More

    ನಿವೃತ್ತ ಸೈನಿಕನಿಗೆ ಅದ್ದೂರಿ ಗ್ರಾಮ ಸ್ವಾಗತ

    ಬಾಗಲಕೋಟೆ: ಆತ ಕಳೆದ 17 ವರ್ಷಗಳ ಶತ್ರುಗಳ ಮೇಲೆ ಹದ್ದಿನ ಕಣ್ಣಿಟ್ಟು ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ. ಇದೀಗ ಸೇವೆಯಿಂದ ನಿವೃತ್ತಿ ಹೊಂದಿ ತನ್ನ ತವರೂರ ಬಂದಿದ್ದೆ ಬಂತು. ಆ ಸಂಭ್ರಮ ಬರೀ ಆತನ ಕುಟುಂಬಕ್ಕೆ ಮಾತ್ರ ಸೀಮಿತವಾಗದೇ ಆ ಇಡೀ ಊರಲ್ಲಿ ಹಬ್ಬದ ಸಂಭ್ರಮಕ್ಕೆ ಕಾರಣವಾಗಿತ್ತು.

    ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಸಂಗಣ್ಣ ನಿಡೋಣಿ ದೇಶದ ವಿವಿಧ ಗಡಿ ಪ್ರದೇಶಗಳಲ್ಲಿ ಕಳೆದ 17 ವರ್ಷಗಳ ದೇಶ ಸೇವೆಗೈದು ನಿವೃತ್ತಿ ಆಗಿದ್ದು, ಮಂಗಳವಾರ ತನ್ನ ಊರಿಗೆ ಆಗಮಿಸಿದ್ದರು.

    ದೇಶದ ಗಡಿಯಲ್ಲಿ ಹಗಲು ರಾತ್ರಿ ಎನ್ನದೇ ಸೇವೆ ಸಲ್ಲಿಸಿ ಬಂದಿರುವ ಯೋಧನಿಗೆ ಗ್ರಾಮಸ್ಥರೆಲ್ಲರೂ ಸೇರಿ ಅದ್ದೂರಿ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಮಂಗಳವಾರ ಬೆಳಗ್ಗೆ ಅಮೀನಗಡ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಆತನಿಗೆ ಹೂಮಾಲೆ ಹಾಕಿ ಬರಮಾಡಿಕೊಂಡ ಗ್ರಾಮಸ್ಥರು ಬಳಿಕ ಅಲ್ಲಿಂದ 8 ಕಿ.ಮೀ. ದೂರದಲ್ಲಿ ಇದ್ದ ಚಿತ್ತರಗಿ ಗ್ರಾಮದ ವರೆಗೂ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಿದರು.

    ರಾಷ್ಟ್ರಧ್ವಜ ಕಟ್ಟಿದ್ದ ತೆರೆದ ವಾಹನದಲ್ಲಿ ಯೋಧನ ಮೆರವಣಿಗೆ ಸಾಗುತ್ತಿದ್ದರೆ ಮುಂದೆ ಮುಂದೆ ಯುವಕರು ಬೈಕ್ ರ್ಯಾಲಿ ನಡೆಸಿದರು. ದೇಶಭಕ್ತಿಗಳ ಗೀತೆಗಳ ಮೊಳಗುತ್ತಿದ್ದವು. ಮಾರ್ಗ ಮಧ್ಯದಲ್ಲಿ ಅನೇಕ ಯುವಕರು ವಾಹನ ಹತ್ತಿ ಯೋಧನಿಗೆ ಹೂಮಾಲೆ ಹಾಕಿ ಅವರಿಗೆ ಗೌರವದ ವಂದನೆ ಸಲ್ಲಿಸುತ್ತಿದ್ದರು. ಇನ್ನು ಅನೇಕ ಮಹಿಳೆಯರು ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಯೋಧನ ಕೈಗೆ ಕೊಟ್ಟು ಹರ್ಷ ಪಡುತ್ತಿದ್ದರು.

    ಇನ್ನು ಚಿತ್ತರಗಿ ಗ್ರಾಮಕ್ಕೆ ಪ್ರವೇಶ ಆಗುತ್ತಿದ್ದಂತೆ ಯೋಧ ತಾನು ಅಕ್ಷರ ಕಲಿತ ಶಾಲೆ ಸೇರಿದಂತೆ ಗ್ರಾಮದ ಎಲ್ಲ ಶಾಲೆಗಳಿಗೆ ಭೇಟಿ ನೀಡಿದ ಯೋಧ ಬರುತ್ತಿದ್ದಾರಂತೆ ಶಾಲೆಗಳಲ್ಲಿ ಮಕ್ಕಳು ಬ್ಯಾಂಡ್ ಬಾರಿಸಿ ಸ್ವಾಗತಿಸಿಕೊಳ್ಳುತ್ತಿದ್ದರು. ಕೈಕುಲಕಿ ಸಂಭ್ರಮಿಸಿದರು. ಇನ್ನು ಶಾಲೆಗಳ ಶಿಕ್ಷಕರು ಯೋಧನಿಗೆ ಸನ್ಮಾನ ಮಾಡಿ ಗೌರವ ಸೂಚಿಸಿದರು.

    ಗ್ರಾಮದ ವಿಜಯ ಮಹಾಂತೇಶ್ವರ ಮಠದಲ್ಲಿ ಗ್ರಾಮಸ್ಥರ ವತಿಯಿಂದ ಗೌರವ ಸನ್ಮಾನವೂ ನಡೆಯಿತು. ಮಠದ ಆವರಣಕ್ಕೆ ಬರುತ್ತಿದ್ದಂತೆ ಅನೇಕ ಮಹಿಳೆಯರು ಹಣೆಗೆ ತಿಲಕ ಇಟ್ಟು, ಆರತಿ ಬೆಳಗಿ ಶುಭ ಹಾರೈಸಿದರು. ಈ ವೇಳೆ ದೇಶ ಸೇವೆಗೈದು ಸುರಕ್ಷಿತವಾಗಿ ಮನೆಗೆ ಹಿಂತಿರುಗಿದಾಗಿ ಗ್ರಾಮಸ್ಥರು ನೀಡಿದ ಅದ್ದೂರಿ ಸ್ವಾಗತ ಕಂಡು ಯೋಧನ ತಾಯಿ ಲಕ್ಷ್ಮೀಬಾಯಿ, ಪತ್ನಿ ದೀಪಾ ಅವರಿಗೆ ಮಾತು ಬರದಂತೆ ಗಂಟಲು ತುಂಬಿ ಬಂದಿತ್ತು. ನಂತರ ವಿಜಯಮಹಾಂತ ಮಠದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ನಿವೃತ್ತಿ ಹೊಂದಿ ಬಂದ ಸೈನಿಕ ಸಂಗಣ್ಣ ದಂಪತಿಯನ್ನು ಸನ್ಮಾನಿಸಿದರು. ಅಷ್ಟೇ ಅಲ್ಲದೇ ಯೋಧನ ಸ್ವಾಗತದ ಹಿನ್ನಲೆಯಲ್ಲಿ ಇಡೀ ಗ್ರಾಮಸ್ಥರಿಗೆ ಸಿಹಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹೀಗಾಗಿ ನಿವೃತ್ತಿಯಾಗಿ ಗ್ರಾಮಕ್ಕೆ ಆಗಮಿಸಿದ ಯೋಧನ ಆಗಮನವನ್ನು ಚಿತ್ತರಗಿ ಗ್ರಾಮಸ್ಥರು ದೀಪಾವಳಿ ಸಂಭ್ರಮದಂತೆ ಆಚರಿಸಿದ್ದು ಸೈನಿಕರ ಬಗ್ಗೆ ಅವರಿಗೆ ಇರುವ ಗೌರವಕ್ಕೆ ಸಾಕ್ಷಿಯಾಗಿತ್ತು.

    ಈ ವೇಳೆ ಗ್ರಾಮದ ಸಂಗಣ್ಣ ನಾಲತ್ತವಾಡ, ಎಸ್.ಎನ್.ಗೌಡರ, ವೆಂಕಟೇಶ ಬೇವೂರ, ಮಹಾಂತೇಶ ಬಾರಡ್ಡಿ, ಎನ್.ಸಿ.ಗೌಡರ, ಸುರೇಶ ಬಾರಡ್ಡಿ, ಬಸವರಾಜ ಬೇವೂರ, ಬಸನಗೌಡ ಬೇವೂರ ಮತ್ತಿತರು ಉಪಸ್ಥಿತರಿದ್ದರು.

    ಹೆತ್ತ ತಾಯಿ ಹಾಗೂ ಜನ್ಮ ಪಡೆದ ದೇಶದ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಬರೀ ಅವರ ಸೇವೆಯನ್ನಷ್ಟೆ ನಾವು ಮಾಡಬಹುದು. ನಾನು ಕಳೆದ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ. ಇವತ್ತು ಗ್ರಾಮಸ್ಥರು ನೀಡಿದ ಸ್ವಾಗತ ಹೃದಯ ತುಂಬಿದೆ. ಇದಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ. ಇಷ್ಟು ವರ್ಷ ಗಡಿಯಲ್ಲಿ ದೇಶ ಸೇವೆ ಮಾಡಿದ್ದೇನೆ. ಈಗ ಊರಲ್ಲಿ ಜಮೀನಿನಲ್ಲಿ ಕೃಷಿಕನಾಗಿ ಕೆಲಸ ಮಾಡುತ್ತೇನೆ. ಗಡಿ ಸೇವೆಯ ಬಳಿಕ ಭೂತಾಯಿ ಸೇವೆಗೆ ಅಣಿಯಾಗಲಿದ್ದೇನೆ.
    -ಸಂಗಣ್ಣ ನಿಡೋಣಿ ನಿವೃತ್ತ ಯೋಧ, ಚಿತ್ತರಗಿ.

    ಸಂಗಣ್ಣ ನಿಡೋಣಿ ನಮ್ಮೂರ ಹೆಮ್ಮೆ, ದೇಶ ಸೇವೆಯ ಮೂಲಕ ಚಿತ್ತರಗಿ ಗ್ರಾಮದ ಹೆಸರು ತಂದಿದ್ದಾನೆ. ಗ್ರಾಮದಲ್ಲಿ ಅನೇಕ ಸೈನಿಕರು ಇದ್ದಾರೆ. ಕೆಲವರು ನಿವೃತ್ತಿಯಾಗಿ ಮರಳಿದ್ದಾರೆ. ಸೈನಿಕನಿಗೆ ಸನ್ಮಾನಿಸುವ ಮೂಲಕ ನಮ್ಮೂರಿನ ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವುದು ಹಾಗೂ ಮತ್ತಷ್ಟು ಯುವಕರು ದೇಶ ಸೇವೆಗೆ ಮುಂದಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.
    -ಸಂಗಣ್ಣ ನಿಂಗನಗೌಡ ಚಿತ್ತರಗಿ ಗ್ರಾಮದ ಹಿರಿಯರು

    ನಾನು ಒಬ್ಬ ಯೋಧನ ಪತ್ನಿ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. 17 ವರ್ಷ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯಾಗಿದ್ದಾರೆ. ಅವರು ಊರಿಗೆ ಬಂದಾಗ ಗ್ರಾಮದ ಜನರು ನೀಡಿದ ಭವ್ಯ ಸ್ವಾಗತ ಕಂಡು ಅತೀವ ಸಂತೋಷವಾಗಿದೆ.
    -ದೀಪಾ ನಿಡೋಣಿ ಯೋಧ ಸಂಗಣ್ಣನ ಪತ್ನಿ



    ನಿವೃತ್ತ ಸೈನಿಕನಿಗೆ ಅದ್ದೂರಿ ಗ್ರಾಮ ಸ್ವಾಗತ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts