More

    ಇನ್ಮುಂದೆ ರೈತರು ಕಂದಾಯ ಇಲಾಖೆ ಕಚೇರಿಗೆ ಅಲೆದಾಡಬೇಕಿಲ್ಲ ಎಂದ ಶಾಸಕ ಜಿ.ಸೋಮಶೇಖರ ರೆಡ್ಡಿ

    ಬಳ್ಳಾರಿ: ಮನೆ ಬಾಗಿಲಿಗೆ ಪಿಂಚಣಿ ಯೋಜನೆಯ ಮೂಲಕ 60 ವರ್ಷ ಮೇಲ್ಪಟ್ಟ ಅರ್ಹ ವಯಸ್ಕರಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ದಾಖಲೆ ಪರಿಶೀಲಿಸಿ ಸೌಲಭ್ಯ ನೀಡಲಿದ್ದಾರೆ ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.

    ನಗರ ಹೊರವಲಯದ ಅಂದ್ರಾಳ್ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಂದಾಯ ದಾಖಲೆ ಮನೆ ಬಾಗಿಲಿಗೆ ವಿನೂತನ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಇನಾಂ ಜಮೀನುಗಳನ್ನು ಮರು ಮಂಜೂರಾತಿಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಒಂದು ವರ್ಷ ಅವಧಿ ನೀಡಿದೆ. ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಕ್ರಮ ಮಾಡುವುದಕ್ಕೆ ಅರ್ಜಿ ಸಲ್ಲಿಕೆಯನ್ನು ಒಂದು ವರ್ಷ ಕಾಲಾವಕಾಶ ನೀಡಲು ರಾಜ್ಯ ಸರ್ಕಾರವು ತಿದ್ದುಪಡಿ ತರಲಾಗುತ್ತಿದೆ ಎಂದರು.

    ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಮಾತನಾಡಿ, ವಿನೂತನ ಯೋಜನೆಯು ಕಂದಾಯ ಇಲಾಖೆಯು ಜಾರಿಗೆ ತಂದಿದ್ದು, ರೈತರ ಭೂಮಿಯ ಪಹಣಿಯ ದಾಖಲೆ ಪತ್ರಗಳು, ನಕ್ಷೆಗಳು ಹಾಗೂ ಜಾತಿ, ಆದಾಯ ಪ್ರಮಾಣ ಪತ್ರಗಳು ಹಾಗೂ ಪಡಿತರ ಚೀಟಿ ಸೇರಿದಂತೆ ದಾಖಲೆಗಳನ್ನು ರೈತರ ಮನೆಗೆ ನೇರವಾಗಿ ತಲುಪಿಸಲಾಗುತ್ತಿದೆ. ರೈತರು ತಮ್ಮ ಕಂದಾಯ ದಾಖಲೆಗಳನ್ನು ಹೊಂದುವುದು ಅವರ ಹಕ್ಕು. ದಾಖಲೆಗಳಿಗಾಗಿ ಅಲೆದಾಟ ಬೇಕಿಲ್ಲ ಮತ್ತು ಇಂದು ನಾಳೆ ಎನ್ನದೆ ನೇರವಾಗಿ ಅವರ ಮನೆಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದರು.

    ಜಿಲ್ಲೆಯಲ್ಲಿ ಈಗಾಗಲೇ 1,95,670 ಪಹಣಿ ಮತ್ತು 96,172 ನಕ್ಷೆಗಳು ಮತ್ತು 1,98,144 ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಸೇರಿದಂತೆ ಒಟ್ಟು 4,89,986 ದಾಖಲೆಗಳು ಮುದ್ರಣಗೊಂಡು ಆಯಾ ತಾಲೂಕು ಕಚೇರಿಗಳಿಗೆ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಮಾತನಾಡಿದರು. ಹಾಗೂ ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಅಂದ್ರಾಳ್ ಗ್ರಾಮದ ಹಿರಿಯರು ಮತ್ತು ರೈತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts