More

    ತಹಸೀಲ್ದಾರರು ಚುರುಕಾಗಿ ಕಾರ್ಯನಿರ್ವಹಿಸಲಿ

    ಬಾಗಲಕೋಟೆ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಆಯಾ ತಾಲೂಕಿನ ತಹಸೀಲ್ದಾರರು ಚುರುಕಾಗಿ ಕಾರ್ಯನಿರ್ವಹಿಸುವಂತೆ ಮತದಾರರ ಪಟ್ಟಿ ಜಿಲ್ಲಾ ವೀಕ್ಷಕ ಮನೋಜ್ ಜೈನ್ ಸೂಚಿಸಿದರು.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಜ.15 ಕೊನೆಯ ದಿನವಾಗಿರುವುದರಿಂದ ಹೆಚ್ಚಿನ ಜಾಗೃತಿ ಮೂಡಿಸಬೇಕು. ಆಯಾ ಬೂತ್ ಮಟ್ಟದ ಬಿಎಲ್‌ಓಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿ ಭೇಟಿ ನೀಡಿ ಪರಿಶೀಲಿಸುವ ಕಾರ್ಯವಾಗಬೇಕು ಎಂದರು.

    ಮತದಾರರ ಪಟ್ಟಿ ಪರಿಶೀಲನೆ ಸರಿಯಾಗಿ ಆಗಬೇಕು. ಮತದಾರರ ಪಟ್ಟಿಯಲ್ಲಿ ಅಲೆಮಾರಿ ಜನಾಂಗ ಹಾಗೂ ಸುಡಗಾಡು ಸಿದ್ಧರು ಬಿಟ್ಟು ಹೋಗಬಾರದು. ಜಮಖಂಡಿ ಮತ್ತು ಮುಧೋಳ ಭಾಗದಲ್ಲಿ ಈ ಸಮುದಾಯ ಹೆಚ್ಚಾಗಿ ಕಂಡುಬರುತ್ತಿದ್ದು, ಆಯಾ ತಹಸೀಲ್ದಾರರು ಕ್ರಮವಹಿಸಬೇಕು. ಚುರುಕಾಗಿ ಕಾರ್ಯನಿರ್ವಹಿಸಿ ಮತದಾರರ ಪಟ್ಟಿ ಶುದ್ಧೀಕರಣಕ್ಕೆ ಎಲ್ಲ ರೀತಿಯ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
    ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಆಯಾ ತಾಲೂಕಿನ ತಹಸೀಲ್ದಾರರು ಸೇರಿ ವಿವಿಧ ಪಕ್ಷದ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.

    ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯ 7 ಮತ ಕ್ಷೇತ್ರಗಳಲ್ಲಿ ಜ.13ರ ಅಂತ್ಯಕ್ಕೆ ಹಕ್ಕು ಮತ್ತು ಆಕ್ಷೇಪಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನಮೂನೆ-6ಕ್ಕೆ 26671, ಹೆಸರು ತೆಗೆದು ಹಾಕಲು ನಮೂನೆ-7ಕ್ಕೆ 6489, ಲೋಪದೋಷ ಸರಿಪಡಿಸಲು ನಮೂನೆ-8ಕ್ಕೆ 21753 ಹಾಗೂ ಅದೇ ವಿಧಾನ ಸಭೆ ಕ್ಷೇತ್ರದ ಒಂದು ಮತಗಟ್ಟೆಯಿಂದ ಬೇರೊಂದು ಮತಗಟ್ಟೆ ಸ್ಥಳಾಂತರಕೆ ನಮೂನೆ-8ಎಗೆ 3665 ಅರ್ಜಿಗಳು ಬಂದಿವೆ. ಮಿಂಚಿನ ನೋಂದಣಿಯಲ್ಲಿ 18 ರಿಂದ 19 ಹಾಗೂ 20 ವರ್ಷ ಮೇಲ್ಪಟ್ಟವರಿಂದ ಹೆಸರು ಸೇರ್ಪಡೆಗೆ ಒಟ್ಟು 6110 ಅರ್ಜಿಗಳು ಬಂದಿವೆ. ಅದರಲ್ಲಿ 18 ವರ್ಷ ಪೂರ್ಣಗೊಂಡವರು 1680, 19 ವರ್ಷದವರು 2880 ಹಾಗೂ 20 ವರ್ಷ ಮೇಲ್ಪಟ್ಟವರು 1550 ಜನರಿಂದ ಅರ್ಜಿಗಳು ಬಂದಿವೆ. ಜಿಲ್ಲೆಯ ಪರಿಷ್ಕರಣೆ ಕಾರ್ಯ ಚುರುಕುಗೊಳಿಸಲಾಗುವುದು ಎಂದು ಸಭೆಗೆ ತಿಳಿಸಿದರು.

    ಮತದಾರರ ಪಟ್ಟಿ ಪರಿಷ್ಕರಣೆ ಪರಿಣಾಮಕಾರಿಯಾಗುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ದಿನ 24 ಗಂಟೆಗಳ ಕಂಟ್ರೋಲ್ ರೂಮ್ ತೆರೆಯಬೇಕು. ಸ್ವೀಪ್ ಕಾರ್ಯಕ್ರಮ ಶಿಸ್ತು ಬದ್ಧವಾಗಿ ನಡೆಸಬೇಕು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾಗೃತಿ ಮೂಡಿಸಬೇಕು.
    – ಮನೋಜ್ ಜೈನ್ ಮತದಾರರ ಪಟ್ಟಿ ಜಿಲ್ಲಾ ವೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts