More

    ಮಾನವ ಸಂಪನ್ಮೂಲ ಸದ್ಬಳಕೆಯಾಗಲಿ

    ಬಾಗಲಕೋಟೆ: ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ. ಯುವಕರು ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

    ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೌಶಲ ಅಭಿವೃದ್ಧಿ, ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ ಹಾಗೂ ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದಲ್ಲಿ ಎರಡು ದಿನ ಹಮ್ಮಿಕೊಳ್ಳಲಾಗಿರುವ ಉದ್ಯೋಗ ಮೇಳಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

    ನಮ್ಮ ದೇಶದಲ್ಲಿ ಶೇ.67 ರಷ್ಟು ಜನ ಯುವಕರಿದ್ದು, ಪ್ರಪಂಚದ ಯಾವ ದೇಶದಲ್ಲಿಯೂ ಇಷ್ಟೊಂದು ಪ್ರಮಾಣದಲ್ಲಿ ಯುವಕರು ಇಲ್ಲ. ನಿರುದ್ಯೋಗ ಯುವಕರಿಗೆ ಉದ್ಯೋಗ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

    ನಮ್ಮಲ್ಲಿರುವ ಮಾನವ ಸಂಪನ್ಮೂಲ ಸದ್ಬಳಕೆಯಾಗಬೇಕು. ಎಲ್ಲರಿಗೂ ಉದ್ಯೋಗ ಸಿಗುವಂತಾಗಬೇಕು. ಅಂದಾಗ ಮಾತ್ರ ನಮ್ಮ ದೇಶ ಶಕ್ತಿಶಾಲಿ ರಾಷ್ಟ್ರವಾಗಲು ಸಾಧ್ಯ. ಈ ಉದ್ಯೋಗ ಮೇಳದಲ್ಲಿ 80 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ನೀಡಲು ಮುಂದಾಗಿವೆ. ಈ ಉದ್ಯೋಗ ಮೇಳ ಯುವಕರ ಬದುಕಿಗೆ ಆಸರೆಯಾಗಬೇಕು ಎಂದು ತಿಳಿಸಿದರು.

    ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ ಮಾತನಾಡಿ, ದುಡಿಯುವ ಕೈಗಳಿಗೆ, ವಿದ್ಯಾವಂತರಿಗೆ ಉದ್ಯೋಗ ದೊರೆತಲ್ಲಿ ಅನೇಕ ಸಮಸ್ಯೆಗಳಿಗೆ ತನ್ನಿಂದ ತಾನೇ ಪರಿಹಾರ ದೊರೆಯುತ್ತದೆ. ಉದ್ಯೋಗ ಮೇಳ ಆಯೋಜನೆ ಮಾಡುವುದರ ಜತೆಗೆ ಉದ್ಯೋಗ, ಉದ್ಯಮ ಸೃಷ್ಟಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

    ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಯುವಕರು ವಿವಿಧ ವಿದ್ಯಾರ್ಹತೆ ಜತೆಗೆ ಕೌಶಲ ತರಬೇತಿಗಳನ್ನು ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬೇರೆ ಬೇರೆ ಕೋರ್ಸಗಳನ್ನು ಕಲಿಯಬೇಕು. ಉದ್ಯೋಗ ಸಿಗಲಿಲ್ಲವೆಂದು ಬೇಸರ ಪಟ್ಟುಕೊಳ್ಳಬಾರದು. ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸರ್ಕಾರದಿಂದ ಸಹಾಯಧನ, ಸಾಲ ಸೌಲಭ್ಯಗಳ ಯೋಜನೆಗಳು ಇದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಗೃಹಿಣಿಯರಿಗೂ ಉದ್ಯೋಗ ಕೈಗೊಳ್ಳಲು ಸಹಾಯಧನ ಸಹ ನೀಡಾಗುತ್ತಿದೆ ಎಂದರು.

    ಉದ್ಯೋಗ ಆಕಾಂಕ್ಷಿಗಳಿಗೆ ಸಾಂಕೇತಿಕವಾಗಿ ವಿವಿಧ ಕಂಪನಿಯವರ ನೇಮಕಾತಿ ಆದೇಶ ನೀಡಲಾಯಿತು. ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಗರಿಮಾ ಪವ್ವಾರ, ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ರಾಜೀವ ಇಂಜಿಗನೇರಿ, ಕೌಶಲ ತರಬೇತಿ ಕೇಂದ್ರದ ಪ್ರಾಚಾರ್ಯ ಎಸ್.ಎಸ್.ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಿಲ್ಲಾ ಸಾಕ್ಷರತಾ ಅಧಿಕಾರಿ ಬಸವರಾಜ ಶಿರೂರ ವಂದಿಸಿದರು.

    ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. 80ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಇದರ ಜತೆಗೆ ಉದ್ಯೋಗ ಪಡೆದುಕೊಂಡವರು ಕೆಲಸ ಮಾಡುತ್ತಿರುವ ಬಗ್ಗೆ ಜಾಬ್ ಟ್ರಾೃಕ್ ಮಾಡಲಾಗುತ್ತಿದೆ.
    – ಡಾ.ಕೆ.ರಾಜೇಂದ್ರ ಜಿಲ್ಲಾಧಿಕಾರಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts