕಿನಲ್ಲಿ ಮತಾಂತರಗೊಂಡಿದ್ದ ಬಂಜಾರಾ ಸಮಾಜದ 14 ತಾಂಡಾಗಳಲ್ಲಿ ಘರ್ ವಾಪಸಿ ಮೂಲಕ ಅವರನ್ನು ಮತ್ತೆ ಸಮಾಜಕ್ಕೆ ಕರೆತರಲಾಗಿತ್ತು. ಅದರಂತೆ ಅವರಿಗೆ ಶೈಕ್ಷಣಿಕ, ಆರ್ಥಿಕವಾಗಿ ಸಹಾಯ ಮಾಡಲಾಯಿತು ಎಂದು ಕೇಸರಟ್ಟಿ ಶ್ರೀಗಳು ಹೇಳಿದರು.

    ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯ:
    ದೇಶದಲ್ಲಿ ಮೂಲ ನಿವಾಸಿಗಳ ಮೇಲೆ ಗಂಡಾಂತರ ಎದುರಾಗಿದೆ. ದೇಶದಲ್ಲಿ ಶೇ. 9ರಿಂದ 13 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಬಂಜಾರಾ ಸಮಾಜ ಈಗಲೂ ಗುಡ್ಡಾಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ ಇಂದಿಗೂ ಹಿಂದುಳಿದಿದ್ದಾರೆ. ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ ಬಗ್ಗೆ ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯ ಮಾಡಲಾಗುತ್ತಿದೆ ಎಂದು ಗೋರ್ ಸಿಖವಾಡಿ ಗೋರ್ ಸೇನಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.

    ಹಿಂದುತ್ವ ನಮ್ಮ ಮೂಲ ಪರಂಪರೆ ಆಗಿದೆ. ಆದರೆ ಇಂದು ಧಾರ್ಮಿಕ ಮೌಢ್ಯದಲ್ಲಿ ಸಿಲುಕಿಸಲು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದು, ತಾಂಡಾ ಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಅದಕ್ಕಾಗಿ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಹರಾವಾತ್ ತಾಂಡಾದಲ್ಲಿ ಡಿ. 17, 18ರಂದು ಬಾಲ ಸಂಸ್ಕಾರ ರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದ ಎಲ್ಲ ತಾಂಡಾಗಳಲ್ಲಿ ಬಾಲ ಸಂಸ್ಕಾರ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಆ ಮೂಲಕ ಯುವ ಜನರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.

    ಜ.25ರಿಂದ ಮಹಾಕುಂಭಮೇಳ:
    ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಜಾಮ್ನರ್ ತಾಲೂಕಿನ ಗೋದ್ರಿಯಲ್ಲಿ ಜ.25ರಿಂದ 30ರ ವರೆಗೆ ಬಂಜಾರಾ ಮಹಾ ಕುಂಭಮೇಳವನ್ನು ಆಯೋಜಿಸಲಾಗಿದೆ. ಒಟ್ಟು 200 ಎಕರೆ ಜಾಗದಲ್ಲಿ ನಡೆಯುತ್ತಿರುವ ಈ ಮೇಳಕ್ಕೆ ಬರುವ ಲಕ್ಷಕ್ಕೂ ಅಧಿಕ ಜನರಿಗೆ ವಸತಿ ಸೇರಿದಂತೆ ವಿವಿಧ ಸೌಲಭ್ಯವನ್ನು ಒದಗಿಸಲಾಗಿದೆ. ಈಗಾಗಲೇ ಕಳೆದ ಆರು ತಿಂಗಳಿಂದ ಸಿದ್ಧತೆ ನಡೆಯುತ್ತಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

    ತೊರವಿಯ ಗೋಪಾಲ ಮಹಾರಾಜರು, ಸಿದ್ದಲಿಂಗ ಸ್ವಾಮೀಜಿ, ರಾಜಪಾಲ ಚವ್ಹಾಣ, ರಾಜು ಜಾಧವ, ಅರುಣ ದಿಗಂಬರ ಚವ್ಹಾಣ, ಡಾ.ಬಾಬು ರಾಜೇಂದ್ರ ನಾಯಕ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts