More

    ಬಾಂಗ್ಲಾ ನುಸುಳುಕೋರರ ಪ್ರಕರಣಕ್ಕೆ ಮರುಜೀವ

    ಬೆಳಗಾವಿ: ದೇಶದ ತುಂಬೆಲ್ಲ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ಪರ-ವಿರೋಧ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಬೆಳಗಾವಿ ನಗರದಲ್ಲಿ ಬಾಂಗ್ಲಾ ನುಸುಳುಕೋರರ ಬಂಧನದ ಹಳೇ ಪ್ರಕರಣ ಇದೀಗ ಮುನ್ನಲೆಗೆ ಬಂದಿದೆ.

    2017 ರಲ್ಲಿ ಬೆಳಗಾವಿ ನಗರ ಪೊಲೀಸರು 12 ಜನ ಬಾಂಗ್ಲಾ ನುಸುಳುಕೋರರನ್ನು ಬಂಧಿಸಿದ್ದರು. ಅಲ್ಲದೆ, ನಗರದಲ್ಲಿ ಇನ್ನೂ 30 ಕ್ಕೂ ಹೆಚ್ಚು ವಲಸಿಗರು ಅಕ್ರಮವಾಗಿ ನೆಲೆಸಿದ್ದಾರೆ ಎನ್ನುವ ಸಂಗತಿಯನ್ನೂ ಪತ್ತೆ ಹಚ್ಚಿದ್ದರು. ಆದರೆ, ರಾಜಕೀಯ ಒತ್ತಡ ಇನ್ನಿತರ ಕಾರಣಗಳಿಂದ ಸ್ವಲ್ಪ ದಿನಗಳ ಬಳಿಕ ಆ ಪ್ರಕರಣವನ್ನೇ ಪೊಲೀಸರು ಕೈಬಿಟ್ಟಿದ್ದರು. ಇದೀಗ ಬಿಜೆಪಿ ಶಾಸಕರು, ಹಿಂದುಪರ ಸಂಘಟನೆಗಳ ಮುಖಂಡರು ಬಾಂಗ್ಲಾ ನುಸುಳುಕೋರರ ಬಂಧನ ಪ್ರಕರಣ ಮುಂದೇನಾಯ್ತು ಎಂಬ ಬಗ್ಗೆ ಪೂರಕವಾದ ಮಾಹಿತಿ
    ಸಂಗ್ರಹಿಸಲು ಅಣಿಯಾಗಿದ್ದಾರೆ.

    ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ, ಮಾರ್ಬಲ್, ಗ್ರಾನೈಟ್ ಪಾಲಿಶ್‌ನಂಥ ಕೆಲಸಗಳಲ್ಲಿ ತೊಡಗುವ ಅಕ್ರಮ ಬಾಂಗ್ಲಾ ವಲಸಿಗರು ಹೆಚ್ಚಾಗಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಅಂದಿನ ಸರ್ಕಾರವು ಇಂಥ ವಲಸಿಗರನ್ನು ಗಡಿಪಾರು ಮಾಡಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ (ಸ್ಪೆಷಲ್ ಟಾಸ್ಕ್ ಫೋರ್ಸ್) ರಚನೆ ಮಾಡಿತ್ತು. ಆದರೆ, ಮಾಹಿತಿ ಸೇರಿ ಇನ್ನಿತರ ದಾಖಲೆಗಳ ಕೊರತೆಯಿಂದಾಗಿ ಕಾರ್ಯಪಡೆ ಸಿಬ್ಬಂದಿ ತನ್ನ ಕಾರ್ಯಚರಣೆಯನ್ನು ಸಂಪೂರ್ಣ ಕೈಬಿಟ್ಟಿತ್ತು. ಇದರಿಂದಾಗಿ ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಲೂ ಕಾರಣವಾಗಿತ್ತು.

    2015 ರಲ್ಲಿ ನಡೆದ ಅಧಿವೇಶನದಲ್ಲಿ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ರಾಜ್ಯದಲ್ಲಿ ಐದು ವರ್ಷದಲ್ಲಿ 164 ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡಲಾಗಿದೆ. ಆ ಪೈಕಿ 100 ಜನರನ್ನು ಗಡಿಪಾರು ಮಾಡಿ ವಾಪಸ್ ಕಳುಹಿಸಲಾಗಿದೆ ಎಂದಿದ್ದರು. ಬಳಿಕ 2017ರಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಅಂದಿನ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ ಅವರು, ರಾಜ್ಯದಲ್ಲಿ 283 ಬಾಂಗ್ಲಾ ಅಕ್ರಮ ವಲಸಿಗರನ್ನು ಪತ್ತೆ ಮಾಡಲಾಗಿದೆ ಎಂದಿದ್ದರು.

    2017 ರಲ್ಲಿ ಅವತ್ತಿನ ಬೆಳಗಾವಿ ಅಪರಾಧ ವಿಭಾಗದ ಡಿಸಿಪಿ ಅಮರನಾಥ ರೆಡ್ಡಿ ಅವರು, ಬೆಳಗಾವಿ ನಗರದಲ್ಲಿ ಇರುವ ಅಕ್ರಮ ಬಾಂಗ್ಲಾ ನುಸುಳುಕೋರರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಇನ್ನೂ 30ಕ್ಕೂ ಹೆಚ್ಚು ಅಕ್ರಮ ವಲಸಿಗರು ಇರುವ ಅನುಮಾನ ಇದೆ. ಈಗ ಸಿಕ್ಕಿರುವವರ ಪೈಕಿ ಕೆಲವರು ಒಂದು ವರ್ಷದಿಂದಲೂ ನಗರದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದ್ದರು.

    ಇನ್ನಷ್ಟು ಅಕ್ರಮ ವಲಸಿಗರು ಇರುವ ಶಂಕೆ

    ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯು ಅಕ್ರಮ ಬಾಂಗ್ಲಾದೇಶೀಯರಿಗೆ ಪ್ರಶಸ್ತ ತಾಣವಾಗಿಬಿಟ್ಟಿದೆ. ದೇಶದ ಗಡಿಯೊಳಕ್ಕೆ ನುಸುಳಿ ಬಂದು ಬೆಳಗಾವಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ 12 ಪ್ರಜೆಗಳನ್ನು 2017 ರಲ್ಲಿ ಪತ್ತೆ ಹಚ್ಚಿ ಬಂಧಿಸಿ, ಗಡಿಪಾರು ಮಾಡಲಾಗಿತ್ತು. ಆದರೆ, ಬೆಳಗಾವಿ ನಗರದಲ್ಲಿ ಬಾಂಗ್ಲಾದೇಶದ ಇನ್ನಷ್ಟು ಅಕ್ರಮ ವಲಸಿಗರು ನೆಲೆಸಿರುವ ಶಂಕೆ ದಟ್ಟವಾಗಿದೆ ಎಂದು ಹಿಂದುಪರ ಸಂಘಟನೆಗಳ ಮುಖಂಡರು ದೂರಿದ್ದಾರೆ.


    ನಗರದಲ್ಲಿ ಬಾಂಗ್ಲಾ ನುಸುಳುಕೋರರ ಬಂಧನ ಪ್ರಕರಣದ ಸಮಗ್ರ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಜತೆಗೆ ತನಿಖೆ ಯಾವ ಹಂತದಲ್ಲಿದೆ? ಈ ಸಂಬಂಧ ಯಾರ‌್ಯಾರ ಮೇಲೆ ಕ್ರಮ ವಹಿಸಿದ್ದಾರೆ ಎಂಬುದರ ಕುರಿತು ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
    | ಅನಿಲ ಬೆನಕೆ ಶಾಸಕ ಬೆಳಗಾವಿ ಉತ್ತರ

    ನಗರದಲ್ಲಿನ ಬಾಂಗ್ಲಾ ಅಕ್ರಮ ವಲಸಿಗರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ಈ ಕುರಿತು ಮಾಹಿತಿ ಪಡೆದುಕೊಳ್ಳಲಾಗುವುದು.
    | ಸುರೇಶ ಅಂಗಡಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts