More

    ಬಹುಗ್ರಾಮ ನೀರು ಯೋಜನೆಗೆ ಸಂಪುಟ ಅಸ್ತು, ಬೈಂದೂರಿಗೆ ಜಲಜೀವನ್ ಮಿಶನ್ ಅಡಿ 396 ಕೋಟಿ ರೂ. ಅನುದಾನ

    ಕುಂದಾಪುರ: ಬೈಂದೂರು ಕ್ಷೇತ್ರದ ಮನೆ ಮನೆಗೆ ನಳ್ಳಿ ನೀರು ಪೂರೈಕೆ ಯೋಜನೆಗೆ ಸಂಪುಟ ಸಭೆ ಅಸ್ತು ಎಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ನಬಾರ್ಡ್ ಆರ್‌ಐಡಿಎಫ್ ಸಹಾಯ ಧನದಲ್ಲಿ ಒಟ್ಟು 396 ಕೋಟಿ ರೂ. ಬೃಹತ್ ಯೋಜನೆ ಸಂಪುಟ ಸಭೆಯಲ್ಲಿ ಅಂಗೀಕಾರ ಆಗುವ ಮೂಲಕ ಕುಡಿಯುವ ನೀರು ಸಮಸ್ಯೆ ಪರಿಹಾರವಾಗಲಿದೆ.

    ಬಹಳ ಕಾಲದಿಂದ ಬೈಂದೂರು ಕ್ಷೇತ್ರಕ್ಕೆ ವಾರಾಹಿ ಹಾಗೂ ಸೌಪರ್ಣಿಕಾ ನದಿ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವಂತೆ ಸಾರ್ವಜನಿಕರು, ಜಿಪಂ, ತಾಪಂ, ಗ್ರಾಪಂ ಸದಸ್ಯರು ಒತ್ತಾಯಿಸುತ್ತಲೇ ಬಂದಿದ್ದರು. ಸೌಪರ್ಣಿಕಾ, ವಾರಾಹಿ ಬಲದಂಡೆ ಯೋಜನೆ ಮೂಲಕ ಬೈಂದೂರು ಕ್ಷೇತ್ರಕ್ಕೆ ನೀರು ಹರಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡುವಂತೆ ಆಗ್ರಹಿಸುತ್ತಿದ್ದರೂ ಯೋಜನೆ ಅನುಷ್ಠಾನ ಆಗಿರಲಿಲ್ಲ.
    ಸಂಪುಟ ಸಭೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ 788 ಗ್ರಾಮ ವಸತಿ, ಮೂರು ನಗರ ಪ್ರದೇಶ ಸೇರಿ 62 ಸಾವಿರ ಸೇರಿ ಒಟ್ಟು 2.69 ಲಕ್ಷ ಜನರ ದಾಹ ತಣಿಸಲಿದೆ. ಕೇಂದ್ರ ಸರ್ಕಾರ 139.05 ಕೋಟಿ, ರಾಜ್ಯ ಸರ್ಕಾರ ಪಾಲು 80.71 ಕೋಟಿ, ನಬಾರ್ಡ್ ಆರ್‌ಐಡಿಎಫ್ ಮೂಲಕ 176.24 ಕೋಟಿ ಸೇರಿ ಪಟ್ಟು 396 ಕೋಟಿ ಅನುದಾನ ಕಾದಿರಿಸಲಾಗಿದೆ. ಒಟ್ಟಾರೆ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಬೈಂದೂರು ಕ್ಷೇತ್ರದ ಜನರಿಗೆ ಸಂಪುಟದಲ್ಲಿ ಬಹುಗ್ರಾಮ ಯೋಜನೆಗೆ ಅನುಮೋದನೆ ಸಿಕ್ಕಿರುವುದು ಸಂತಸ ತಂದಿದೆ.

    ನೀರು ಪೂರೈಕೆ ಹೇಗೆ?
    ಬೈಂದೂರು 788 ಗ್ರಾಮೀಣ ಭಾಗ, ಬೈಂದೂರು, ಯಡ್ತರೆ, ಪಡುವರಿ, ನಗರ ಪ್ರದೇಶದ 2.69 ಲಕ್ಷ ಜನರಿಗೆ ಕುಡಿಯುವ ನೀರು ಯೋಜನೆ ಪ್ರಯೋಜನ ಸಿಗಲಿದ್ದು, ಪ್ರತಿ ಮನೆಗೂ ನಳ್ಳಿ ಮೂಲಕ ನೀರು ಪೂರೈಕೆ ಬಹುಗ್ರಾಮ ಯೋಜನೆಯಲ್ಲಿ ಚಾಲನೆಗೆ ಬರಲಿದೆ. ಕುಡಿಯುವ ನೀರಿಗಾಗಿ ಅಣೆಕಟ್ಟು, ಕಿಂಡಿ ಅಣೆಕಟ್ಟು ಕಟ್ಟದೆ ವಾರಾಹಿ ಮತ್ತು ಸೌಪರ್ಣಿಕಾ ನೀರು ಪೂರೈಕೆ ಯೋಜನೆ ಬಳಸಿಕೊಳ್ಳಲಾಗುತ್ತದೆ. ಹೊಸಂಗಡಿ, ಗುಲ್ವಾಡಿ ನದಿ ಪಕ್ಕದಲ್ಲಿ 10 ಎಕರೆ ಪ್ರದೇಶದಲ್ಲಿ ಪಂಪ್ ಹೌಸ್ ನಿರ್ಮಿಸಲಾಗುತ್ತಿದ್ದು, ಅಲ್ಲಿಂದ ತೆರೆದ ಬಾವಿಗೆ ನೀರು ಪರಿಷ್ಕರಿಸಿ ಹಾಯಿಸಿ, ಸಂಬಂಧಪಟ್ಟ ಗ್ರಾಮಗಳ ಟ್ಯಾಂಕಿಗೆ ನೀರು ಪೂರೈಸಲಾಗುತ್ತದೆ. ಹೆಚ್ಚಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಟ್ಯಾಂಕ್ ಹಾಗೂ ಪೈಪ್‌ಲೈನ್ ಅಳವಡಿಸಿದ್ದು, ಅದರ ಮೂಲಕ ಮನೆ ಮನೆಗೆ ಕುಡಿಯುವ ನೀರು ಪೂರೈಕೆಯಾಗಲಿದೆ. ಈ ಯೋಜನೆ ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ.

    ಕಳೆದ ಬಾರಿ ಚುನಾವಣೆ ಸಮಯದಲ್ಲಿ ಮನೆ ಮನೆಗೆ ಕುಡಿಯುವ ನೀರು ತಲುಪಿಸಿ, ಮೂಲ ಸೌಲಭ್ಯ ಬಲಿಷ್ಠಗೊಳಿಸುವುದಾಗಿ ಭರವಸೆ ನೀಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕ್ಷೇತ್ರದ ಮೇಲಿರುವ ಅಭಿಮಾನ, ಸಂಸದ ಬಿ.ವೈ.ರಾಘವೇಂದ್ರ ಸಹಕಾರದಿಂದ ಇಷ್ಟೊಂದು ದೊಡ್ಡ ಯೋಜನೆಗೆ ಅನುಮೋದನೆ ಸಿಕ್ಕಿದೆ. ಸಂಪುಟದಲ್ಲಿ ಕುಡಿಯುವ ನೀರು ಯೋಜನೆಗೆ ಅನುಮೋದನೆ ಸಿಕ್ಕಿದ್ದು, ಶಾಸಕನಾಗಿ ನನಗೆ ಹೆಮ್ಮೆ ಕೊಡುವ ದಿನ.
    ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts