More

    ಕ್ಷಯ ರೋಗಕ್ಕೆ ಉಚಿತ ಚಿಕಿತ್ಸೆ

    ಬಾಗಲಕೋಟೆ: ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಬುಧವಾರ ಚಾಲನೆ ನೀಡಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಜರುಗಿದ ಈ ಜಾಗೃತಿ ಜಾಥಾ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ಗೆ ತಲುಪಿ ಮುಕ್ತಾಯಗೊಂಡಿತು.

    ಜಾಗೃತಿ ಜಾಥಾದುದ್ದಕ್ಕೂ ಘೋಷಣೆಗಳನ್ನು ಕೂಗುವ ಮೂಲಕ ಅರಿವು ಮೂಡಿಸಲಾಯಿತು. ಜಾಥಾದಲ್ಲಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಕೆ.ಎಚ್.ಪಿ.ಟಿಯ ತೇಜಸ್ವಿನಿ ಹಿರೇಮಠ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಪಿ.ಎ.ಹಿಟ್ನಳ್ಳಿ, ಕಿರಿಯ ಆರೋಗ್ಯ ಸಹಾಯಕಿಯರು, ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ನಂತರ ಜಿಲ್ಲಾ ಆಸ್ಪತ್ರೆಯಲ್ಲಿರುವ ಎ.ಎನ್.ಎಂ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಡಾ.ಕವಿತಾ ಕುರಿ ಮಾತನಾಡಿ, ಈಚೆಗೆ ಮಕ್ಕಳಲ್ಲಿ ಕ್ಷಯರೋಗ ಪತ್ತೆಯಾಗುತ್ತಿದ್ದು, ನಾವೆಲ್ಲ ಜಾಗೃತಿ ವಹಿಸಬೇಕಿದೆ. ಪ್ರಾರಂಭದ ಹಂತದಲ್ಲಿ ಪತ್ತೆ ಹಚ್ಚುವುದರಿಂದ ಬೇಗನೇ ಗುಣಪಡಿಸಲು ಸಾಧ್ಯವಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯ ರೋಗದ ಚಿಕಿತ್ಸೆಗೆ ಎಲ್ಲ ರೀತಿಯ ಸೌಲಭ್ಯವಿದ್ದು, ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಡಾ.ಚಂದ್ರಕಾಂತ ಜವಳಿ ಮಾತನಾಡಿ, ಕ್ಷಯರೋಗವನ್ನು ಪ್ರಾರಂಭದಲ್ಲಿ ಪತ್ತೆ ಹಚ್ಚುವುದರಿಂದ 6 ತಿಂಗಳಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಕ್ಷಯ ರೋಗವು ಸಹ ಸಾಂಕ್ರಾಮಿಕ ರೋಗವಾಗಿದ್ದು, ಸೀನು, ಕೆಮ್ಮುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ನಿಮ್ಮ ಸಮುದಾಯದಲ್ಲಿ ಎರಡು ವಾರಕ್ಕಿಂತ ಹೆಚ್ಚು ಜ್ವರ, ಕೆಮ್ಮು, ತೂಕ ಕಡಿಮೆಯಾಗುತ್ತಿದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕು ಎಂದರು.

    ಈ ರೋಗ ಎಲ್ಲರಿಗೂ ಬರುವುದಿಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹರಡುತ್ತದೆ. ಕೆಮ್ಮುವಾಗ, ಸೀನುವಾಗ ಕರವಸ ಬಳಸುವುದರ ಜತೆಗೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಕ್ಷಯ ರೋಗದ ಜತೆಗೆ ಕರೊನಾ ರೋಗವನ್ನು ಕಡಿಮೆ ಮಾಡಬಹುದಾಗಿದೆ. ಕ್ಷಯ ರೋಗಕ್ಕೆ ಸರ್ಕಾರದಿಂದ ಚಿಕಿತ್ಸೆಗೆ ಎಲ್ಲ ರೀತಿಯ ವ್ಯವಸ್ಥೆ ಇದೆ. ರೋಗಿಗಳಿಗೆ ಪ್ರತಿ ತಿಂಗಳು 5 ನೂರು ರೂ. ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಕೆ.ಎಚ್.ಪಿ.ಟಿಯ ತೇಜಶ್ವಿನಿ ಹಿರೇಮಠ ಮಾತನಾಡಿ, 2025 ಭಾರತವನ್ನು ಕ್ಷಯ ರೋಗ ಮುಕ್ತಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ಪಣತೊಟ್ಟಿದ್ದು, ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

    ಕ್ಷಯ ರೋಗ ನಿರ್ಮೂಲಣೆ ಕಾರ್ಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ 3 ಮಹಿಳಾ ಸಂಘದ ಸದಸ್ಯರು ಸೇರಿ ಒಟ್ಟು 8 ಜನರನ್ನು ಸನ್ಮಾನಿಸಲಾಯಿತು. ಎ.ಎನ್.ಎಂ. ತರಬೇತಿ ಕೇಂದ್ರದ ಬೋಧಕಿ ಶಕುಂತಲಾ ಹಿರೇಮಠ, ಜಿಲ್ಲಾ ಕ್ಷಯರೋಗ ನಿರ್ಮೂಲಣಾಧಿಕಾರಿ ಪಿ.ಎ.ಹಿಟನ್ನಳ್ಳಿ, ಇತರರು ಉಪಸ್ಥಿತರಿದ್ದರು.



    ಕ್ಷಯ ರೋಗಕ್ಕೆ ಉಚಿತ ಚಿಕಿತ್ಸೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts