More

    ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಬ್ಯಾಂಕ್‌ಗಳ ಪಾತ್ರ ಮುಖ್ಯ

    ಬಾಗಲಕೋಟೆ: ವಿವಿಧ ಇಲಾಖೆಗಳಲ್ಲಿನ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಬ್ಯಾಂಕರ್‌ಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಟಿ.ಭೂಬಾಲನ್ ಹೇಳಿದರು.

    ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಲ ವಿತರಣೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ, ರಫ್ತು ಸಾಲ, ಶಿಕ್ಷಣ, ವಸತಿ, ಸಾಮಾಜಿಕ ಮೂಲಸೌಕರ್ಯ ಇತರ ಆಯ್ಕೆಯಾದ ಲಾನುಭವಿಗಳಿಗೆ ಸಾಲ ವಿತರಿಸುವ ಕಾರ್ಯವಾಗಬೇಕು. ಸಾಲ ವಿತರಣೆಗೆ ವಿವಿಧ ಕಾರ್ಯಕ್ರಮ, ಕ್ಯಾಂಪ್‌ಗಳನ್ನು ಆಯೋಜಿಸಿ ವಿತರಿಸಿದಾಗ ಮಾತ್ರ ಯೋಜನೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.

    ಜಿಲ್ಲೆಯ ಎಸಿಪಿ ಅಡಿಯಲ್ಲಿ ಶೇ.15 ರಷ್ಟು ಮಾತ್ರ ಸಾಧನೆಯಾಗಿದ್ದು, ಡಿಸೆಂಬರ್ ಒಳಗಾಗಿ ಶೇ.100 ರಷ್ಟು ಸಾಧನೆಯಾಗಬೇಕು. ಹೆಚ್ಚಾಗಿ ಕೃಷಿ, ಶಿಕ್ಷಣ ಹಾಗೂ ಉದ್ಯಮಿಗಳಿಗೆ ಆದ್ಯತೆ ನೀಡಿ ಹೆಚ್ಚಿನ ಸಾಲ ವಿತರಣೆಗೆ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ನೇಕಾರರು ಸಂಕಷ್ಟದಲ್ಲಿದ್ದು, ಮುದ್ರಾ ಯೋಜನೆಯಡಿ ಆಯ್ಕೆಯಾದ ಲಾನುಭವಿಗಳಿಗೆ ಸಾಲ ವಿತರಣೆಯಾಗಬೇಕು. 300 ಗುರಿಗೆ 339 ಅರ್ಜಿಗಳು ಬಂದಿದ್ದು, ಅದರಲ್ಲಿ 47 ಅರ್ಜಿಗಳಿಗೆ ಮಾತ್ರ ಮಂಜೂರಾತಿ ನೀಡಲಾಗಿದೆ. ಇನ್ನು 253 ಬಾಕಿ ಉಳಿದಿದ್ದು, ಬೇಗನೇ ಸಾಲ ಮಂಜೂರು ಮಾಡಲು ತಿಳಿಸಿದರು.

    ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ಗೋಪಾಲರೆಡ್ಡಿ ಮಾತನಾಡಿ, ಭೋವಿ ಅಭಿವೃದ್ಧಿ ನಿಗಮದ ಯೋಜನೆಯ 5 ಲಾನುಭವಿಗಳ ಅರ್ಜಿಬಂದಿದ್ದು, ಸಾಲ ವಿತರಣೆಗೆ ಕ್ರಮವಹಿಸಲಾಗುತ್ತದೆ. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ 6 ಅರ್ಜಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಉದ್ಯೋಗಿನಿ ಯೋಜನೆಯಡಿ 1070 ಅರ್ಜಿಗಳ ಪೈಕಿ 63 ಅರ್ಜಿಗಳು ಬಂದಿದ್ದು, 20 ಲಾನುಭವಿಗಳಿಗೆ ಮಂಜೂರಾತಿ ನೀಡಲಾಗಿದೆ. 26 ಬಾಕಿ ಉಳಿದಿರುತ್ತವೆ ಎಂದರು.

    ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಜುಲೈ ಅಂತ್ಯಕ್ಕೆ 927.86 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಗೃಹ ಸಾಲವನ್ನು ಒಟ್ಟು 2,741 ಲಾನುಭವಿಗಳಿಗೆ ನೀಡಿದ್ದು, ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಒಟ್ಟು 93.24 ಕೋಟಿ ರೂ. ಸಬ್ಸಿಡಿ ಹಣ ನೀಡಲಾಗಿದೆ ಎಂದ ಅವರು, ವಿವಿಧ ಯೋಜನೆಗಳ ಮೂಲಕ ಸಾಲ ವಿತರಿಸಿದ ಬಗ್ಗೆ ಸಭೆಗೆ ವಿವರವಾಗಿ ತಿಳಿಸಿಕೊಟ್ಟರು.

    ನಬಾರ್ಡ್‌ನ ಯಮುನಾ ಪೈ, ಭಾರತೀಯ ಸ್ಟೇಟ್ ಬ್ಯಾಂಕ್ ರಿಜಿನಲ್ ಮ್ಯಾನೇಜರ್ ನರಸಿಂಹ ಮೂರ್ತಿ, ಕೆವಿಜಿ ಬ್ಯಾಂಕ್‌ನ ರಿಜಿನಲ್ ಮ್ಯಾನೇಜರ್ ಶ್ರೀಧರ, ಕೆನರಾ ಬ್ಯಾಂಕ್ ಮುಖ್ಯವ್ಯಸ್ಥಾಪಕ ಶ್ರೀನಿವಾಸ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಜಿ.ಎಂ.ಉಕ್ಕಲಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಬ್ಯಾಂಕ್‌ನ ಪ್ರತಿನಿಧಿಗಳು ಇದ್ದರು.

    10 ರೂ. ನಾಣ್ಯ ಚಲಾವಣೆಯಲ್ಲಿದೆ
    10 ರೂ. ನಾಣ್ಯ ಚಲಾವಣೆಯಲ್ಲಿದ್ದು, ಜನರು ಆತಂಕ ಪಡದೆ ಚಲಾವಣೆ ಮಾಡಬೇಕು. ದೇಶದ ಎಲ್ಲ ರಾಜ್ಯಗಳಲ್ಲಿ ಮತ್ತು ರಾಜ್ಯದ ದಕ್ಷಿಣ ಭಾಗದಲ್ಲಿ ಚಲಾವಣೆ ಮಾಡಲಾಗುತ್ತಿದೆ. ಆದರೆ, ಉತ್ತರ ಕರ್ನಾಟಕದ ಭಾಗದಲ್ಲಿ ಮಾತ್ರ ಚಲಾವಣೆಯಾಗುತ್ತಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ 10 ರೂ. ನಾಣ್ಯ ಬಳಕೆ ಮಾಡುವಂತೆ ಜಿಲ್ಲಾ ಅಗ್ರಣಿ ಬ್ಯಾಂಕ್‌ನ ವ್ಯವಸ್ಥಾಪಕ ಗೋಪಾಲರೆಡ್ಡಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts