More

    ಪರಂಪರೆ ಕಟ್ಟುವ ಕೆಲಸ ಸ್ಮರಣೀಯ

    ಬಾಗಲಕೋಟೆ: ಕಣ್ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಂಗೀತವನ್ನು ಮುಂದಿನ ಪೀಳಿಗೆ ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಭಿನ್ನ ವೃತ್ತಿಯಲ್ಲಿರುವ ಸಮಾನ ಮನಸ್ಕರರು ಒಂದೆಡೆ ಸೇರಿ ಗೆಳೆಯರ ಬಳಗದ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಇತರರಿಗೆ ಮಾದರಿಯಾಗಿದೆ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ಬಾಗಲಕೋಟೆ ಗೆಳೆಯರ ಬಳಗ 25 ವರ್ಷ ಪೂರೈಸಿದ ಹಿನ್ನೆಲೆ ನಗರದ ಚರಂತಿಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ನಾವು ಯಾವ ವೃತ್ತಿ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ. ಸಮಾಜಕ್ಕೆ ಏನನ್ನು ಕೊಡುಗೆ ನೀಡುತ್ತೇವೆ ಎನ್ನುವುದು ಮುಖ್ಯ. ಪ್ರತಿನಿತ್ಯ ನೂರಾರು ಸಂಘಗಳು ಜನ್ಮ ತಾಳುತ್ತವೆ. ಅಷ್ಟೆ ಬೇಗ ಕಣ್ಮರೆಯಾಗುತ್ತವೆ. ಆದರೆ, 25 ವರ್ಷದ ಹಿಂದೆ ಆರಂಭವಾದ ಈ ಬಳಗ ಬಾಗಲಕೋಟೆಯಲ್ಲಿ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ನೀಡಿದ ಸೇವೆ ಸ್ಮರಣೀಯವಾಗಿದೆ ಎಂದರು.

    ಬೀದರ್ ಜಿಲ್ಲೆಯ ಬಾಲ್ಕಿಯ ಪ್ರೊ.ವಿಕ್ರಮ ವಿಸಾಜಿ ಉಪನ್ಯಾಸ ನೀಡಿ, ಇಂದಿನ ಆಧುನಿಕ ಕಾಲಘಟ್ಟದಲ್ಲಿ ನಿರಂತರ ಚಲನೆಯಲ್ಲಿರುವುದು, ಸಮಾಜದಲ್ಲಿ ಕ್ರಿಯಾಶೀಲ ವಾತಾವರಣ ಕಾಪಾಡಿಕೊಳ್ಳುವುದು ಕಷ್ಟಕರವಾಗಿದೆ. ಸಮಾಜವನ್ನು ಹಾಳು ಮಾಡಿ ದಿಕ್ಕು ತಪ್ಪಿಸುವ ಸನ್ನಿವೇಶಗಳೆ ಹೆಚ್ಚಾಗಿ ಕಂಡು ಬರುವ ಇಂದಿನ ಕಾಲದಲ್ಲಿ ನಮ್ಮ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ ಬಾಂಧವ್ಯ ಗಟ್ಟಿಗೊಳಿಸಬೇಕಿದೆ. ದೇಸಿತನವನ್ನು ಪುನರ್ ಸ್ಥಾಪಿಸುವ ಮೂಲಕ ಇತರರಿಗೆ ಮಾದರಿಯಾಗಬೇಕಿದೆ ಎಂದು ತಿಳಿಸಿದರು.

    ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ, ಗೆಳೆಯರ ಬಳಗದ ಸಂಸ್ಥಾಪಕ ಸದಸ್ಯ ಎಸ್.ಆರ್. ಪಾಟೀಲ ಮಾತನಾಡಿ, 1992 ರಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಹಲವು ಸಮಾನ ಮನಸ್ಕರು ಸೇರಿ ಸಾಹಿತ್ಯ ಚಟುವಟಿಕೆಗಾಗಿ ಹೊಸ ಸಂಘಟನೆ ಆರಂಭಿಸುವ ಆಲೋಚನೆ ಮಾಡಲಾಯಿತು. ವಿಭಿನ್ನ ವೃತ್ತಿಯಲ್ಲಿ ತೊಡಗಿದ ಗೆಳೆಯರು ಸೇರಿ 1994 ರಲ್ಲಿ ಸಿದ್ಧೇಶ್ವರ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಅಧಿಕೃತವಾಗಿ ಚಾಲನೆ ನೀಡಲಾಯಿತು. ಅಂದಿನಿಂದ 25 ವರ್ಷ ನಾನಾ ಚಟುವಟಿಕೆ ಮೂಲಕ ಸಮಾಜದ ಸೇವೆಯಲ್ಲಿ ತೊಡಗಿದೆ. ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು.

    ಗೆಳೆಯರ ಬಳಗದ ಮಾಜಿ ಅಧ್ಯಕ್ಷರು, ಸಂಸ್ಥಾಪಕ ಸದಸ್ಯರನ್ನು ಸನ್ಮಾನಿಸಲಾಯಿತು. ಚರಂತಿಮಠ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿವಿವಿ ಸಂಘದ ಆಡಳಿತ ಅಧಿಕಾರಿ ಎನ್.ಜಿ.ಕರೂರ, ಗೆಳೆಯರ ಬಳಗದ ಅಧ್ಯಕ್ಷ ಡಾ.ಎಚ್.ಎಸ್.ಪೂಜಾರ, ಡಾ.ಎಚ್.ಎಫ್.ಯೋಗಪ್ಪನವರ, ಡಾ.ಬಿ.ಎಚ್.ಕೆರೂಡಿ ಸೇರಿ ಇತರರು ಇದ್ದರು. ಮಹಾಬಳೇಶ್ವರ ಗುಡಗುಂಟಿ ನಿರೂಪಿಸಿದರು. ಎಸ್.ಬಿ.ಗವಿಮಠ ವಂದಿಸಿದರು.

    ಜನಪದ ಸಂಸ್ಕೃತಿ ಇಂದು ಮಾಯವಾಗಿದೆ. ಜೋಗುಳ ಪದ, ಹಂತಿ ಪದ, ಬೀಸುವ ಪದಗಳನ್ನು ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾಲ ಕ್ರಮೇಣ ನೇಪಥ್ಯಕ್ಕೆ ಸರಿಯುತ್ತಿರುವ ಭಾರತೀಯ ಭವ್ಯ ಪರಂಪರೆಯನ್ನು ಯುವ ಪೀಳಿಗೆಗೆ ಮಾರ್ಗದರ್ಶನ ಮಾಡುವ ಮೂಲಕ ಉಳಿಸಬೇಕಿದೆ.
    ಪ್ರಭು ಸ್ವಾಮೀಜಿ ಚರಂತಿಮಠ ಬಾಗಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts