More

    Banadariyalli Movie Review: ಪ್ರೀತಿ, ನೋವಿನ ಪ್ರಯಾಣ

    ಚಿತ್ರ: ಬಾನದಾರಿಯಲ್ಲಿ
    ನಿರ್ದೇಶನ: ಪ್ರೀತಮ್ ಗುಬ್ಬಿ
    ನಿರ್ಮಾಣ: ಶ್ರೀ ವಾರಿ ಟಾಕೀಸ್
    ತಾರಾಗಣ: ಗಣೇಶ್, ರುಕ್ಮಿಣಿ ವಸಂತ್, ರಂಗಾಯಣ ರಘು, ರೀಷ್ಮಾ ನಾಣಯ್ಯ ಮುಂತಾದವರು
    ಸ್ಟಾರ್: 3

    | ಪ್ರಮೋದ ಮೋಹನ ಹೆಗಡೆ

    ‘ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ..’ ಈ ಹಾಡನ್ನು ನಾಯಕಿಯ ತಂದೆ ಹೇಳುತ್ತಲೇ ಆಕೆ ಪುಟ್ಟ ಹುಡುಗಿಯಾಗಿದ್ದಾಗಿಂದಲೂ ನಿದ್ರೆ ಮಾಡಿಸುತ್ತಿರುತ್ತಾರೆ. ಆ ತಂದೆ- ಮಗಳಿಗೆ ಅದೊಂದು ರೀತಿಯ ಜೋಗುಳ ಗೀತೆ ಮಾತ್ರವಲ್ಲ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ. ಎಷ್ಟೇ ಕೋಪವಿದ್ದರೂ ಆ ಹಾಡು ಇಬ್ಬರ ಮನಸ್ಸನ್ನೂ ತಿಳಿಯಾಗಿಸುತ್ತದೆ. ಮಗಳಿಗಾಗಿ ಸರ್ವಸ್ವವನ್ನೂ ಮುಡಿಪಾಗಿಟ್ಟ ತಂದೆ, ತಂದೆಯ ಮಾತನ್ನು ಮೀರದ ಮಗಳು. ಇವರಿಬ್ಬರ ಬದುಕಿನಲ್ಲಿ ನಾಯಕನ ಪ್ರವೇಶ. ಅಲ್ಲಿಂದ ಅವರ ಬದುಕಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎನ್ನುವುದೇ ನಿರ್ದೇಶಕ ಪ್ರೀತಮ್ ಗುಬ್ಬಿ ಆ್ಯಕ್ಷನ್-ಕಟ್ ಹೇಳಿರುವ ‘ಬಾನದಾರಿಯಲ್ಲಿ’. ಇದು ಕೇವಲ ಪ್ರೇಮಕಥೆಯಲ್ಲ. ಪ್ರೀತಿಯ ಬಗ್ಗೆ ಇರುವ ಕಥೆ. ‘ಪ್ರೀತಿ ದೂರವಾದಾಗ ಆಗುವುದಕ್ಕಿಂತ ಹೆಚ್ಚು ನೋವು ಪ್ರೀತಿಸಿದವರು ದೂರ ಆದಾಗ ಆಗುತ್ತದೆ’ ಎನ್ನುತ್ತಾನೆ ನಾಯಕ. ಆ ಪ್ರೀತಿಸದವರು ದೂರಾದ ಬಳಿಕ ಅವರಿಗಾಗಿ ಏನೆಲ್ಲ ಸಹಿಸಿಕೊಳ್ಳುತ್ತಾನೆ, ಏನೆಲ್ಲ ಮಾಡುತ್ತಾನೆ ಎನ್ನುವುದನ್ನು ಹಲವು ಹಂತಗಳಲ್ಲಿ ಚಿತ್ರದಲ್ಲಿ ಕಾಣಬಹುದು. ಇಲ್ಲಿ ತಂದೆ-ಮಗಳ ಪ್ರೀತಿಯಿದೆ, ಹುಡುಗ-ಹುಡುಗಿಯ ಪ್ರೀತಿ ಇದೆ, ಮಾವ-ಅಳಿಯನ ಪ್ರೀತಿಯಿದೆ, ಮನುಷ್ಯ-ಮನುಷ್ಯ ನಡುವಿನ ಪ್ರೀತಿ, ಪರಿಸರದ ಬಗೆಗಿನ ಪ್ರೀತಿ, ಪ್ರಾಣಿಗಳ ಮೇಲಿನ ಪ್ರೀತಿ.. ಹೀಗೆ ಎಲ್ಲವನ್ನೂ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ ಪ್ರೀತಮ್. ಇದೊಂದು ಭಾವತೀವ್ರತೆಯ ಚಿತ್ರ.

    ಗಣೇಶ್, ರುಕ್ಮಿಣಿ, ರಂಗಾಯಣ ರಘು ಅಭಿನಯವೇ ಚಿತ್ರದ ಶ್ರೀಮಂತಿಕೆ. ಪಾತ್ರದ ಅಂತರಾಳದ ಸಂಕಟವನ್ನು, ತೊಳಲಾಟ, ಹತಾಶೆಯನ್ನು ಪ್ರೇಕ್ಷಕನ ಮನಸ್ಸಿಗೆ ನಾಟುವಂತೆ ಮಾಡುವುದರಲ್ಲಿ ಗಣೇಶ್ ಎತ್ತಿದ ಕೈ. ಅದನ್ನು ಈ ಚಿತ್ರದಲ್ಲೂ ಕಾಣಬಹುದು. ಇನ್ನು, ವಿಷಾದ ತುಂಬಿದ ಮುಗ್ಧ ತಂದೆಯ ಪಾತ್ರದಲ್ಲಿ ರಂಗಾಯಣ ರಘು ಅಭಿನಯ ಮೆಚ್ಚುವಂಥದ್ದು. ಅದೇ ರೀತಿ ರುಕ್ಮಿಣಿ ವಸಂತ್ ಕೂಡ ಪಾತ್ರಕ್ಕೆ ಜೀವ ತುಂಬಿ, ಗೆದ್ದಿದ್ದಾರೆ. ರೀಷ್ಮಾ ನಾಣಯ್ಯ ಲವಲವಿಕೆ ಇಷ್ಟವಾಗುತ್ತದೆ. ಕೀನ್ಯಾ ದೇಶದ ಹಲವು ದೃಶ್ಯಗಳನ್ನು ಛಾಯಾಗ್ರಾಹಕ ಅಭಿಲಾಷ್ ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಮಾಸ್ತಿ ಸಂಭಾಷಣೆ ಅಲ್ಲಲ್ಲಿ ನಗಿಸುತ್ತಾ, ಭಾವನೆಗಳನ್ನು ಜಾಗೃತಗೊಳಿಸುತ್ತಾ ಸಾಗುತ್ತದೆ.

    ಚಿತ್ರದ ವಿಷಯ ಹೊಸತನದಿಂದ ಕೂಡಿರಬೇಕು ಎನ್ನುವ ಉದ್ದೇಶ ಹಾಗೂ ಈ ಕಾಲಕ್ಕೆ ಅಗತ್ಯವಿರುವ ್ರೆಶ್‌ನೆಸ್ ನೀಡುವ ಪ್ರಯತ್ನ ಕಾಣುತ್ತದೆ. ಜತೆಗೆ ಕಥೆಯಲ್ಲಿ ಇನ್ನೂ ಸ್ವಲ್ಪ ಹಿಡಿತ ಇದ್ದಿದ್ದರೆ, ಚಿತ್ರಕಥೆ ಇನ್ನಷ್ಟು ಚುರುಕಾಗಿದ್ದಿದ್ದರೆ, ಚಿತ್ರ ಮತ್ತೊಂದು ಹಂತ ಮೇಲೇರುತ್ತಿತ್ತು. ಇರಲಿ, ಪ್ರೇಮ, ವಿರಹ ಹೀಗೆ ಒಂದು ಭಾವನಾತ್ಮಕವಾದ ಬಾನಿನಲ್ಲಿ ತೇಲಾಡಬೇಕು ಎನ್ನುವವರು, ಗಣೇಶ್, ರುಕ್ಮಿಣಿ, ರಂಗಾಯಣ ರಘು ನಟನೆ ಇಷ್ಟಪಡುವವರಿಗೆ ‘ಬಾನದಾರಿಯಲ್ಲಿ’ ಒಂದೊಳ್ಳೆ ಆಯ್ಕೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts