More

    ‘ಬಂಗಾರದ ಮನುಷ್ಯ’ನಿಗೀಗ 48 … ಈ ಕ್ಲಾಸಿಕ್ ಚಿತ್ರದ ಒಂದಿಷ್ಟು ಇಂಟರೆಸ್ಟಿಂಗ್ ವಿಷಯಗಳು

    ಕನ್ನಡ ಚಿತ್ರರಂಗದಲ್ಲಿ ಕ್ಲಾಸಿಕ್ ಎಂದು ಪರಿಗಣಿಸಲ್ಪಡುವ ಡಾ. ರಾಜಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಚಿತ್ರಕ್ಕೆ ಇದೀಗ 48 ತುಂಬಿದೆ. ಈ ಚಿತ್ರ 1972ರ ಮಾರ್ಚ್ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ನಿನ್ನೆಗೆ (ಮಂಗಳವಾರ) ಚಿತ್ರ ಬಿಡುಗಡೆಯಾಗಿ 48 ವರ್ಷಗಳು ಪೂರೈಸಿವೆ. ಡಾ. ರಾಜಕುಮಾರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮಣ್ ಮತ್ತು ಗೋಪಾಲ್ ನಿರ್ಮಿಸಿದ್ದ ಈ ಚಿತ್ರವನ್ನು ಸಿದ್ಧಲಿಂಗಯ್ಯ ನಿರ್ದೇಶನ ಮಾಡಿದ್ದರು. ಡಾ. ರಾಜಕುಮಾರ್, ಭಾರತಿ, ಬಾಲಕೃಷ್ಣ, ವಜ್ರಮುನಿ, ಶ್ರೀನಾಥ್, ಎಂ.ಪಿ. ಶಂಕರ್ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಜಿ.ಕೆ. ವೆಂಕಟೇಶ್ ಸಂಗೀತ ಸಂಯೋಜಿಸಿದ್ದರು. ಈ ಚಿತ್ರದ ಕೆಲವು ಇಂಟರೆಸ್ಟಿಂಗ್ ವಿಷಯಗಳು ನಿಮಗಾಗಿ …

    * ಕನ್ನಡದಲ್ಲಿ ಅತೀ ಹೆಚ್ಚು ಕಾಲ ಪ್ರದರ್ಶನಗೊಂಡ ಚಿತ್ರ ಎಂಬ ಹೆಗ್ಗಳಿಕೆ ‘ಬಂಗಾರದ ಮನುಷ್ಯ’ನಿಗಿದೆ. ಬೆಂಗಳೂರಿನ ಕೆಂಪೇಗೌಡ ರಸ್ತೆಯ ಸ್ಟೇಟ್ಸ್ (ಈಗಿನ ಭೂಮಿಕಾ) ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಿ ಎರಡು ವರ್ಷಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಪೈಕಿ ಒಂದು ವರ್ಷದ ನಂತರ, ಚಿತ್ರವನ್ನು ನಿಲ್ಲಿಸಲಾಗಿತ್ತಂತೆ. ಆದರೆ, ಡಾ. ರಾಜಕುಮಾರ್ ಅವರ ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಅದೇ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಆ ನಂತರ ಚಿತ್ರ ಮತ್ತೆ ಒಂದು ವರ್ಷ ಯಶಸ್ವಿ ಪ್ರದರ್ಶನ ಕಂಡಿದ್ದು ಇತಿಹಾಸ. ಹತ್ತು ವರ್ಷಗಳ ನಂತರ ಪುನಃ ಬಿಡುಗಡೆಯಾದ ಈ ಚಿತ್ರ ಮತ್ತೆ 50ಕ್ಕೂ ಹೆಚ್ಚು ವಾರಗಳ ಪ್ರದರ್ಶನ ಕಂಡಿತ್ತು.

    * ಈ ಚಿತ್ರವನ್ನು ಮೊದಲಿಗೆ ಹುಣಸೂರು ಕೃಷ್ಣಮೂರ್ತಿ ನಿರ್ದೇಶಿಸಬೇಕಿತ್ತು ಎಂದು ಹೇಳಲಾಗುತ್ತದೆ. ಕ್ರಮೇಣ ಸಿದ್ಧಲಿಂಗಯ್ಯನವರನ್ನು ನಿರ್ದೇಶಕರಾಗಿ ಕರೆತರಲಾಯಿತಂತೆ. ‘ಬಂಗಾರದ ಮನುಷ್ಯ’ ಚಿತ್ರಕ್ಕೂ ಮುನ್ನ ಸಿದ್ಧಲಿಂಗಯ್ಯ ನಿರ್ದೇಶನದಲ್ಲಿ ಡಾ. ರಾಜಕುಮಾರ್ ಅವರು ‘ಮೇಯರ್ ಮುತ್ತಣ್ಣ’, ‘ನ್ಯಾಯವೇ ದೇವರು’, ‘ತಾಯಿ ದೇವರು’ ಮತ್ತು ‘ಬಾಳು ಬೆಳಗಿತು’, ‘ನಮ್ಮ ಸಂಸಾರ’ ಚಿತ್ರಗಳಲ್ಲಿ ನಟಿಸಿದ್ದರು. ‘ದೂರದ ಬೆಟ್ಟ’ ಈ ಜೋಡಿಯ ಕೊನೆಯ ಚಿತ್ರವಾಯಿತು.

    * ಟಿ.ಕೆ. ರಾಮರಾವ್ ಅವರ ಅದೇ ಹೆಸರಿನ ಕಾದಂಬರಿಯನ್ನಾಧರಿಸಿ ಈ ಚಿತ್ರ ಮಾಡಲಾಗಿದೆ.ಈ ಚಿತ್ರ ಆಗಿನ ಕಾಲಕ್ಕೆ ಅದೆಷ್ಟು ಪ್ರಭಾವ ಬೀರಿತ್ತು ಎಂದರೆ, ಹಲವು ವಿದ್ಯಾವಂತ ಯುವಕರು ಪೇಟೆ ಬಿಟ್ಟು, ತಮ್ಮ ಹಳ್ಳಿ ಸೇರಿ ಕೃಷಿಯಲ್ಲಿ ತೊಡಗಿಸಿಕೊಂಡರು ಎಂಬ ಮಾತು ಕರ್ನಾಟಕದಲ್ಲಿ ಜನಜನಿತವಾಗಿದೆ.

    * ಈ ಚಿತ್ರ ಕನ್ನಡದಲ್ಲಿ ಯಶಸ್ವಿಯಾಗಿ ಅಪಾರ ಜನಪ್ರಿಯತೆ ಗಳಿಸುವುದರ ಜತೆಗೆ, ತೆಲುಗಿಗೂ ರೀಮೇಕ್ ಆಗಿತ್ತು. ‘ದೇವುಡುಲಂಟಿ ಮನಿಷಿ’ ಎಂಬ ರೀಮೇಕ್‌ನಲ್ಲಿ ತೆಲುಗಿನ ಖ್ಯಾತ ನಟ ಕೃಷ್ಣ ಅವರು ನಾಯಕನಾಗಿ ಅಭಿನಯಿಸಿದ್ದರು.

    * ಸಾಮಾನ್ಯವಾಗಿ ಒಂದು ಹಾಡು ನಾಲ್ಕರಿಂದ ಐದು ನಿಮಿಷಗಳ ಕಾಲಾವಧಿಯದ್ದಾಗಿರುತ್ತದೆ. ಆದರೆ, ‘ಬಂಗಾರದ ಮನುಷ್ಯ’ ಚಿತ್ರಕ್ಕೆ ಜಿ.ಕೆ. ವೆಂಕಟೇಶ್ ಅವರು ಸಂಯೋಜಿಸಿದ ಹಾಡುಗಳು ಆರು ನಿಮಿಷಗಳ ಕಾಲ ಇರುವುದಷ್ಟೇ ಅಲ್ಲ, ಎಲ್ಲಾ ಹಾಡುಗಳೂ ಇಂದಿಗೂ ಜನಪ್ರಿಯವಾಗಿವೆ. ಈ ಪೈಕಿ ಪಿ.ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ ಅವರ ಗಾಯನದಲ್ಲಿ ಮೂಡಿಬಂದಿರುವ ‘ಆಹಾ ಮೈಸೂರು ಮಲ್ಲಿಗೆ …’ ಸಹ ಒಂದು. ಈ ಹಾಡಿಗೆ ಸ್ಫೂರ್ತಿ, ಡಾ ರಾಜಕುಮಾರ್ ಅಭಿನಯದ ‘ಕಣ್ತೆರೆದು ನೋಡು’ ಚಿತ್ರದ ‘ಶರಣು ಕಾವೇರಿ ತಾಯಿ …’ ಹಾಡು. ಆ ಹಾಡಿನ ಟ್ಯೂನ್, ‘ಬಂಗಾರದ ಮನುಷ್ಯ’ ಚಿತ್ರದ ಹಾಡಿನ ಸಂದರ್ಭಕ್ಕೆ ಸರಿಯಾಗಿದೆ ಎಂಬ ಕಾರಣಕ್ಕೆ, ಆ ಟ್ಯೂನ್ ಬಳಸಿಕೊಳ್ಳಲಾಯಿತಂತೆ.

    * ಭಾರತೀಯ ಚಿತ್ರರಂಗದ ಶತಮಾನೋತ್ಸವ ಸಂದರ್ಭದಲ್ಲಿ ಫೋರ್ಬ್ಸ್ ಹೊರತಂದ 25 ಗ್ರೇಟೆಸ್ಟ್ ಆ್ಯಕ್ಟಿಂಗ್ ರ್ಪಾರ್‌ಮೆನ್ಸಸ್ ಆ ಇಂಡಿಯನ್ ಸಿನಿಮಾ ಪಟ್ಟಿಯಲ್ಲಿ, ‘ಬಂಗಾರದ ಮನುಷ್ಯ’ ಚಿತ್ರದ ಅಭಿನಯಕ್ಕಾಗಿ ಡಾ. ರಾಜಕುಮಾರ್ ಅವರ ಹೆಸರೂ ಸೇರ್ಪಡೆಯಾಗಿದೆ.
    *ಈ ಚಿತ್ರವು 1971-72ನೇ ಸಾಲಿನ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ರಾಜ್ಯ ಸರ್ಕಾರದಿಂದ ಪಡೆದುಕೊಂಡಿತ್ತು. ಇನ್ನು ರಾಚೂಟಪ್ಪ ಪಾತ್ರದ ಅಭಿನಯಕ್ಕೆ ಬಾಲಕೃಷ್ಣ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದರೆ, ಸಿದ್ಧಲಿಂಗಯ್ಯ ಅವರು ಅತ್ಯುತ್ತಮ ಚಿತ್ರಕಥೆಗಾಗಿ, ಡಿ.ವಿ. ರಾಜಾರಾಂ ಅತ್ಯುತ್ತಮ ಛಾಯಾಗ್ರಾಹಣಕ್ಕಾಗಿ ಮತ್ತು ಪಿ. ಭಕ್ತವತ್ಸಲಂ ಅತ್ಯುತ್ತಮ ಸಂಕಲನಕ್ಕಾಗಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    * ‘ಬಂಗಾರದ ಮನುಷ್ಯ’ ಚಿತ್ರ ಬಿಡುಗಡೆಯಾಗಿ 45 ವರ್ಷಗಳ ನಂತರ ‘ಬಂಗಾರ ಸನ್ ಆ್ ಬಂಗಾರದ ಮನುಷ್ಯ’ ಎಂಬ ಇನ್ನೊಂದು ಚಿತ್ರ ಬಿಡುಗಡೆಯಾಯಿತು. ಶಿವರಾಜಕುಮಾರ್ ಅಭಿನಯದ ಈ ಚಿತ್ರಕ್ಕೂ, ಮೂಲ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ, ಎರಡೂ ಚಿತ್ರಗಳು ರೈತರ ಹಾಗೂ ಅವರು ಎದುರಿಸುವ ಹಲವು ಸಮಸ್ಯೆಗಳ ಕುರಿತಾದ ಚಿತ್ರಗಳಾಗಿದ್ದವು.

    ರವಿಶಂಕರ್ ಗೌಡ ಮೈ ಮೇಲೆ ಅಣ್ಣಾವ್ರು ಬಂದಾಗ ..!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts