More

    2023ರ ವಿಧಾನಸಭೆ ಚುನಾವಣೆಗೂ ಬಿ.ಎಸ್‌.ಯಡಿಯೂರಪ್ಪ ನೇತೃತ್ವ

    ಬಾಗಲಕೋಟೆ: ರಾಜ್ಯದಲ್ಲಿ ಇನ್ನು ಎರಡು ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ಅಷ್ಟೆ ಅಲ್ಲ, ಮುಂದಿನ 2023ರ ವಿಧಾನಸಭೆ ಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

    ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತದೆ ಎನ್ನುವ ಮಾತೆ ಇಲ್ಲ. ಸರ್ಕಾರ ಸ್ಟೇಬಲ್ ಆಗಿದೆ. ಯಡಿಯೂರಪ್ಪ ಅವರಿಗೆ 50 ವರ್ಷಗಳ ಅನುಭವ ಇದೆ. ಸಿಎಂ ಆಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರೇ ಮುಂದುವರಿಯಲಿದ್ದಾರೆ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲಿ ನಡೆಯಲಿದ್ದು, 130ಕ್ಕೂ ಅಧಿಕ ಸೀಟುಗಳನ್ನು ಗೆಲ್ಲಲಿದ್ದೇವೆ. ಆ ವೇಳೆ ಸಿಎಂ ಯಾರು ಎನ್ನುವ ಬಗ್ಗೆ ನಮ್ಮ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.

    ನಮ್ಮಲ್ಲಿ ಸಣ್ಣಪುಟ್ಟ ನೂನ್ಯತೆಗಳು ಇದ್ದರೆ ನಮ್ಮ ಹೈಕಮಾಂಡ್ ಸ್ಟ್ರಾಂಗ್ ಇದೆ. ಯಾರು ತಪ್ಪು ಮಾಡಿದ್ದಾರೆ ಅವರ ಕಿವಿಹಿಂಡಿ ಸೂಕ್ತ ಮಾರ್ಗದರ್ಶನ ಮಾಡುತ್ತದೆ ಎಂದು ಹೇಳಿದರು.

    ಎಂಎಲ್ಎ, ಮಂತ್ರಿಯಾಗಿ ಹ್ಯಾಪಿಯಾಗಿದ್ದೇನೆ
    ಇನ್ನು ಮುಂದಿನ ಸಿಎಂ ರೇಸ್‌ನಲ್ಲಿ ತಾವು ಇದ್ದೀರಂತೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವ ನಿರಾಣಿ, ಹೀಗಂತ ಯಾರು ಹೇಳಿದ್ದು? ನಾನಂತೂ ಹೇಳಿಲ್ಲ. ಎಚ್. ವಿಶ್ವನಾಥ ಅವರು ವೈಯಕ್ತಿಕವಾಗಿ ನನ್ನ ಮೇಲಿನ ಅಭಿಮಾನದಿಂದ ಹೇಳಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ಉತ್ತರ ಕೊಟ್ಟಿದ್ದೇನೆ. ನಾನು ಎಂಎಲ್ಎ, ಮಂತ್ರಿಯಾಗಿಯೇ ಬಹಳ ಸಂತೋಷವಾಗಿದ್ದೇನೆ. ಈಗ ನನಗೆ ಕೊಟ್ಟಿರುವ ಗಣಿ ಖಾತೆಯಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

    ಕಾಂಗ್ರೆಸ್‌ನವರಿಗೆ ಹೇಳುವಷ್ಟು ದೊಡ್ಡವನಲ್ಲ
    ಇನ್ನು ಸಿಎಂ ಕುರ್ಚಿಗಾಗಿ ಬಿಜೆಪಿ ಜತೆಗೆ ಕಾಂಗ್ರೆಸ್‌ನಲ್ಲಿ ಪೈಪೋಟಿ ಜೋರಾಗಿರುವ ಬಗ್ಗೆ ಮಾತನಾಡಿದ ಸಚಿವ ನಿರಾಣಿ, ಅವರ ಬಗ್ಗೆ ಮಾತನಾಡುವಷ್ಟು ನಾನು ಬುದ್ಧಿವಂತನಲ್ಲ. ಅವರೆಲ್ಲರಿಗೂ ನಾನು ಹೇಳುವುದು ಕೋವಿಡ್‌ನಿಂದ ನಾವೆಲ್ಲ ಕಷ್ಟದಲ್ಲಿ ಇದ್ದೇವೆ. ಉದ್ಯಮ ನಿಂತುಹೋಗಿದೆ. ಜಿಡಿಪಿ ಕಡಿಮೆ ಆಗುತ್ತಿದೆ. ಬೆಲೆ ಏರಿಕೆ ಆಗುತ್ತಿದೆ. ಜನರು ಬದುಕಲು ಏನು ಮಾಡಬೇಕೋ ಆ ಕಡೆಗೆ ನಾವೆಲ್ಲರೂ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

    ಡೆತ್ ಆಡಿಟ್ ಮಾಡಿಸುತ್ತಿದ್ದೇವೆ
    ಕೋವಿಡ್ ಸಾವಿನ ವಿಚಾರವಾಗಿ ಕಾಂಗ್ರೆಸ್ ಪಕ್ಷ ಮನೆ ಮನೆ ಡೆತ್ ಆಡಿಟ್‌ಗೆ ಮುಂದಾಗಿರುವುದರ ಬಗ್ಗೆ ಮಾತನಾಡಿದ ನಿರಾಣಿ, ಹೌದು, ಅವರು ಹೇಳುತ್ತಿರುವುದು ಸರಿ ಇದೆ. ಸಾವಿನ ಸಂಖ್ಯೆ ಹೆಚ್ಚಿದ್ದು, ಅವರೆಲ್ಲ ಹೇಗೆ ಸತ್ತಿದ್ದಾರೆ ಎನ್ನುವುದು ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ನಾನು ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ಗ್ರಾಮೀಣ ಅಧಿಕಾರಿಗಳ ಮುಖಾಂತರ ಡೋರ್-ಟು-ಡೋರ್ ಮಾಹಿತಿ ಕಲೆಹಾಕಿಸುತ್ತಿದ್ದೇನೆ. ಸಾವು ಹೇಗೆ ಉಂಟಾಗಿದೆ. ಇದರಲ್ಲಿ ಕೋವಿಡ್ ಬಂದು ಸತ್ತಿದ್ದಾರೋ ಅಥವಾ ಬೇರೆ ಕಾರಣದಿಂದ ಸತ್ತಿದ್ದಾರೋ ಎಂದು ತಿಳಿದು ಬರುತ್ತದೆ. ಇದು ರಾಜ್ಯದಲ್ಲಿ ಆಗಬೇಕು. ಸಾವು ಮುಚ್ಚಿಡಲು ಆಗುವುದಿಲ್ಲ. ಆದರೆ, ಎಲ್ಲ ಸಾವುಗಳು ಕೋವಿಡ್ ನಿಂದಲೇ ಆಗಿರಲ್ಲ. ಆಡಿಟ್ ಆದ ಮೇಲೆ ಈ ಬಗ್ಗೆ ನಿಖರವಾಗಿ ಗೊತ್ತಾಗುತ್ತದೆ ಎಂದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts