More

    ಯುಗಾದಿ ವಹಿವಾಟಿಗೆ ಗರ..!

    ಬಾಗಲಕೋಟೆ: ಯುಗಾದಿ, ಬಸವ ಜಯಂತಿ, ದೀಪಾವಳಿ ಹಬ್ಬಗಳು ಬಂತೆಂದರೆ ಸಾಕು ಅಂಗಡಿ, ಮುಂಗಟ್ಟುಗಳಲ್ಲಿ ಕಾಲಿಡಲು ಆಗದಷ್ಟು ಜನರು ತುಂಬಿರುವ ದೃಶ್ಯ ಸಹಜ. ವ್ಯಾಪಾರ ವಹಿವಾಟು ಭರ್ಜರಿಯಾಗಿರುತ್ತದೆ. ಆದರೆ, ಪ್ರಸಕ್ತ ಯುಗಾದಿ ಹಬ್ಬದಲ್ಲಿ ಕೋಟೆ ನಗರಿಯ ವಾಣಿಜ್ಯ ಕ್ಷೇತ್ರದಲ್ಲಿ ಅಂತಹ ಸಂಭ್ರಮ ಕಾಣಿಸುತ್ತಿಲ್ಲ.
    ಹೌದು, ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ, ಕೋವಿಡ್ ಎರಡನೇ ಅಲೆ ಭೀತಿಗೆ, ಬಿಸಿಲಿನ ತಾಪಕ್ಕೆ ಜಿಲ್ಲಾ ಕೇಂದ್ರ ಸ್ಥಾನದ ಬಾಗಲಕೋಟೆ ನಗರದ ವ್ಯಾಪಾರ ನಲುಗಿ ಹೋಗಿದೆ. ಕಿರಾಣಿ, ಬಟ್ಟೆ, ಚಿನ್ನಾಭರಣ, ವಾಹನ ಮಾರಾಟ ಮಳಿಗೆಗಳು ಸೇರಿ ವಿವಿಧ ರೀತಿಯ ವಹಿವಾಟು, ವ್ಯಾಪಾರವಿಲ್ಲದೆ ಮಾರುಕಟ್ಟೆ ಭಣಭಣ ಎನ್ನತೊಡಗಿದೆ.

    ವ್ಯಾಪಾರಸ್ಥರಿಗೆ ಬೆಲ್ಲಕ್ಕಿಂತ ಬೇವು ಜಾಸ್ತಿ
    ಹಿಂದೊಮ್ಮೆ ವಾಣಿಜ್ಯ ವಹಿವಾಟಿನಿಂದಲೇ ಗುರುತಿಸಿಕೊಂಡಿದ್ದ ಬಾಗಲಕೋಟೆ ನಗರ ವರ್ತಮಾನದಲ್ಲಿ ವಹಿವಾಟು ವೃದ್ಧಿಯಾಗದೆ ಕಳೆಗುಂದುತ್ತಿದೆ. ಆಲಮಟ್ಟಿ ಜಲಾಶಯದ ಹಿನ್ನೀರು ಕೋಟೆ ನಗರಿಯನ್ನು ಬರೀ ಮುಳುಗಡೆ ಮಾಡಿದ್ದಲ್ಲದೆ ಇಲ್ಲಿನ ವ್ಯಾಪಾರವನ್ನು ಮುಳುಗಿಸಿತು.

    ಕಳೆದ ವರ್ಷ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿದ್ದ ಲಾಕ್‌ಡೌನ್ ಪರಿಣಾಮ ಜಿಲ್ಲಾ ಕೇಂದ್ರ ಮಾರುಕಟ್ಟೆ ಸಂಪರ್ಕದಿಂದ ಹಳ್ಳಿಗರು ದೂರ ಉಳಿದರು. ಅವರೆಲ್ಲ ಸ್ಥಳೀಯ ಮಾರುಕಟ್ಟೆಯತ್ತ ವಾಲಿದರು. ಬಳಿಕ 4 ತಿಂಗಳು ವಹಿವಾಟು ವೃದ್ಧಿಯಾಗಲಿಲ್ಲ. ದೀಪಾವಳಿ ಬಳಿ ವಹಿವಾಟು ಸುಧಾರಿಸಿಕೊಂಡಿತು. ಈ ಯುಗಾದಿ ಹಬ್ಬಕ್ಕೆ ಎಲ್ಲ ರೀತಿಯ ವ್ಯಾಪಾರ ವಹಿವಾಟು ಉತ್ತಮಗೊಳ್ಳುತ್ತದೆ ಎನ್ನುವ ನಿರೀಕ್ಷೆ ಕೋಟೆನಗರಿ ವ್ಯಾಪರಸ್ಥರಲ್ಲಿ ಮನೆ ಮಾಡಿತ್ತು. ಆದರೆ, ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರ ಸಂಚಾರ ಇಲ್ಲವಾಗಿದೆ. ಕೆಲವರು ಬಿಸಿಲಿನ ಆರ್ಭಟ ಹಾಗೂ ಕೋವಿಡ್ ಭೀತಿಗೆ ಮಾರುಕಟ್ಟೆ ಪ್ರದೇಶ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದಾರೆ. ಇದೆಲ್ಲದರ ಪರಿಣಾಮ ವ್ಯಾಪಾರಸ್ಥರಿಗೆ ಯುಗಾದಿ ಹಬ್ಬ ಬೆಲ್ಲಕ್ಕಿಂತ ಬೇವು ಜಾಸ್ತಿ ಎನ್ನುವಂತಾಗಿದೆ.

    ಕೋಟ್ಯಂತರ ವಹಿವಾಟು ನಷ್ಟ?
    ಯುಗಾದಿ ಹಬ್ಬ ಹಾಗೂ ಈ ವೇಳೆ ನಡೆಯುವ ವಿವಿಧ ಜಾತ್ರೆ, ರಥೋತ್ಸವದಿಂದ ಬಾಗಲಕೋಟೆ ನಗರದ ನೂರಾರು ಕಿರಾಣಿ ಅಂಗಡಿಗಳು ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತವೆ. 70ಕ್ಕೂ ಹೆಚ್ಚು ಬಟ್ಟೆ ಅಂಗಡಿಗಳ 60 ರಿಂದ 70 ಲಕ್ಷ ರೂ. ವ್ಯಾಪಾರ ಮಾಡುತ್ತವೆ. ಉಳಿದಂತೆ ಸ್ಟೇಷನರಿ, ಚಿನ್ನಾಭರಣ, ರೆಡಿಮೇಡ್ ಬಟ್ಟೆ, ಗೃಹ ಉಪಯೋಗಿ ವಸ್ತುಗಳ ವ್ಯಾಪಾರವು ಜೋರಾಗಿ ಇರುತ್ತದೆ. ಆದರೆ, ಸಾರಿ ವ್ಯಾಪಾರ ಮೇಲೆ ಭಾರಿ ಹೊಡೆತ ಬಿದ್ದಿದೆ. ಒಟ್ಟಾರೆ ವಹಿವಾಟಿನಲ್ಲಿ ಶೇ.30 ರಷ್ಟು ಕುಸಿತವಾಗಿದೆ. ಇದರಿಂದ ಮಾರುಕಟ್ಟೆಯ ಮೇಲೆ ಕಾರ್ಮೋಡ ಆವರಿಸಿದೆ.

    ಕಳೆದ ವರ್ಷ ಲಾಕ್‌ಡೌನ್ ಬಳಿಕ ಬಾಗಲಕೋಟೆ ನಗರದ ವ್ಯಾಪಾರ ಸ್ವಲ್ಪ ಚೇತರಿಸಿಕೊಂಡಿತ್ತು. ಯುಗಾದಿ ಸಂದರ್ಭದಲ್ಲಿ ಉತ್ತಮ ವ್ಯಾಪಾರ ವಹಿವಾಟು ಆಗುವ ನಿರೀಕ್ಷೆ ಇತ್ತು. ಆದರೆ, ಸಾರಿಗೆ ನೌಕರರ ಮುಷ್ಕರದಿಂದ ಜನರಿಗೆ ತೊಂದರೆಯಾಗಿದೆ. ಅದರಲ್ಲೂ ಕೋವಿಡ್ ಎರಡನೇ ಅಲೆ ಭೀತಿಗೆ ಜನರು ಮಾರುಕಟ್ಟೆಗೆ ಬರುತ್ತಿಲ್ಲ. ಜಾತ್ರೆ, ಉತ್ಸವ ರದ್ದುಗೊಳಿಸಿದ್ದರಿಂದ ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿದೆ. ಕಳೆದ ನಾಲ್ಕು ದಿನಗಳಿಂದ ಶೇ.30 ವಹಿವಾಟು ಕುಸಿತವಾಗಿದೆ.
    ನಾಗರಾಜ ಕುಪ್ಪಸ್ತ ಅಧ್ಯಕ್ಷ ಕಿರಾಣಿ ಮರ್ಚಂಟ್ ಅಸೋಸಿಯೇಷನ್ ಬಾಗಲಕೋಟೆ

    ಯುಗಾದಿ ಸಂದರ್ಭದಲ್ಲಿ ಬಟ್ಟೆ ಖರೀದಿ ಮಾಡುವುದು ವಾಡಿಕೆ. ಹಬ್ಬ ಸಮೀಪ ಇದ್ದರೂ ಸಹ ಮಾರುಕಟ್ಟೆಗೆ ಬರಲು ಬಸ್ ಇಲ್ಲದೆ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಇದರಿಂದ ವ್ಯಾಪಾರದ ಮೇಲೆ ದೊಡ್ಡ ಪರಿಣಾಮ ಬೀರಿದೆ. ವ್ಯಾಪಾರ ಇಲ್ಲದೆ ಖಾಲಿ ಕುಳಿತು ಸಮಯ ಕಳೆಯುವಂತಾಗಿದೆ. ಬಹಳಷ್ಟು ಜನರು ಆನ್‌ಲೈನ್, ಸ್ಥಳೀಯ ಮಾರುಕಟ್ಟೆಯತ್ತ ವಾಲಿದ್ದಾರೆ.
    ರಾಮ ಮುಂದಡಾ ಅಧ್ಯಕ್ಷ ಕ್ಲಾಥ್ ಮರ್ಚಂಟ್ ಅಸೋಸಿಯೇಷನ್

    ಯುಗಾದಿ ವೇಳೆ ಚಿನ್ನಾಭರಣ ವ್ಯಾಪಾರ ಉತ್ತಮವಾಗಿ ಇರುತ್ತಿತ್ತು. ಕಳೆದ ವರ್ಷ ಕೋವಿಡ್ ತಲ್ಲಣಗೊಳಿಸಿತು. ಈ ಸಾರಿ ಹಬ್ಬದ ಸಂದರ್ಭದಲ್ಲಿ ಸಾರಿಗೆ ಮುಷ್ಕರದಿಂದ ಬಸ್ ಸಂಚಾರ ಇಲ್ಲದೆ ವ್ಯಾಪಾರ ಕಡಿಮೆಯಾಗಿದೆ. ಕೋವಿಡ್ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಗಮಿಸಲು ಹಿಂದೇಟು ಹಾಕಿರಬಹುದು. ಶೇ. 25 ಚಿನ್ನಾಭರಣ ವ್ಯಾಪಾರದಲ್ಲಿ ಕುಸಿತವಾಗಿದೆ.
    ಮಲ್ಲಿಕಾರ್ಜುನ ಶೀಲವಂತ, ವ್ಯವಸ್ಥಾಪಕ ನಿರ್ದೇಶಕ, ಶೀಲವಂತ ಆ್ಯಂಡ್ ಸನ್ಸ್ ಜ್ಯುವೆಲ್ಸ್

    
    
    ಯುಗಾದಿ ವಹಿವಾಟಿಗೆ ಗರ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts