ತ್ಯಾಜ್ಯಮುಕ್ತ ಬನಶಂಕರಿ ದೇಗುಲ

ಪಂಕಜ ಕೆ.ಎಂ. ಬೆಂಗಳೂರು
ರಾಜಧಾನಿಯ ಪರಿಸರಕ್ಕೆ ಮಾರಕವಾಗುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ದೇವಾಲಯಗಳೂ ಹೊರತಲ್ಲ. ಹೀಗಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಜರಾಯಿ ಇಲಾಖೆ ಹೆಜ್ಜೆ ಇಟ್ಟಿದ್ದು, ಆ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಬನಶಂಕರಿ ದೇವಾಲಯದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಿಸಿದೆ.

ಅತಿಹೆಚ್ಚು ಆದಾಯವನ್ನು ಹೊಂದಿರುವ ಬನಶಂಕರಿ ದೇಗುಲದಲ್ಲಿ ನಿತ್ಯ ನೂರಾರು ಕೆ.ಜಿ. ತ್ಯಾಜ್ಯ ಸಂಗ್ರಹವಾಗುತ್ತದೆ. ಆದರೆ ಇದರ ಸಮರ್ಪಕ ವಿಲೇವಾರಿ ಸಮಸ್ಯೆಯಾಗುತ್ತಿತ್ತು. ಅನ್ನದಾಸೋಹ ಭವನದಲ್ಲಿ ಹಸಿತ್ಯಾಜ್ಯ ವಿಲೇವಾರಿ ಇನ್ನೂ ಸವಾಲಾಗಿತ್ತು. ಈಗ ಅದೇ ತ್ಯಾಜ್ಯ ಬಳಸಿ ದೇವಳದ ಆವರಣದಲ್ಲೇ ಗೊಬ್ಬರ ತಯಾರಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 28.17 ಲಕ್ಷ ರೂ. ವೆಚ್ಚದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಹಸಿ ಹಾಗೂ ಒಣ ತ್ಯಾಜ್ಯ ಬಳಸಿ 4 ತಿಂಗಳಲ್ಲಿ 400 ಕೆ.ಜಿ.ಗೂ ಅಧಿಕ ಗೊಬ್ಬರ ತಯಾರಿಸಲಾಗಿದೆ.

ಬೆಂಗಳೂರು ನಗರದಲ್ಲಿ ತಾರಸಿ ತೋಟ ಹೊಂದಿರುವವರಿಂದ ಈ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ಕೆ.ಜಿ. ಗೊಬ್ಬರ 15 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಆದಾಯದ ಜತೆಗೆ ದೇವಾಲಯದ ಆವರಣ ತ್ಯಾಜ್ಯಮುಕ್ತವಾಗುತ್ತಿದೆ.

ಸಿಬ್ಬಂದಿ ನೇಮಕ: ದೇವಾಲಯದ ಆವರಣದಲ್ಲಿ 15*15 ವಿಸ್ತೀರ್ಣದಲ್ಲಿ 24.69ಲಕ್ಷ ರೂ. ವೆಚ್ಚದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲಾಗಿದ್ದು, 3.48 ಲಕ್ಷ ರೂ. ವೆಚ್ಚದಲ್ಲಿ ಗೊಬ್ಬರ ತಯಾರಿಕೆ ಯಂತ್ರ ಅಳವಡಿಸಲಾಗಿದೆ. ದೇವಾಲಯವೇ ನಿರ್ವಹಣೆ ಹೊಣೆ ಹೊತ್ತಿದ್ದು, ನಾಲ್ವರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇವಾಲಯದಲ್ಲಿ ಸಂಗ್ರಹವಾಗುವ ಹೂ, ಮರಗಳಿಂದ ಉದುರಿದ ತರಗೆಲೆ, ಅನ್ನದಾಸೋಹ ಭವನದಲ್ಲಿನ ತರಕಾರಿ ಸಿಪ್ಪೆ ಹಾಗೂ ಉಳಿದ ಆಹಾರ ಬಳಸಿ ಈ ಗೊಬ್ಬರ ತಯಾರಿಸಲಾಗುತ್ತದೆ.

ಕೆಲ ವರ್ಷಗಳ ಹಿಂದೆ ಇದೇ ರೀತಿ ತ್ಯಾಜ್ಯ ಸಂಸ್ಕರಣಾ ಘಟಕದ ಜತೆಗೆ ಜೈವಿಕ ಇಂಧನ ತಯಾರಿಕೆ ಘಟಕ ಸ್ಥಾಪಿಸಲಾಗಿತ್ತು. ಅದರ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿತ್ತು. ಆದರೆ ನಿರ್ವಹಣೆಯ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಯಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಅದೇ ಘಟಕವನ್ನು ನವೀಕರಿಸಿ ಪುನರಾರಂಭಿಸಲಾಗಿದೆ.

ನಿಂಬೆ ರಸದಿಂದ ಅರಿಶಿನ: ಬನಶಂಕರಿ ದೇವಾಲಯದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಅಮಾವಾಸ್ಯೆ, ಹುಣ್ಣಿಗೆ ಸೇರಿ ಇತರೆ ವಿಶೇಷ ದಿನಗಳಲ್ಲಿ ಭಕ್ತರು ನಿಂಬೆ ಹಣ್ಣಿನ ದೀಪ ಬೆಳಗಿ ಪ್ರಾರ್ಥಿಸುತ್ತಾರೆ. ಇದರಿಂದ ನೂರಾರು ಲೀಟರ್ ನಿಂಬೆ ರಸ ಸಂಗ್ರಹವಾಗುತ್ತದೆ. ಈ ರಸವನ್ನು ಅರಿಶಿನ ತಯಾರಿಕೆಗೆ ನೀಡಲಾಗುತ್ತದೆ. ಇದಕ್ಕಾಗಿ ಆವರಣದಲ್ಲಿ 150 ಕ್ಯಾನ್‌ಗಳನ್ನು ಇರಿಸಲಾಗಿದೆ. ಮಠವೊಂದರ ಸಿಬ್ಬಂದಿ ಪ್ರತಿ ತಿಂಗಳು 24 ಸಾವಿರ ರೂ. ನೀಡಿ ನಿಂಬೆ ರಸವನ್ನು ಕೊಂಡೊಯ್ಯುತ್ತಾರೆ. ಇದರಿಂದ ಆವರಣ ಸ್ವಚ್ಛವಾಗುವುದರ ಜತೆಗೆ ಆದಾಯವೂ ಬರುತ್ತಿದೆ.

ಅಡಿಕೆ ತಟ್ಟೆ ಬಳಕೆ ನಿಷೇಧ: ನಿಂಬೆ ದೀಪ ಬೆಳಗಿಸುವವರು ಹೆಚ್ಚಿನವರು ಅಡಿಕೆ ತಟೆಯಲ್ಲಿ ದೀಪ ಬೆಳಗಿಸಿ ಅದನ್ನು ಅಲ್ಲೇ ಇಟ್ಟು ಹೋಗುತ್ತಿದ್ದರು. ಇದರಿಂದ ಅತ್ಯಧಿಕ ಪ್ರಮಾದಲ್ಲಿ ತ್ಯಾಜ್ಯ ಶೇಖರಣೆಯಾಗುತ್ತಿತ್ತು. ಅಲ್ಲದೆ ದೇವಾಲಯದಲ್ಲಿ ಆರಂಭಿಸಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಅಡಿಕೆ ಪಟ್ಟಿಯನ್ನು ಬಳಸಿ ಗೊಬ್ಬರ ಮಾಡುವ ವಿಧಾನವಿಲ್ಲ. ಹಾಗಾಗಿ ಅಡಿಕೆ ತಟ್ಟೆ ಬಳಕೆ ಸಂಪೂರ್ಣ ನಿಷೇಧಿಸಲಾಗಿತ್ತು. ಭಕ್ತರು ಮನೆಯಿಂದ ತಟ್ಟೆ ತಂದು ಬೆಳಗಿಸಿ ದೀಪ ಬಳಗಿಸುವಂತೆ ಸೂಚಿಸಲಾಗಿದೆ.

ಪ್ಲಾಸ್ಟಿಕ್‌ಮುಕ್ತ ಆಲಯ: ದೇವಾಲಯಕ್ಕೆ ಬರುವ ಭಕ್ತರು ಪ್ಲಾಸ್ಟಿಕ್ ಕವರ್‌ಗಳಲ್ಲಿ ಪೂಜೆ ಸಾಮಗ್ರಿಗಳನ್ನು ಹಾಗೂ ನಿಂಬೆ ಹಣ್ಣು ತಂದು ಆಲಯದಲ್ಲಿ ಎಲ್ಲೆಂದರಲ್ಲಿ ಕವರ್ ಎಸೆದು ಹೋಗುತ್ತಿದ್ದರು. ಇದೀಗ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಭಕ್ತರು ಬುಟ್ಟಿ ಇಲ್ಲವೆ ಬಟ್ಟೆ ಬ್ಯಾಗ್‌ಗಳಲ್ಲಿ ಪೂಜಾ ಸಾಮಗ್ರಿ ತರುವ ನಿಯಮ ಜಾರಿಗೊಳಿಸಲಾಗಿದೆ.

ಕೋಟ್:
ಮನಸ್ಸಿನ ನೆಮ್ಮದಿ, ಶಾಂತಿ ಅರಸಿ ಬರುವ ದೇವಾಲಯ ಒಂದು ಪವಿತ್ರ ತಾಣ. ಅಂತಹ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಭಕ್ತರ ಕರ್ತವ್ಯವೂ ಆಗಿದೆ. ದೇವಾಲಯಕ್ಕೆ ಬರುವ ಭಕ್ತರು ಇಲ್ಲಿನ ನಿಯಮಗಳನ್ನು ಸೂಕ್ತ ರೀತಿಯಲ್ಲಿ ಪಾಲಸುವ ಮೂಲಕ ಪರಿಸರಸ್ನೇಹಿ ಆಲಯವನ್ನಾಗಿಸಲು ಸಹಕರಿಸಬೇಕು.
ಲಕ್ಷ್ಮೀ, ಬನಶಂಕರಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ

Share This Article

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…