More

    ಜಿಲ್ಲೆಯಾದ್ಯಂತ ಅಬ್ಬರಿಸಿದ ಮಳೆರಾಯ: ಜಲಾವೃತಗೊಂಡ ಬಡಾವಣೆಗಳು

    ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಮುಂದುವರಿದಿದೆ. ದಶಕಗಳಲ್ಲೇ ಕಂಡು ಕೇಳರಿಯದಂಥ ಧಾರಾಕಾರ ಮಳೆಯಾಗುತ್ತಿದೆ. ಕೆರೆ-ಕಟ್ಟೆಗಳು ಕೋಡಿ ಹರಿಯುತ್ತಿವೆ, ರಾಜಕಾಲುವೆಗಳು ಉಕ್ಕಿ ರಸ್ತೆಗಳು ಜಲಾವೃತಗೊಂಡಿವೆ, ಜಮೀನುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ.ಮೌಲ್ಯದ ತೋಟಗಾರಿಕೆ ಬೆಳೆ ನಷ್ಟವಾಗಿದೆ, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜನರ ನಿದ್ದರಗೆಡಿಸಿದೆ, ಹಳೇ ಮನೆಗಳ ಗೋಡೆಗಳು ಕುಸಿದು ಅವಾಂತರ ಸೃಷ್ಟಿಯಾಗಿದೆ. ರಸ್ತೆಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಮತ್ತೊಂದೆಡೆ ಕೋಡಿ ಹರಿಯುತ್ತಿರುವ ಕೆರೆಗಳಿಗೆ ಬಾಗಿನ ಅರ್ಪಿಸಲು ಸ್ಥಳೀಯ ಮುಖಂಡರು ಮುಗಿಬೀಳುತ್ತಿದ್ದಾರೆ.

    ನೆಲಮಂಗಲ: ಭಾನುವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ನಗರದ ಕೆರೆ ತುಂಬಿ ಹರಿದಿದ್ದು, ರಾಜಕಾಲುವೆಗಳ ಸಮೀಪದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ನಗರದ ಕೆರೆಯಿಂದ ಭಿನ್ನಮಮಂಗಲ ಕೆರೆಗೆ ಹಾದುಹೋಗುವ ಮಾರ್ಗದ ವಸತಿ ಬಡಾವಣೆಗಳು ಜಲಾವೃತಗೊಂಡಿವೆ.

    ಜಲಪ್ರವಾಹ ಭೀತಿ: ತಡರಾತ್ರಿ ಹರಿದು ಬರುತ್ತಿದ್ದ ಮಳೆ ನೀರನ್ನು ಕಂಡು ಮತ್ತೆ ನಗರದ ಕೆರೆ ಕೋಡಿ ಒಡೆದು ಹೋಗಿರಬಹುದೆಂಬ ಭಯ ಹೆಚ್ಚಾಗಿ ಸ್ಥಳೀಯರು ಅಧಿಕಾರಿಗಳಿಗೆ ಕರೆ ಮಾಡಲು ಆರಂಭಿಸಿದರು. 2 ಗಂಟೆ ವೇಳೆ ಕೆಲ ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ ಕಾರಣ ನಿದ್ರಿಸುತ್ತಿದ್ದ ನಿವಾಸಿಗಳು ಎದ್ದು ಕುಳಿತು ಇಡೀ ರಾತ್ರಿ ಜಾಗರಣೆ ಮಾಡುವಂತಾಯಿತು.

    ಜನಜೀವನ ಅಸ್ತವ್ಯಸ್ತ: ಮನೆಗಳಲ್ಲಿ ಮಂಡಿಯುದ್ದ ನೀರು ನಿಂತು ಮನೆಯ ವಸ್ತುಗಳೆಲ್ಲ ನೀರಿನಲ್ಲಿ ತೋಯ್ದುಹೋದವು. ಕಾರು, ದ್ವಿಚಕ್ರವಾಹನಗಳು ನೀರಿನಲ್ಲಿ ಮುಳುಗಿದವು. ಮಳೆಯ ನೀರಿನಲ್ಲಿ ಹರಿದು ಬಂದ ಹಾವು ಮತ್ತಿತರ ಜಲಚರಗಳಿಂದ ಹೆದರಿದ ಜನ ತಾರಸಿ ಮೇಲೇರಿ ಆಶ್ರಯ ಪಡೆಯುವಂತಾಯಿತು. ಹಿಪ್ಪೆ ಆಂಜನೇಯಸ್ವಾಮಿ ಬಡಾವಣೆ, ರಾಜಣ್ಣ ಬಡಾವಣೆ, ಎಂ.ಜಿ ರಸ್ತೆ, ಮರಿಯಪ್ಪ ಬಡಾವಣೆ, ಗಜಾರಿಯ ಬಡಾವಣೆ, ಬೈರವೇಶ್ವರ ಬಡಾವಣೆ, ಶೇಷು ಬಡಾವಣೆ, ಮತ್ತು ಚೆನ್ನಪ್ಪ ಬಡಾವಣೆಗಳು ಜಲಾವೃತಗೊಂಡಿದ್ದವು. ಭಿನ್ನಮಂಗಲ ಕೆರೆ ತುಂಬಿ ಹರಿದು ವಿಶ್ವಶಾಂತಿ ಆಶ್ರಮದ ಸಮೀಪದ ಎಸ್.ಎಂ.ಟೌನ್‌ಶಿಪ್ ಬಡಾವಣೆ, ಚಿನ್ನಪ್ಪ ಬಡಾವಣೆ ಮತ್ತು ಐತಿಹಾಸಿಕ ಮುಕ್ತನಾಥೇಶ್ವರ ದೇವಾಲಯ ಜಲಾವೃತವಾಗಿದ್ದವು. ಸೋಮವಾರ ಮಳೆಯ ನೀರು ಹೊರಹಾಕಲು ಜನ ಹರಸಾಹಸ ನಡೆಸುವಂತಾಯಿತು.

    ಕುಸಿದ ತಡೆಗೋಡೆ: ಮಳೆಯ ಅಬ್ಬರಕ್ಕೆ ವಾಜರಹಳ್ಳಿ ಸರ್ಕಾರಿ ಶಾಲಾ ತಡೆಗೋಡೆ ಕುಸಿದು ಬಿದ್ದಿದೆ. ಮತ್ತೊಂದೆಡೆ ತಗ್ಗುಪ್ರದೇಶದಲ್ಲಿದ್ದ ಶಾಲಾ ಕೊಠಡಿಗಳಿಗೂ ನೀರು ನುಗ್ಗಿದೆ. 1 ಕುರಿ ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿದೆ.

    ಶಾಸಕರ ಭೇಟಿ: ಸೋಮವಾರ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಳೆಹಾನಿ ಪರಿಶೀಲನೆ ನಡೆಸಿದರು. ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಮುಂಜಾಗ್ರತಾ ಕ್ರಮವಾಗಿ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ರಾಜಕಾಲುವೆಗಳ ಒತ್ತುವರಿ ಬಿಟ್ಟಲ್ಲಿ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ. ಸಂಭವಿಸಿರುವ ಸಣ್ಣಪ್ರಮಾಣದ ಹಾನಿಯನ್ನು ಸರಿಪಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು. ಜೆಡಿಎಸ್ ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ನಗರಸಭೆ ಹೆಚ್ಚುವರಿ ಸದಸ್ಯ ಆಂಜಿನಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಕೆಂಪರಾಜು, ಮಂಜುಳಮ್ಮ, ಮುಖಂಡ ಬಿ.ಎಂ.ಗಂಗಬೈಲಪ್ಪ ಇದ್ದರು.

    ಉಪಾಹಾರ ವಿತರಣೆ: ಮಳೆಯ ಅವಾಂತರದಿಂದಾಗಿ ತೊಂದರೆಗೊಳಗಾಗಿದ್ದ ವಸತಿ ಬಡಾವಣೆಗಳ ಜನರ ಸಹಾಯಕ್ಕೆ ಧಾವಿಸಿದ ನಗರದ ಪವಾಡ ಶ್ರೀಬಸವಣ್ಣದೇವರಮಠ ಶ್ರೀಗಳು ನಿವಾಸಿಗಳ ಮನೆಗೆ ಬೆಳಗಿನ ಉಪಾಹಾರ ಪೊಟ್ಟಣ ವಿತರಿಸಿದರು.


    ರಸ್ತೆ ಸಂಚಾರ ಬಂದ್, ಮುಳುಗಿದ ಕೋಳಿ ಸಾಕಣೆ ಕೇಂದ್ರ
    ವಿಜಯಪುರ: ಬರೋಬ್ಬರಿ 32 ವರ್ಷದ ಬಳಿಕ ಚಿಕ್ಕಬಳ್ಳಾಪುರ ರಸ್ತೆಯ ಅಮಾನಿಕೆರೆ ತುಂಬಿದ್ದು, ಕೆರೆ ಕೆಳಗಿನ ಭಾಗದ ಹಲವಾರು ಮನೆಗಳ ನಿವಾಸಿಗಳು ಆತಂಕಗೊಂಡಿದ್ದಾರೆ. ಪುರಸಭೆ ವತಿಯಿಂದ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ, ಚಿಕ್ಕಬಳ್ಳಾಪುರ-ವಿಜಯಪುರ ರಸ್ತೆಯ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ, ಕೋಳಿ ಸಾಕಣೆ ಕೇಂದ್ರಗಳು ನೀರಿನಿಂದ ಮುಳುಗಿ ಹೋಗಿವೆ.

    ವಿಜಯಪುರ-ಶಿಡ್ಲಘಟ್ಟ ರಸ್ತೆಯ ನಾಗರಬಾವಿ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ, ಚಿಕ್ಕಬಳ್ಳಾಪುರ ರಸ್ತೆಯ ಕೆರೆ ಏರಿ ಮೇಲೆರಿದ ಜನರು ಕೋಡಿ ಹರಿಯುವುದನ್ನು ಸಂತಸದಿಂದ ಕಣ್ತುಂಬಿಕೊಂಡರು. ಶಿಡ್ಲಘಟ್ಟ ರಸ್ತೆಯಲ್ಲಿನ ಶೃಂಗೇರಿ ಶಾರದಾ ಕಾನ್ವೆಂಟ್‌ನಲ್ಲಿ ಕೆರೆ ನೀರು ಹರಿದು, ಶಾಲೆಗೆ ರಜೆ ಪರಿಸ್ಥಿತಿ ನಿರ್ಮಾಣವಾಗಿದೆ.
    ಕೆರೆಯ ಕೋಡಿ ಬಳಿ, ನಾಗರಬಾವಿ ಬಳಿಯ ರಸ್ತೆಯ ಮೇಲೆ ಹರಿಯುತ್ತಿರುವ ನೀರಿನ ಬಳಿ ಮತ್ತಿತರೆಡೆಗಳಲ್ಲಿ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಶಿಡ್ಲಘಟ್ಟ ರಸ್ತೆಗೆ ತೆರಳುವ ರಸ್ತೆ ಬಂದ್ ಮಾಡಿದ್ದ ಕಾರಣ ವಾಹನ ಸವಾರರು ಪರದಾಡುವಂತಾಯಿತು.

    ದೇವನಹಳ್ಳಿ ತಾಲೂಕಿನ ವೆಂಕಟಗಿರಿ ಕೋಟಿ, ದಂಡಿಗಾನಹಳ್ಳಿ, ವಿಜಯಪುರದ ಕೆರೆಗಳು ಕೋಡಿ ಬಿದ್ದು ಅಪಾರ ಆಸ್ತಿಪಾಸ್ತಿಗೆ ಹಾನಿಯಾಗಿದೆ. 3 ದಿನದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಮೂರು ಕೆರೆಗಳು ಏಕ ಕಾಲದಲ್ಲಿ ಕೋಡಿ ಹರಿಯುತ್ತಿದ್ದು ದಂಡಿಗಾನಹಳ್ಳಿ -ಮುದ್ದೇನಹಳ್ಳಿ ಹಾಗೂ ವಿಜಯಪುರ-ಶಿಡ್ಲಘಟ್ಟಗಳಿಗೆ ಸಂಪರ್ಕಿಸುವ ರಸ್ತೆಗಳೂ ಜಲಾವೃತಗೊಂಡಿವೆ.

    ಭಾರಿ ಮಳೆಗೆ ಜಲಾವೃತ
    ದೊಡ್ಡಬಳ್ಳಾಪುರ:
    ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಕೆರೆಗಳು ಕೋಡಿ ಹರಿದಿದ್ದು, ಜಮೀನುಗಳು ಜಲಾವೃತಗೊಂಡಿವೆ. ಕೆಸ್ತೂರು ಕೆರೆ ಕೋಡಿ ಹರಿದಿದ್ದು, ಕೆಸ್ತೂರು ಗೇಟ್ ಬಳಿ ನೀರು ತೋಟಗಳಿಗೆ ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ 207ರ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಹಳ್ಳ ಮುಚ್ಚಿರುವುದರಿಂದ ನೀರೆಲ್ಲ ರಸ್ತೆ ಹಾಗೂ ತೋಟಗಳಿಗೆ ನುಗ್ಗಿದೆ. ಇಟ್ಟಿಗೆ ಶೆಡ್ ಸಂಪೂರ್ಣ ಜಲಾವೃತವಾಗಿದೆ.


    ಕೆಸ್ತೂರು ಕೆರೆ ಮಾತ್ರ ಕೋಡಿ ಬಿದ್ದಿದ್ದು ಈ ಭಾಗದ 9 ಕೆರೆಗಳು ಒಟ್ಟಿಗೆ ಕೋಡಿ ಹರಿದರೆ ಇಡೀ ರಸ್ತೆ, ಜಮೀನುಗಳೇ ಜಲಾವೃತವಾಗಲಿವೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸುಸಜ್ಜಿತ ರಾಜಕಾಲುವೆ ನಿರ್ಮಿಸಬೇಕು. ಹಲವೆಡೆ ಒತ್ತುವರಿಯಾಗಿರುವ ರಾಜಕಾಲುವೆ ಜಾಗವನ್ನು ತೆರವು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಘಾಟಿ ದೇವಾಲಯಕ್ಕೆ ನುಗ್ಗಿದ ನೀರು: ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಭಾನುವಾರ ತಡರಾತ್ರಿ ಸುರಿದ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ಹಾಗೂ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದೆ. ಘಾಟಿ ದೇಗುಲಕ್ಕೂ ನೀರು ನುಗ್ಗಿ ಮಂಡಿಯುದ್ದ ನೀರು ನಿಂತು ಅವಾಂತರ ಸೃಷ್ಟಿಯಾಯಿತು.


    ನಾಗರಕಟ್ಟೆ ಸಮೀಪದ ವಿಎಸ್‌ವಿಎನ್‌ವಿ ಕಲ್ಯಾಣ ಮಂಟಪದ ನೆಲಮಹಡಿಯಲ್ಲಿರುವ ಊಟದ ಕೋಣೆ ಸಂಪೂರ್ಣ ಜಲಾವೃತಗೊಂಡಿದೆ, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಮನೆಗಳಿಗೆ ನುಗ್ಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕಲ್ಯಾಣ ಮಂಟಪಕ್ಕೆ ನುಗ್ಗಿದ ನೀರನ್ನು ಮೋಟರ್ ಪಂಪ್ ಅಳವಡಿಸಿ ಹೊರ ಹಾಕಲಾಯಿತು.

    ಜಮೀನುಗಳಿಗೆ ಜಲದಿಗ್ಭಂಧನ
    ದೇವನಹಳ್ಳಿ: ಭಾನುವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಹಲವು ಕಡೆಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿ ಜಲದಿಗ್ಬಂಧನ ನಿರ್ಮಾಣವಾಗಿದೆ, ಲಕ್ಷಾಂತರ ರೂ.ಮೌಲ್ಯದ ಬೆಳೆ ಹಾನಿಯಾಗಿದೆ.
    ನಿರಂತರ ಸುರಿಯುತ್ತಿರುವ ಮಳೆಗೆ ತುಂಬಿರುವ ಕೆರೆಗಳು ಕೋಡಿ ಹರಿದು ರಸ್ತೆ, ಜಮೀನು ಸೇರಿ ಎಲ್ಲ ಕಡೆಗಳಲ್ಲೂ ಆವೃತವಾಗಿದೆ. ಅಂಡರ್‌ಪಾಸ್‌ಗಳಲ್ಲಿ ಮಂಡಿಯುದ್ದ ನೀರು ನಿಂತು ವಾಹನ ಸಂಚಾರಕ್ಕೆ ನಿರ್ಬಂಧ ಹಾಕಿದೆ. ಕನ್ನಮಂಗಲ ಪಾಳ್ಯದಲ್ಲಿ ಮನೆಯೊಂದರ ತಡೆಗೋಡೆ ಕುಸಿದುಬಿದ್ದಿದೆ, ತಡೆಗೋಡೆ ವಿದ್ಯುತ್ ಕಂಬಗಳ ಮೇಲೆ ಬಿದ್ದು ವಿದ್ಯುತ್‌ಕಂಬಗಳು ಮುರಿದು ನಿಂತಿದ್ದ ಆಟೋ ಮತ್ತಿತರ ವಾಹನಗಳ ಮೇಲೆ ಮುರಿದು ಬಿದ್ದಿದೆ. ಅಣ್ಣೇಶ್ವರ ಗ್ರಾಮದಲ್ಲಿ ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿ ಗೋಡೆಗಳು ಕುಸಿದಿವೆ. ಕೆಂಪತಿಮ್ಮನಹಳ್ಳಿಯಲ್ಲಿ ವಿದ್ಯುತ್ ಕಂಬ ಧರೆಗುರುಳಿದೆ. ಅಗಲಕೋಟೆ ವಿಜಯಪುರ ಸೇರಿ ಬಹುತೇಕ ಕಡೆ ಗೋಡೆಗಳು ಕುಸಿದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts