More

    ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಾಗಿಯಾಗಿದ್ದ ವಿದ್ಯಾರ್ಥಿನಿಗೆ ಭಾರತ ಬಿಟ್ಟು ತೆರಳುವಂತೆ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ ಸೂಚನೆ

    ಕೋಲ್ಕತ್ತ: ಸರ್ಕಾರದ ವಿರುದ್ಧದ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ವಿಶ್ವ ಭಾರತಿ ವಿಶ್ವವಿದ್ಯಾಲಯದ ಬಾಂಗ್ಲಾ ಮೂಲದ ವಿದ್ಯಾರ್ಥಿನಿಯನ್ನು ದೇಶ ತೊರೆಯುವಂತೆ ಆದೇಶಿಸಲಾಗಿದೆ.

    ಫೆಬ್ರವರಿ 14ರಂದು ಹೊರಡಿಸಿದ ಆದೇಶ ಅಫ್ಸರ್​ ಅನಿಕಾ ಮೀಮ್​ ಎಂಬ ವಿದ್ಯಾರ್ಥಿನಿಗೆ ಬುಧವಾರ ಸಿಕ್ಕಿದೆ. ಗೃಹ ಸಚಿವಾಲಯದ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ ಬಂದ ಆ ಪತ್ರದಲ್ಲಿ ಭಾರತ ಬಿಟ್ಟು ಹೊರಡು ಎಂದು ಸೂಚಿಸಲಾಗಿದೆ.

    ಈ ಪತ್ರದ ಸಂಬಂಧ ಆಕೆ ಗುರುವಾರ ಇಲ್ಲಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಭೇಟಿ ನೀಡಿದ್ದಳು. ಆದರೆ ಆಕೆ ಮಾಧ್ಯಮಗಳ ಜತೆ ಮಾತನಾಡಿಲ್ಲ. ಇನ್ನು ಆಕೆಯ ಕೆಲ ಸ್ನೇಹಿತರು, “ಆ ಪತ್ರದಿಂದ ಆಕೆ ಆಘಾತಕ್ಕೊಳಗಾಗಿದ್ದಾಳೆ ಮತ್ತು ಮಾಧ್ಯಮಗಳ ಜತೆ ಮಾತನಾಡಲು ಭಯ ಬೀಳುತ್ತಿದ್ದಾಳೆ” ಎಂದು ತಿಳಿಸಿದ್ದಾರೆ.

    ಕಳೆದ ಡಿಸೆಂಬರ್​ನಲ್ಲಿ ಅಫ್ಸರ್​, ಶಾಂತಿನಿಕೇತನದಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ತಾನು ಭಾಗವಹಿಸಿದ್ದ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಳು. ಈ ಫೋಟೋಗಳಿಗೆ ಕಮೆಂಟ್​ ಮಾಡಿದ ಕೆಲವರು ಆಕೆಯನ್ನು “ಬಾಂಗ್ಲಾದೇಶದ ಭಯೋತ್ಪಾದಕಿ” ಎಂದು ಟ್ರೋಲ್​ ಮಾಡಿದ್ದರು.

    ಸಿಪಿಎಂನ ಮುಖಂಡ ಮೊಹಮ್ಮದ್​ ಸಲೀಮ್​ ಪ್ರತಿಕ್ರಿಯಿಸಿ, ಯಾವುದೇ ಒಬ್ಬ ವಿದ್ಯಾರ್ಥಿ ತನ್ನ ರಾಜಕೀಯ ನಿಲುವುಗಳಿಗಾಗಿ ದೇಶ ಬಿಟ್ಟು ಹೊರಡು ಎಂದು ಸೂಚಿಸುವ ವೀಸಾ ಕಾನೂನಿಗಳಿಲ್ಲ. ಆದರೆ ಇಲ್ಲಿ ಇದ್ದುಕೊಂಡು ಬೇರೆ ದೇಶದ ರಾಜಕೀಯ ಚಟುವಟಿಕೆಯಲ್ಲಿ ತೊಡಗುವಂತಿಲ್ಲ ಎಂದಿದ್ದಾರೆ.

    ಈ ಸರ್ಕಾರ ಭಯಭೀತವಾಗಿದೆ. ಅಲ್ಲದೆ ಬಾಂಗ್ಲಾ ದೇಶದ ನಮ್ಮ ಸಂಬಂಧವನ್ನು ಹಾಳುಗೆಡುವ ಪ್ರಯತ್ನ ಮಾಡುತ್ತಿದೆ ಎಂದು ಸಲೀಮ್​ ಆರೋಪಿಸಿದ್ದಾರೆ.

    ಕಳೆದ ಡಿಸೆಂಬರ್​ನಲ್ಲಿಯೂ ಜರ್ಮನ್​ ಮೂಲದ ಮದ್ರಾಸ್​ನ ಐಐಟಿ ವಿದ್ಯಾರ್ಥಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗಿಳಿದಿದ್ದಕ್ಕೆ ದೇಶ ಬಿಟ್ಟು ತೆರಳಲು ಸೂಚಿಸಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts