More

    ಚೆಂಡಾಟ ಚಾಂಪಿಯನ್‌ಷಿಪ್ ನಾಳೆಯಿಂದ

    ವಿಜಯಪುರ: ನಗರದಲ್ಲಿ ನ.26ರಿಂದ 29ರವರೆಗೆ ರಾಷ್ಟ್ರಮಟ್ಟದ ಟೆನಿಸ್‌ಬಾಲ್ ಕ್ರಿಕೆಟ್ ಚಾಂಪಿಯನ್‌ಷಿಪ್ ಆಯೋಜಿಸಲಾಗಿದೆ ಎಂದು ಟೆನಿಸ್‌ಬಾಲ್ ಕ್ರಿಕೆಟ್‌ನ ಮುಖ್ಯ ಸಂಘಟಕ ಡಾ.ಅಶೋಕ ಜಾಧವ ತಿಳಿಸಿದ್ದಾರೆ.

    ಪ್ರಕಟಣೆ ನೀಡಿರುವ ಅವರು, ಪಂದ್ಯದಲ್ಲಿ ಒಡಿಶಾ, ತೆಲಂಗಾಣ, ಅಸ್ಸಾಂ, ಸಿಕ್ಕಿಂ, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ಒಟ್ಟು 18 ರಾಜ್ಯಗಳ ತಂಡಗಳು ಭಾಗವಹಿಸಲಿವೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯದ ಮಾಜಿ ಸಂಯೋಜಕ ಡಾ.ಅಬ್ದುಲ್ ಹಕೀಂ ಸ್ಮರಣಾರ್ಥ ರಾಜ್ಯ ಟೆನಿಸ್‌ಬಾಲ್ ಕ್ರಿಕೆಟ್ ಸಂಸ್ಥೆ, ಜಿಲ್ಲಾ ಟೆನಿಸ್‌ಬಾಲ್ ಕ್ರಿಕೆಟ್ ಸಂಸ್ಥೆ ಮತ್ತು ಲಯನ್ಸ್ ಕ್ಲಬ್ ಆಫ್ ವಿಜಯಪುರ ಸಹಯೋಗದಲ್ಲಿ ಅವಳಿ ಜಿಲ್ಲೆಯ ವಿವಿಧೆಡೆ ಪಂದ್ಯಗಳು ನಡೆಯಲಿವೆ ಎಂದರು.

    ಪುರುಷರ ವಿಭಾಗದ ಎ ಗುಂಪಿನ ಪಂದ್ಯಗಳು ದೇವರಹಿಪ್ಪರಗಿಯ ಬಿಎಲ್‌ಡಿಇ ಮೈದಾನದಲ್ಲಿ ನಡೆಯಲಿವೆ. ಕ್ವಾಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ವಿಜಯಪುರ ಜಿಪಂ ಆವರಣದ ಮೈದಾನದಲ್ಲಿ ನಡೆಯಲಿವೆ. ವಿಜಯಪುರ ಜಿಲ್ಲೆಯ ತಂಡ ಹಾಗೂ ರಾಜ್ಯದಿಂದ ಒಂದು ತಂಡ ಭಾಗವಹಿಸಲಿದ್ದು, ಈ ತಂಡಗಳಲ್ಲಿ ಬೆಂಗಳೂರು, ದಾವಣಗೆರೆ, ರಾಯಚೂರು, ಕೊಪ್ಪಳ, ಧಾರವಾಡ, ಕಾರವಾರದ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

    ಲೀಗ್ ಪಂದ್ಯಗಳಲ್ಲಿ 8 ಓವರ್, ಉಳಿದ ನಾಕೌಟ್ ಹಾಗೂ ಫೈನಲ್ ಪಂದ್ಯಗಳಲ್ಲಿ 12 ಓವರ್‌ಗಳ ಪಂದ್ಯಗಳು ನಡೆಯಲಿವೆ. ಇದೇ ವೇಳೆ ರಾಷ್ಟ್ರ ತಂಡದ ಆಯ್ಕೆಗೆ ಟ್ರಯಲ್ಸ್ ನಡೆಯಲಿದೆ. ಫೆಬ್ರುವರಿಯಲ್ಲಿ ಮಲೇಷ್ಯಾ, ಸಿಂಗಾಪುರ, ನೇಪಾಳ ಹಾಗೂ ಭಾರತ ತಂಡಗಳ ನಡುವಣ ನಡೆಯುವ ಪಂದ್ಯಾವಳಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಉದ್ಘಾಟನೆ ಇಂದು
    ನಗರದ ಜಿಪಂ ಆವರಣದ ಮೈದಾನದಲ್ಲಿ ನ.25ರಂದು ಸಂಜೆ 4.30ಕ್ಕೆ ಚಾಂಪಿಯನ್‌ಷಿಪ್‌ಗೆ ಚಾಲನೆ ದೊರೆಯಲಿದೆ. ಮಧ್ಯಾಹ್ನ 2.30ಕ್ಕೆ ಸಿದ್ದೇಶ್ವರ ದೇವಸ್ಥಾನದಿಂದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದವರೆಗೆ ಕ್ರೀಡಾಪಟುಗಳ ಬೃಹತ್ ಮೆರವಣಿಗೆ ನಡೆಯಲಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರಾಹುಲ್ ಶಿಂಧೆ, ರಾಷ್ಟ್ರೀಯ ಟೆನಿಸ್‌ಬಾಲ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಕಿಶನ್ ಯಾದವ, ಕಾರ್ಯದರ್ಶಿ ಸುಭಾಷಚಂದ್ರ ವಶಿಷ್ಟ, ರಾಜ್ಯ ಟೆನಿಸ್‌ಬಾಲ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷೆ ಶಾಹೀದ ಬೇಗಂ ಹಕೀಂ ಉಪಸ್ಥಿತರಿರಲಿದ್ದಾರೆ. ನ.29ರಂದು ಸಂಜೆ 4ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಕ್ರೀಡಾಪಟು ರಾಜೇಶ್ವರಿ ಗಾಯಕವಾಡ, ಕೆಪಿಎಲ್ ಬಿಜಾಪುರ ಬುಲ್ಸ್ ಕ್ರಿಕೆಟ್ ತಂಡದ ಮಾಲೀಕರು ಕಿರಣ ಕಟ್ಟಿಮನಿ, ಶಾಸಕರಾದ ಶಿವಾನಂದ ಪಾಟೀಲ, ದೇವಾನಂದ ಚವ್ಹಾಣ, ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಡಿ.ಆನಂದಕುಮಾರ ಭಾಗವಹಿಸಲಿದ್ದಾರೆ ಎಂದು ಡಾ.ಅಶೋಕ ಜಾಧವ ತಿಳಿಸಿದ್ದಾರೆ.

    ಆಯ್ಕೆಗೆ ಟ್ರಯಲ್ಸ್ 27ರಂದು: ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಮೀಪದ ಪೊಲೀಸ್ ಮೈದಾನದಲ್ಲಿ ನ.27ರಂದು ಬೆಳಗ್ಗೆ 8ಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ರಾಯಚೂರು ವಲಯದ ಜಿಲ್ಲೆಯ 14 ವರ್ಷದೊಳಗಿನ ತಂಡಗಳ ಆಯ್ಕೆ ಟ್ರಯಲ್ಸ್ ನಡೆಯಲಿದೆ.

    14 ವರ್ಷದೊಳಗಿನ ಬಾಲಕರು 2008ರ ಸೆ.1ರಿಂದ 2011ರ ಆ.31ರೊಳಗೆ ಜನಿಸಿರಬೇಕು. 7ನೇ ತರಗತಿ ಅಂಕಪಟ್ಟಿ, ಜನ್ಮ ದಿನಾಂಕ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್, ಇತ್ತೀಚಿನ ಎರಡು ಭಾವಚಿತ್ರ, ಶಾಲೆ ವ್ಯಾಸಂಗ ಪ್ರಮಾಣ ಪತ್ರದ ಝರಾಕ್ಸ್ ಪ್ರತಿಯನ್ನು ನ.26ರ ಮಧ್ಯಾಹ್ನ 3.30ರೊಳಗೆ ಸಲ್ಲಿಸಬೇಕು. ಮಾಹಿತಿಗೆ ಕೆಎಸ್‌ಸಿಎ ವಲಯದ ಜಿಲ್ಲಾ ಸಂಚಾಲಕ ಎನ್.ಎಂ.ಹುಟಗಿ, ಮೊ.9448678280ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts