More

    ವರುಣಾಘಾತಕ್ಕೆ ಬಾಗಲಕೋಟೆ ಜಿಲ್ಲೆ ತತ್ತರ – ಜನಜೀವನ ಸಂಪೂರ್ಣ ಅಸ್ತವ್ಯಸ್ತ

    ಬಾಗಲಕೋಟೆ : ಪ್ರಸಕ್ತ ವರ್ಷ ಬಾಗಲಕೋಟೆ ಜಿಲ್ಲೆಯನ್ನು ವರುಣ ಬಿಟ್ಟು ಬಿಡದೇ ಕಾಡಲಾರಂಭಿಸಿದ್ದಾನೆ. ಜೂನ್ ತಿಂಗಳಿಂದ ಈ ವರೆಗೂ ನಾಲ್ಕೈದು ಸಲ ಭಾರಿ ಮಳೆಯಿಂದಾಗಿ ಜನರು ಸಾಕಷ್ಟು ಕಷ್ಟ ಮತ್ತು ನಷ್ಟವನ್ನು ಅನುಭವಿಸಿದ್ದಾರೆ.

    ಇದೀಗ ಮತ್ತೆ ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ದಿನಗಳಿಂದ ವರುಣಾರ್ಭಟದಿಂದ ಜನ ಜೀವನ ಸಂಪೂರ್ಣ ಅಯೋಮಯವಾಗಿದೆ. ಸಾವು-ನೋವು ಸಹ ಸಂಭವಿಸಿವೆ.

    ಎರಡು ದಿನ ಧಾರಕಾರವಾಗಿ ಸುರಿದಿದ್ದ ಮಳೆ, ಮಂಗಳವಾರ ತಡರಾತ್ರಿಯಿಂದ ಬುಧವಾರ ಸಂಜೆವರೆಗೂ ಉಗ್ರರೂಪ ತಾಳಿದ್ದು, ಮಳೆ ಜೊತೆ ಸಿಡಿಲಿನ ಆರ್ಭಟವೂ ಸಾಥ್ ನೀಡಿದ್ದರಿಂದ ಸಾವು-ನೋವು ಸಂಭವಿಸಿದ್ದಲ್ಲದೇ ಅಪಾರ ಪ್ರಮಾಣದ ನಷ್ಟ ಹಾಗೂ ಜನಜೀವನ ಅಸ್ತವ್ಯಸ್ತಗೊಳಿಸಿದೆ.

    ಆಸ್ಪತ್ರೆಗೆ ನೀರು ನುಗ್ಗಿ ರೋಗಿಗಳ ಪರದಾಟ : ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಸಿಡಿಲು ಮತ್ತು ಮಳೆ ಆರ್ಭಟ ಜೋರಾಗಿತ್ತು. ಮುಧೋಳ ನಗರದ ಡಾ. ಸುನೀಲ ಮಲಘಾಣ ಅವರ ಶಾರದಾ ಆಸ್ಪತ್ರೆಗೆ ರಾತ್ರಿ ನೀರು ನುಗ್ಗಿ, ರೋಗಿಗಳು ತೀವ್ರ ಸಂಕಷ್ಟು ಎದುರಿಸುವಂತಾಗಿತ್ತು. ಒಂದು ವಾರ್ಡ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ ಅಲ್ಲಿದ್ದ ಐವರು ರೋಗಿಗಳನ್ನು ರಾತ್ರಿಯೇ ಅಗ್ನಿ ಶಾಮಕ ಸಿಬ್ಬಂದಿ ನೆರವಿನಿಂದ ಬೇರೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ಬುಧವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಹುನಗುಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೂ ಮಳೆ ನೀರು ನುಗ್ಗಿದೆ. ಆಸ್ಪತ್ರೆಯ ಇಡೀ ಆವರಣದಲ್ಲಿ ಮೊಣಕಾಲು ಮಟ್ಟದ ವರೆಗೂ ನೀರು ಆವರಿಸಿತ್ತು. ಇದರಿಂದ ಆಸ್ಪತ್ರೆಗೆ ಹೋಗಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಆಸ್ಪತ್ರೆಗೆ ಕೆಲ ಕೊಠಡಿಗಳಿಗೂ ನೀರು ನುಗ್ಗಿದ್ದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
    ಹರಿದು ಬಿದ್ದ ವಿದ್ಯುತ್ ತಂತಿ, ತಪ್ಪಿದ ಅನಾಹುತ: ಭಾರಿ ಮಳೆಯಿಂದಾಗಿ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಬೀದಿ ದೀಪದ ವಿದ್ಯುತ್ ಕಂಬದ ತಂತಿ ಹರಿದು ಮನೆಯೊಂದರ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗ್ರಾಮದ ನಾಗಪ್ಪ ಕಬಾಡದ ಎನ್ನುವವರ ಮನೆ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದಿದೆ. ಮನೆಗೋಡೆಗೆ ಹೊಂದಿಕೊಂಡಂತೆ ವಿದ್ಯುತ್ ಪರಿವರ್ತಕ ಇದ್ದು, ಇದನ್ನು ಸ್ಥಳಾಂತರ ಮಾಡುವಂತೆ ಹೆಸ್ಕಾಂ ಇಲಾಖೆಗೆ ಮನೆಯವರು ಅನೇಕ ಸಲ ಮನವಿ ಮಾಡಿದರೂ ಸ್ಪಂದಿಸಿಲ್ಲ. ಬುಧವಾರ ಮಳೆಗೆ ತಂತಿ ಹರಿದು ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ.
    ಕೊಚ್ಚಿ ಹೋಗುತ್ತಿದ್ದ ಗೋಮಾತೆ ರಕ್ಷಣೆ : ಭಾರಿ ಮಳೆಯಿಂದಾಗಿ ಬಾದಾಮಿ ಪಟ್ಟಣದ ಸವಿತಾ ಪೆಟ್ರೋಲ್ ಬಂಕ್ ಹತ್ತಿರ ಇರುವ ಹಳ್ಳ ತುಂಬಿ ನೀರು ರಭಸವಾಗಿ ಹರಿಯುತ್ತಿತ್ತು. ಈ ವೇಳೆ ನೀರಿನಲ್ಲಿ ಹಸುವೊಂದು ಕೊಚ್ಚಿ ಹೋಗುತ್ತಿತ್ತು. ಆಗ ಅಂಬೇಡ್ಕರ್ ಕಾಲನಿಯ ಅಲೆಮಾರಿ ಕುಂಚಿ ಕೊರವರ ಸಮಾಜದ ಯುವಕರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಗೋಮಾತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಹುನಗುಂದ ತರಕಾರಿ ಮಾರುಕಟ್ಟೆ ಜಲಾವೃತ : ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಕುಂಬಾರ ಓಣಿ ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ನೀರು ಹರಿದು ಬಂದಿತ್ತು. ತರಕಾರಿ ಮಾರುಕಟ್ಟೆ ಜಲಾವೃತವಾಗಿದ್ದರಿಂದ ವ್ಯಾಪಾರಸ್ಥರು ಇನ್ನಿಲ್ಲದಂತೆ ಪರದಾಡಿದರು. ತರಕಾರಿ ರಕ್ಷಣೆ ಮಾಡಿಕೊಳ್ಳಲು ಹರಸಾಹಸ ಪಡುವಂತಾಯಿತು. ಕುಂಬಾರ ಓಣಿಯಲ್ಲಿ ಮನೆ ಬಾಗಿಲಿಗೆ ನೀರು ಧುಮ್ಮಿಕ್ಕಿತು. ರಸ್ತೆಯಲ್ಲಿ ಮೊಣಕಾಲು ಮಟ್ಟದವರೆಗೂ ನೀರು ತುಂಬಿ ಹರಿಯಿತು. ಇದರಿಂದ ಜನರು ಮನೆಯಿಂದ ಆಚೆ ಬರಲಾಗದೇ ಪರದಾಡಿದರು.
    ಹೆರೂರ ಬಳಿ ಕಿರು ಸೇತುವೆ ತುಂಬಿ ಸಂಚಾರ ಬಂದ್ : ಹುನಗುಂದ ಹಾಗೂ ಇಳಕಲ್ಲ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿತ್ತು. ಇದರಿಂದ ಇಳಕಲ್ಲ ತಾಲೂಕಿನ ಹೆರೂರ ಬಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಕಿರುಸೇತುವೆ ಸಂಪೂರ್ಣ ಜಲಾವೃತವಾಗಿದೆ. ಇದರಿಂದ ಚಿನ್ನಾಪುರ, ತುಂಬ, ಹುನಕುಂಟಿ, ಕೆಸರಬಾವಿ, ಚಟ್ನಿಹಾಳ, ಮಳಗಿಹಾಳ, ನಿಡಸನೂರಕ್ಕೆ ಹೋಗುವ ರಸ್ತೆ ಇದಾಗಿದ್ದು, ಸಂಜೆ ವೇಳೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಸಂಚಾರ ಬಂದ್ ಆಗಿದೆ. ಹಳ್ಳದ ನೀರು ತುಂಬಿ ಸೇತುವೆ ಮೇಲೆ ಒಂದೇರೆಡು ಅಡಿಯಷ್ಟು ನೀರು ಹರಿಯುತ್ತಿದ್ದಾಗ ಅದೇ ಮಾರ್ಗದಲ್ಲಿ ಬಂದ ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಸೇತುವೆ ಮೇಲೆ ಹರಿಯುವ ನೀರಿನಲ್ಲಿ ಅವರ ವಾಹನ ಹಾಯ್ದು ಹೋಯಿತು. ಮಳೆಗಾಲದಲ್ಲಿ ಆಗಾಗ ಈ ಸೇತುವೆ ತುಂಬಿ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ಸೇತುವೆ ಎತ್ತರಿಸುವಂತೆ ಆ ಭಾಗದ ಜನರು ಮನವಿ ಮಾಡುತ್ತ ಬಂದಿದ್ದರೂ ಈ ವರೆಗೂ ಅವರ ಮನವಿಗೆ ಸ್ಪಂದನೆ ಸಿಗದಾಗಿದೆ.
    ಬೆಣ್ಣೆ ಹಳ್ಳ ತುಂಬಿ ಬೆಳೆಗಳು ಜಲವೃತ : ಧಾರವಾಡ, ಗದಗ ಭಾಗದಲ್ಲೂ ಭಾರಿ ಮಳೆ ಆಗುತ್ತಿದ್ದು, ಇದೀಗ ಮತ್ತೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಬೆಣ್ಣೆ ಹಳ್ಳ ರೈತರ ನಿದ್ದೆಗೆಡಿಸಿದೆ. ಬಾದಾಮಿ ತಾಲೂಕಿನಲ್ಲಿ ಮಲಪ್ರಭಾ ನದಿ ಜೊತೆ ಬೆಣ್ಣೆ ಹಳ್ಳದ ನೀರು ಸೇರುವುದರಿಂದ ರೈತರ ಬೆಳೆಗಳು ಹಾನಿ ಆಗುತ್ತಿವೆ.
    ಇದೀಗ ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಬಾದಾಮಿ ತಾಲೂಕಿನ ಸುಳ್ಳ, ಹೆಬ್ಬಳ್ಳಿ, ಮುಮರಡ್ಡಿಕೊಪ್ಪ, ಜಕನೂರು, ನೀರಲಗಿ, ತಮಿನಾಳ, ಕಾತರಕಿ, ಖ್ಯಾಡ, ಚೊಳಚಗುಡ್ಡ ಭಾಗದ ರೈತರ ಜಮೀನುಗಳಿಗೆ ಮತ್ತೊಮ್ಮೆ ನೀರು ನುಗ್ಗಿದೆ. ಪ್ರಸಕ್ತ ವರ್ಷ ಹೀಗೆ ಮಲಪ್ರಭಾ ಮತ್ತು ಬೆಣ್ಣೆ ಹಳ್ಳದ ನೀರು ನುಗ್ಗಿ ಬೆಳೆಗಳು ಜಲಾವೃತ ಆಗುತ್ತಿರುವುದು ಇದು ಐದನೇ ಸಲವಾಗಿದೆ. ಇದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕೆಜೋಳ, ಕಬ್ಬು, ಹತ್ತಿ, ಸೂರ್ಯಕಾಂತಿ, ಉಳ್ಳಾಗಡ್ಡಿ, ಮತ್ತೊಮ್ಮೆ ಜಲಾವೃತವಾಗಿದ್ದು, ಈ ವರ್ಷ ಬೆಳೆಗಳು ಕೈಗೆ ಬರುವುದೇ ಇಲ್ಲ ಎನ್ನುವಂತಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
    ಮಳೆ ಇನ್ನಷ್ಟು ಅಬ್ಬರಿಸಿದಲ್ಲಿ ಈ ಗ್ರಾಮಗಳಿಗೆ ಮಲಪ್ರಭಾ ಮತ್ತು ಬೆಣ್ಣೆ ಹಳ್ಳದ ನೀರು ನುಗ್ಗಿ ಜನಜೀವನ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.
    ಮಂಗಳಗುಡ್ಡ ಜಲಾವೃತ : ಭಾರಿ ಮಳೆಯಿಂದಾಗಿ ಗುಳೇದಗುಡ್ಡ ತಾಲೂಕಿನ ಮಂಗಳಗುಡ್ಡ ಗ್ರಾಮ ಜಲಾವೃತವಾಗಿದೆ. ಮಳೆಯಿಂದಾಗಿ ಗುಡ್ಡದ ನೀರು ಹರಿದು ಬಂದು 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನರು ಮನೆಯಲ್ಲಿ ವಸ್ತುಗಳನ್ನು ಗ್ರಾಮದ ಶಾಲೆ ಹಾಗೂ ದೇವಸ್ಥಾನಗಳಲ್ಲಿ ಇಟ್ಟು ಆಸರೆ ಮನೆಗಳಿಗೆ ಹೋಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts