More

    ಬುಲ್‌ಟ್ರಾಲ್ ಮೀನುಗಾರಿಕೆಗೆ ಕಡಿವಾಣ, ನಿಷೇಧ ತೆರವಿಗೆ ಮೀನುಗಾರರ ಒತ್ತಾಯ

    ಗಂಗೊಳ್ಳಿ: ಮರವಂತೆ ಸಮೀಪ ಕಾನೂನುಬಾಹಿರ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದ ಬೋಟುಗಳ ವಿರುದ್ಧ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸರು ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

    ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧವಿದ್ದರೂ ಮರವಂತೆ ಸಮೀಪ 100 ಮೀಟರ್ ದೂರದಲ್ಲಿ ಮೀನುಗಾರಿಕೆ ನಡೆಸಲಾಗುತ್ತಿದೆ ಎಂದು ನಾಡದೋಣಿ, ಕೈರಂಪಣಿ ಹಾಗೂ ಪಾತಿ ದೋಣಿಗಳ ಮೀನುಗಾರರು ಕರಾವಳಿ ಕಾವಲು ಪೊಲೀಸರಿಗೆ ಮೌಖಿಕ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮೀನುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿದ ಕರಾವಳಿ ಕಾವಲು ಪೊಲೀಸರು ಮರವಂತೆ ಸಮೀಪ ಕಡಲಿನಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದ ಬೋಟುಗಳನ್ನು ಪತ್ತೆ ಹಚ್ಚಿ ವರದಿ ಸಲ್ಲಿಸಿದ್ದಾರೆ. ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನಂಜಪ್ಪ ನಿರ್ದೇಶನದಂತೆ ಎಎಸ್‌ಐ ಭಾಸ್ಕರ್, ಸಿಬ್ಬಂದಿ ಉದಯ ಗೌಡ, ರಾಘವೇಂದ್ರ, ಯುವರಾಜ್, ಗಣೇಶ, ಕೆಎನ್‌ಡಿ ಸಿಬ್ಬಂದಿ ಸುರೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಮೀನುಗಾರಿಕೆ ಪ್ರಾರಂಭದ ಮೂರು ತಿಂಗಳು ಸಮುದ್ರ ತಳಮಟ್ಟದ ನೀರು ತಂಪಾಗಿರುವುದರಿಂದ ಮೀನುಗಳ ಓಡಾಟ ಮೇಲ್ಭಾಗದಲ್ಲಿರುತ್ತದೆ. ಈ ಸಮಯ ಸಣ್ಣ ಟ್ರಾಲ್ ಬೋಟ್‌ನವರಿಗೆ (140 ಎಚ್‌ಪಿ) ಬೇರೆ ಯಾವುದೇ ಮೀನುಗಾರಿಕೆ ನಡೆಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ 12 ನಾಟಿಕಲ್ ಮೈಲಿನೊಳಗೆ ಮೀನುಗಾರಿಕೆ ನಡೆಸುತ್ತಿದ್ದರು. ಈಗ ಬುಲ್‌ಟ್ರಾಲ್ ನಿಷೇಧ ಮಾಡಿರುವುದು ಸ್ಥಳೀಯ ಮೀನುಗಾರರನ್ನು ಕಂಗಾಲಾಗಿಸಿದೆ.

    ಆರೋಪ, ಪ್ರತ್ಯಾರೋಪ: ನಾಡದೋಣಿ, ಆಳ ಸಮುದ್ರ ಟ್ರಾಲ್ ಬೋಟುಗಳು ನಿಗದಿತ ಅಶ್ವಶಕ್ತಿಗಿಂತ ಹೆಚ್ಚಿನ ಇಂಜಿನ್ ಅಳವಡಿಸಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ. ನಾಡದೋಣಿಯನ್ನು ಯಾಂತ್ರೀಕೃತವಾಗಿ ಪರಿವರ್ತಿಸಿ ಮೀನುಗಾರಿಕೆ ನಡೆಸುವ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮೂರು ತಿಂಗಳು ನಡೆಸುವ ಬುಲ್‌ಟ್ರಾಲ್ ಮೀನುಗಾರಿಕೆ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ ಎಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದಾರೆ.

    ಕರಾವಳಿಯಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸಲು ಅವಕಾಶ ಇಲ್ಲ. ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದರೆ ಅಂಥ ಬೋಟ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮರವಂತೆ ಸಮೀಪ ಸಮುದ್ರದಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದ ಬೋಟುಗಳ ಬಗ್ಗೆ ಕರಾವಳಿ ಕಾವಲು ಪೊಲೀಸರು ವರದಿ ನೀಡಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
    -ಸುಮಲತಾ, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ ಕುಂದಾಪುರ

    ಹಲವಾರು ವರ್ಷಗಳಿಂದ ಸಣ್ಣ ಬೋಟ್‌ನವರು ಬುಲ್‌ಟ್ರಾಲ್ ಮೀನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿದ್ದು, ಈ ಬಾರಿ ಗಂಗೊಳ್ಳಿಯಲ್ಲಿ ಮಾತ್ರ ಬುಲ್‌ಟ್ರಾಲ್ ಮೀನುಗಾರಿಕೆಗೆ ನಿಷೇಧ ಹೇರುವ ಮೂಲಕ ಮೀನುಗಾರರನ್ನು ಸಂಕಷ್ಟಕ್ಕೆ ತಳ್ಳಲಾಗಿದೆ. ಕರೊನಾದಿಂದ ಹಲವು ತಿಂಗಳಿನಿಂದ ಮೀನುಗಾರಿಕೆ ಇಲ್ಲದೆ ಆರ್ಥಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಅಕ್ಟೋಬರ್ ತನಕ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸಲು ಅವಕಾಶ ನೀಡಬೇಕು.
    -ಮಂಜುನಾಥ ಖಾರ್ವಿ ಮತ್ಸೊೃೀದ್ಯಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts