More

    ಮಂಗಳೂರಿನಲ್ಲಿ 29 ಕೈದಿಗಳಿಗೆ ಜಾಮೀನು

    ಮಂಗಳೂರು: ಗರಿಷ್ಠ ಏಳು ವರ್ಷದವರೆಗೆ ಶಿಕ್ಷೆ ಆಗಬಹುದಾದ ಪ್ರಕರಣಗಳ 29 ವಿಚಾರಣಾಧೀನ ಕೈದಿಗಳನ್ನು ಮಂಗಳೂರು ಕಾರಾಗೃಹದಲ್ಲಿ ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜಾಮೀನಿನ ಮೇಲೆ ಕಳೆದ ವಾರ ಬಿಡುಗಡೆ ಮಾಡಲಾಗಿದೆ.

    ನ್ಯಾಯಾಧೀಶರು, ಪೊಲೀಸ್ ಕಮಿಷನರ್, ಪೊಲೀಸ್ ವರಿಷ್ಠಾಧಿಕಾರಿ, ಜೈಲು ಅಧೀಕ್ಷಕರು, ಸರ್ಕಾರಿ ಅಭಿಯೋಜಕರನ್ನು ಒಳಗೊಂಡ ಸಮಿತಿ ಪರಿಶೀಲಿಸಿ ಅರ್ಹ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಅಧಿಕಾರ ಹೊಂದಿದೆ. ಇದರ ಪ್ರಕಾರ ಈ ವರ್ಷಕ್ಕೆ 15 ಮತ್ತು ಕಳೆದ ವರ್ಷಕ್ಕೆ 14 ಮಂದಿಯಂತೆ ಜಾಮೀನು ನೀಡಲಾಗಿದೆ ಎಂದು ಜೈಲು ಅಧೀಕ್ಷಕ ಚಂದನ್ ಪಟೇಲ್ ತಿಳಿಸಿದ್ದಾರೆ.

    ಗಂಭೀರ ಸ್ವರೂಪವಲ್ಲದ ಅಪರಾಧ ಮಾಡಿ ಬಂಧಿತರಾಗಿ ಬಡತನ ಅಥವಾ ಇನ್ಯಾವುದೋ ಕಾರಣದಿಂದ ಜಾಮೀನು ಪಡೆಯಲು ಪ್ರಯತ್ನಿಸದೆ ಜೈಲಿನಲ್ಲೇ ಬಾಕಿಯಾಗಿದ್ದವರನ್ನು ಅವರ ಸನ್ನಡತೆ ಗಮನಿಸಿ ಜಾಮೀನಿಗೆ ಶಿಫಾರಸು ಮಾಡಲಾಗಿತ್ತು.

    ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಾರಾಗೃಹಕ್ಕೆ ಬರುವ ಶೇ.95ರಷ್ಟು ಮಂದಿಯಲ್ಲಿ ಸೋಂಕು ಇರುತ್ತದೆ. ಕಾರಾಗೃಹಕ್ಕೆ ಸೇರಿಸಿಕೊಳ್ಳುವಾಗ ರ‌್ಯಾಪಿಡ್ ಟೆಸ್ಟ್ ಮಾಡಿಸಲಾಗುತ್ತದೆ. ಅದರಲ್ಲಿ ನೆಗೆಟಿವ್ ಬಂದರೂ ಪ್ರತ್ಯೇಕ ಇರಿಸಲಾಗುತ್ತದೆ. ಸ್ವಾಬ್ ಪರೀಕ್ಷೆಯ ವರದಿ ಎರಡು ದಿನ ತಡವಾಗುವುದರಿಂದ ಸೋಂಕು ಇದ್ದರೆ ಈ ಸಂದರ್ಭ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಕಾರಾಗೃಹದಲ್ಲಿ ಕರೊನಾ ಸೋಂಕು ಹರಡದಂತೆ ನೋಡಿಕೊಳ್ಳುವುದೇ ಸವಾಲಾಗಿದೆ.

    ಸಾಮರ್ಥ್ಯಕ್ಕಿಂತ ಅಧಿಕ ಕೈದಿಗಳು: ಮಂಗಳೂರು ಕಾರಾಗೃಹದಲ್ಲಿ 210 ಕೈದಿಗಳನ್ನು ಇಟ್ಟುಕೊಳ್ಳುವ ಸಾಮರ್ಥ್ಯ ಇದೆ. ಗುರುವಾರದವರೆಗೆ 328 ವಿಚಾರಣಾಧೀನ ಕೈದಿಗಳಿದ್ದಾರೆ. ಕಾರಾಗೃಹದ ಸೆಲ್‌ಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಕೈದಿಗಳನ್ನು ಹಾಕುವುದರಿಂದ ಕರೊನಾ ನಿಯಂತ್ರಣ ಕಷ್ಟವಾಗುತ್ತಿದೆ. ಒಂದು ವರ್ಷದ ಅವಧಿಯಲ್ಲಿ 39 ವಿಚಾರಣಾಧೀನ ಕೈದಿ ಹಾಗೂ 14 ಸಿಬ್ಬಂದಿಗೆ ಕರೊನಾ ಸೋಂಕು ಪತ್ತೆಯಾಗಿದೆ.

    ಸ್ಥಳಾಂತರ ಚಿಂತನೆ: ಸಾಮರ್ಥ್ಯಕ್ಕಿಂತ ಅಧಿಕ ವಿಚಾರಣಾಧೀನ ಕೈದಿಗಳನ್ನು ಹೊಂದಿರುವ ಕಾರಣ ಖಾಲಿ ಇರುವ ಕಾರಾಗೃಹಗಳಿಗೆ ಸ್ಥಳಾಂತರಿಸಲು ಜೈಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಪ್ರಸ್ತುತ ಕೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಆಗುತ್ತಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಕೈದಿಗಳ ಹಾಜರಾತಿ ತೋರಿಸುವುದರಿಂದ ದೂರದ ಜೈಲಿನಲ್ಲಿದ್ದರೂ ಕಲಾಪಕ್ಕೆ ತೊಂದರೆಯಾಗುವುದಿಲ್ಲ ಎಂದು ಜೈಲು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts