More

    ಬಾಣವಾರ ಕಾಡುಹಾಡಿಗಿಲ್ಲ ಸೌಕರ್ಯ

    ಶನಿವಾರಸಂತೆ: ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಶಾಲನಗರ-ಶನಿವಾರಸಂತೆ ಹೆದ್ದಾರಿ ಬಳಿಯ ಬಾಣವಾರ ಕಾಡುಹಾಡಿ ಗಿರಿಜನ ನಿವಾಸಿಗಳಿಗೆ ಹಕ್ಕುಪತ್ರ ದೊರೆಯದ ಹಿನ್ನೆಲೆಯಲ್ಲಿ ಮೂಲಸೌಕರ್ಯ ಪಡೆಯಲು ಸಾಧ್ಯವಾಗುತ್ತಿಲ್ಲ.

    2002ರಿಂದ ಬಾಣವಾರ ಕಾಡುಹಾಡಿಯಲ್ಲಿ ಜೇನು ಕುರುಬ ಜನಾಂಗದವರು ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಪ್ರಾರಂಭದಲ್ಲಿ ಇಲ್ಲಿ ಸುಮಾರು 35 ಕುಟುಂಬಗಳು ಗುಡಿಸಲು ನಿರ್ಮಿಸಿ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದವು. ಆದರೆ ಇಲ್ಲಿಗೆ ಮೂಲಸೌಕರ್ಯ ಎಂಬುದು ಮರೀಚಿಕೆಯಾಗಿದೆ. ಪರಿಣಾಮ, ಇಲ್ಲಿ ವಾಸವಿದ್ದವರು ಬೇರೆ ಊರುಗಳಿಗೆ ವಲಸೆ ಹೋದರು.

    ಪ್ರಸ್ತುತ ಕಾಡುಹಾಡಿಯಲ್ಲಿ 9 ಕುಟುಂಬ ವಾಸವಿದ್ದು, 65 ಜನಸಂಖ್ಯೆ ಇದೆ. ಬಹುತೇಕರು ಮತದಾನದ ಹಕ್ಕು ಹೊಂದಿದ್ದು, ಪ್ರತಿಯೊಬ್ಬರ ಬಳಿಯೂ ಆಧಾರ್ ಕಾರ್ಡ್ ಇದೆ. ಕಾಡುಹಾಡಿಯಲ್ಲಿ ಒಬ್ಬ ಪದವೀಧರನಿದ್ದು, ಮೂವರು ಯುವತಿಯರು ಪಿಯುಸಿ ವರೆಗೆ ವ್ಯಾಸಂಗ ಮಾಡಿದ್ದಾರೆ. ಇಷ್ಟೆಲ್ಲ ಅರ್ಹತೆ ಇದ್ದರೂ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಕೆಲಸ ಸಿಗದ ಪರಿಣಾಮ ಕೂಲಿ ಕೆಲಸಕ್ಕೆ ಹೋಗುವಂತಾಗಿದೆ. ಇನ್ನು ಹಾಡಿಯಲ್ಲಿನ ಬಹುತೇಕ ಮಕ್ಕಳು ಶಾಲೆಗೆ ಹೋಗುತ್ತಿರುವುದು ಮತ್ತೊಂದು ವಿಶೇಷ.

    ಹಕ್ಕುಪತ್ರಕ್ಕೆ ತಕರಾರು: ಹಕ್ಕುಪತ್ರ ನೀಡಲು ಅರಣ್ಯ ಇಲಾಖೆ ಹಾಡಿ ಜನರಿಗೆ ಮೂಲದಾಖಲೆ ಕೇಳುತ್ತಿರುವ ಹಿನ್ನೆಲೆಯಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮ ಅರಣ್ಯ ಹಕ್ಕು ಸಮಿತಿಯಡಿ ಮನೆ ನಿರ್ಮಿಸಲು ಹಕ್ಕುಪತ್ರ ವಿತರಿಸುವ ಅವಕಾಶವಿದ್ದರೂ ಅರಣ್ಯ ಇಲಾಖೆ ಮನಸ್ಸು ಮಾಡುತ್ತಿಲ್ಲ. ಹಾಡಿಯಲ್ಲಿ ವಾಸವಿರುವುದಕ್ಕೆ ಮೂಲಕ ದಾಖಲಾತಿ ನೀಡಿದರೆ ಹಕ್ಕುಪತ್ರಕ್ಕೆ ಅನುಮತಿ ಕೊಡುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಮೂಲ ದಾಖಲಾತಿ ನೀಡಲು ಇಲ್ಲಿನ ನಿವಾಸಿಗಳಿಗೆ ಸಾಧ್ಯವಾಗುತ್ತಿಲ್ಲ. ಐಟಿಡಿಪಿ, ಸಮಾಜ ಕಲ್ಯಾಣ ಇಲಾಖೆ, ಗ್ರಾಪಂ ವತಿಯಿಂದ ಮನೆ ನಿರ್ಮಿಸಿಕೊಡಲು ಸಿದ್ಧವಿದ್ದರೂ ಹಕ್ಕುಪತ್ರ ಇಲ್ಲದ ಕಾರಣದಿಂದ ಯಾವುದೇ ಮೂಲ ಸೌಕರ್ಯ ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ.

    ಹಾಡಿ ಸಮೀಪದ ರಸ್ತೆ ಬದಿಯಲ್ಲಿ ಗ್ರಾಪಂನಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗಿದೆ. ಆದರೆ ಮನೆ, ವಿದ್ಯುತ್, ರಸ್ತೆ -ಚರಂಡಿ ಎಂಬುದು ಗಗಮ ಕುಸುಮವಾಗಿದೆ. ಹುಲ್ಲಿನ ಗುಡಿಸಲು, ಟಾರ್ಪಾಲ್ ಹಾಕಿಕೊಂಡು ಹಾಡಿ ಜನರು ಜೀವನ ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ಗುಡಿಸಿಲಿನ ಮೇಲೆ ಮರದ ಕೊಂಬೆಗಳು ಯಾವ ಸಂದರ್ಭದಲ್ಲಾದರೂ ಬಿದ್ದು ಅನಾಹುತ ಆಗಬಹುದೆಂಬ ಭಯದಲ್ಲಿ ಜೀವನ ನಡೆಸುವಂತಾಗಿದೆ. ಇಲ್ಲಿ ವಾಸ ಮಾಡುವ ಇಬ್ಬರ ಮನೆಯಲ್ಲಿ ಮಾತ್ರ ಗ್ಯಾಸ್ ಸಿಲಿಂಡರ್ ಇದ್ದು, ಇನ್ನುಳಿದ ಮನೆಯವರು ಇಂದಿಗೂ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದಾರೆ.

    ಅಜ್ಜಯ್ಯಸ್ವಾಮಿ ಮತ್ತು ಅಜ್ಜಮ್ಮ ಹಾಗೂ ಗಣಪತಿಯನ್ನು ಕಾಡಿನೊಳಗೆ ಆರಾಧಿಸಲಾಗುತ್ತಿದೆ. ವರ್ಷಕ್ಕೊಮ್ಮೆ ಈ ಆರಾಧನೆ ನಡೆಯಲಿದೆ. ಇನ್ನು ದನ, ಕೋಳಿ, ನಾಯಿ ಇತರ ಪ್ರಾಣಿಗಳನ್ನು ಗಿರಿಜನರು ಸಾಕಿದ್ದಾರೆ. ಶಾಲೆ ಬಿಟ್ಟ ಮಕ್ಕಳು ಪಾಲಕರೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಗುಡಿಸಲು ಸುತ್ತವಿರುವ ಖಾಲಿ ಜಾಗದಲ್ಲಿ ಕೃಷಿ ಮಾಡುವ ಆಸಕ್ತಿ ಇವರಿಗಿದ್ದರೂ ಅರಣ್ಯ ಇಲಾಖೆ ಅದನ್ನು ಮಾಡಲು ಬಿಡುತ್ತಿಲ್ಲ. ಇದರಿಂದ ಜಾಗವನ್ನು ಖಾಲಿ ಬಿಟ್ಟಿದ್ದಾರೆ. ಇದರ ಹೊರತಾಗಿಯೂ ಕೆಲವರು ಬಾಳೆ, ಅಡಕೆ ಗಿಡ ಬೆಳೆದಿದ್ದಾರೆ. ಕೆಲವರು ಸಿಲ್ವರ್ ಗಿಡ ನೆಟ್ಟಿದ್ದು, ಅದು ಕಟಾವಿಗೆ ಬಂದಿದೆ. ಆದರೆ ಅದನ್ನು ಕಟಾವು ಮಾಡಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಇದರಿಂದಾಗಿ ಬೇರೆ ಬೆಳೆಗಳನ್ನು ಬೆಳೆಯುವ ಆಸಕ್ತಿ ಇವರಲ್ಲಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಇನ್ನು ಗುಡಿಸಲು ಅರಣ್ಯದಂಚಿನಲ್ಲಿರುವುದರಿಂದ ಕಾಡಾನೆಗಳು ಇವರ ಗಡಿಸಿಲಿನತ್ತ ಬರುವುದು ಸಾಮಾನ್ಯ.

    ಬಾಣವಾರ ಕಾಡುಹಾಡಿ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ದಾಖಲೆ ಸರಿಯಿಲ್ಲದಿದ್ದರೆ ಮೂಲಸೌಕರ್ಯ ಒದಗಿಸಲು ಆಗುವುದಿಲ್ಲ. ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸಲಾಗುವುದು.
    ಸಿದ್ದೇಗೌಡ ಸಮಾಜ ಕಲ್ಯಾಣಾಧಿಕಾರಿ, ಸೋಮವಾರಪೇಟೆ ತಾಲೂಕು

    ಮೂಲತಃ ನಾವು ಬಾಣವಾರ ಗಿರಿಜನ ನಿವಾಸಿಗಳಾಗಿದ್ದು, 20 ವರ್ಷಗಳಿಂದ ಕಾಡುಹಾಡಿಯಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೆ ನಮಗೆ ಯಾರಿಗೂ ವಾಸ ಮಾಡಲು ಮನೆ ಇಲ್ಲ. ಹೀಗಾಗಿ ಗುಡಿಸಲು ಕಟ್ಟಿಕೊಂಡು ಭಯದಿಂದ ಬದುಕುತಿದ್ದೇವೆ. ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಹಾಡಿಗೆ ಭೇಟಿ ನೀಡಿದಾಗ ಭರವಸೆ ಕೊಡುತ್ತಾರೆಯೇ ಹೊರತು ಸಮಸ್ಯೆಗಳನ್ನು ಈಡೇರಿಸುವ ಕೆಲಸ ಮಾಡಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ನಮಗೆ ಹಕ್ಕುಪತ್ರ ಕೊಡದಿರುವುದರಿಂದ ಸರ್ಕಾರದಿಂದ ಮೂಲಸೌಲಭ್ಯ ದೊರಕದಂತಾಗಿದೆ.
    ಚಂದ್ರಿ ಹಾಡಿ ಮಹಿಳೆ

    ಹಕ್ಕುಪತ್ರ, ಮನೆ, ಶೌಚಗೃಹ, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳನ್ನು ನಮ್ಮ ಹಾಡಿಗೆ ಕಲ್ಪಿಸಿಕೊಡುವಂತೆ ಅನೇಕ ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಈವರೆಗೆ ಸ್ಪಂದನೆ ಸಿಕ್ಕಿಲ್ಲ. ಹಕ್ಕುಪತ್ರಕ್ಕಾಗಿ ಮನವಿ ಕೊಡುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಾವು ಇಲ್ಲಿ ವಾಸವಾಗಿರುವುದಕ್ಕೆ ಮೂರು ತಲೆಮಾರಿನ ದಾಖಲಾತಿ ಕೇಳುತ್ತಾರೆ. ನಮಗೆ ಅಷ್ಟೊಂದು ಹಿಂದಿನ ದಾಖಲಾತಿ ಕೊಡಲು ಸಾಧ್ಯವಾಗುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ನಮಗೆ ಮನೆ ಕಟ್ಟಿಕೊಳ್ಳಲು ಹಕ್ಕುಪತ್ರ ನೀಡಲಿ.
    ರಾಣಿ ಹಾಡಿ ಮಹಿಳೆ, ಬಾಣವಾರ

    ನಾವು ನಿತ್ಯ ಕತ್ತಲೆಯಲ್ಲಿ ಜೀವನ ನಡೆಸುವಂತಾಗಿದೆ. ನಮಗೆ ಸೀಮೆಎಣ್ಣೆಯನ್ನೂ ಕೊಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಸ್ಪಂದಿಸುತ್ತೇವೆಂದು ಹೇಳಿ ತೆರಳುತ್ತಾರೆ. ಆದರೆ ಮತ್ತೆ ಇತ್ತ ಬರುವುದಿಲ್ಲ. ಇನ್ನು ಎಷ್ಟು ವರ್ಷ ನಾವು ಈ ರೀತಿ ಇರಬೇಕು ಎಂಬುದು ತಿಳಿಯುತ್ತಿಲ್ಲ.
    ಕಮಲಾ ಹಾಡಿ ಮಹಿಳೆ ಬಾಣವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts