More

    ಬೆಳಗ್ಗೆ ಕಣ್ಣೀರು ಸಂಜೆ ಪನ್ನೀರು

    ಬಾಗಲಕೋಟೆ: ಸಾರಿಗೆ ನೌಕರರ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ನಾಲ್ಕು ದಿನಗಳಿಂದ ನಡೆದಿದ್ದ ಮುಷ್ಕರ ಸೋಮವಾರ ಸಂಜೆ ಅಂತ್ಯವಾಗಿದೆ. ಇದರಿಂದ ನಾಲ್ಕು ದಿನಗಳಿಂದ ಸ್ಥಗಿತವಾಗಿದ್ದ ಸಾರಿಗೆ ಬಸ್‌ಗಳು ರಸ್ತೆಗೆ ಇಳಿದಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಮುಷ್ಕರ ಹಿಂದೆ ಪಡೆದಿದ್ದು, ಕರ್ತವ್ಯಕ್ಕೆ ಹಾಜರಾಗುವಂತೆ ಸುದ್ದಿ ಬರುತ್ತಲೇ ಬಾಗಲಕೋಟೆ ಜಿಲ್ಲಾ ಸಾರಿಗೆ ನೌಕರರು, ಕಾರ್ಮಿಕರು ಕೇಂದ್ರ ಬಸ್ ನಿಲ್ದಾಣದ ಪ್ರತಿಭಟನಾನಿರತ ಸ್ಥಳದಲ್ಲಿ ತೀವ್ರ ಹರ್ಷ ವ್ಯಕ್ತಪಡಿಸಿದರು.

    ಒಂದು ಬೇಡಿಕೆ ಬಿಟ್ಟು ಉಳಿದ ಬೇಡಿಕೆಗಳು ಈಡೇರಿದ್ದಕ್ಕಾಗಿ ಸಾರಿಗೆ ನೌಕರರು ಸಂಭ್ರಮಾಚರಣೆ ನಡೆಸಿದರು. ಪರಸ್ಪರ ಬಣ್ಣ ಎರಚಿ, ಪಟಾಕಿ ಸಿಡಿಸಿ ಖುಷಿ ಪಟ್ಟರು. ಅಲ್ಲದೆ, ನೌಕರರು ಭರ್ಜರಿ ಸ್ಟೆಪ್ ಸಹ ಹಾಕಿದರು. ಬೆಳಗ್ಗೆ ಸರ್ಕಾರ, ಕಾರ್ಮಿಕ ಮುಖಂಡ ಅನಂತ ಸುಬ್ಬರಾವ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಮಹಿಳಾ ಸಿಬ್ಬಂದಿ ಸಹ ಮುಷ್ಕರ ಮುಕ್ತಾಯವಾಗಿದ್ದಕ್ಕೆ ಸಂಭ್ರಮಪಟ್ಟರು. ಡಾ.ರಾಜಕುಮಾರ ಅವರ ಕೂಡಿ ಬಾಳೋಣ ಎನ್ನುವ ಹಾಡಿಗೆ ಡ್ಯಾನ್ಸ್ ಮಾಡಿದರು. ಸಿಬ್ಬಂದಿ ಕುಟುಂಬದ ವೃದ್ಧೆಯೊಬ್ಬರು ಹಾಗೂ ಪುಟಾಣಿ ಸಹ ಭಾಗವಹಿಸಿ ಹೆಜ್ಜೆ ಹಾಕಿ ಸಂಭ್ರಮಿಸಿದರು.

    ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ಅಲ್ಲೊಂದು ಇಲ್ಲೊಂದು ಬಸ್ ಸಂಚಾರ ನಡೆದಿತ್ತು. ಸಂಜೆ ಮುಷ್ಕರ ಮುಕ್ತಾಯ ಆಗಿದ್ದರಿಂದ ಜಿಲ್ಲಾದ್ಯಂತ ನೂರಕ್ಕೂ ಅಧಿಕ ಬಸ್‌ಗಳು ರಸ್ತೆಗೆ ಇಳಿದವು. ಬಸ್ ಇಲ್ಲದೆ ಪರದಾಡುತ್ತಿದ್ದ ಪ್ರಯಾಣಿಕರು ಸಹ ನಿಟ್ಟುಸಿರು ಬಿಟ್ಟು ಬಸ್ ಹತ್ತಿದರು.

    ಬೆಳಗ್ಗೆ ಗೊಂದಲ
    ಸೋಮವಾರ ಬೆಳಗ್ಗೆ ಬಾಗಲಕೋಟೆ ಬಸ್ ನಿಲ್ದಾಣದಲ್ಲಿ ಕಾರ್ಮಿಕರ ನಡುವೆ ಗೊಂದಲ ಸೃಷ್ಟಿಯಾಗಿತ್ತು. ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮನವರ, ಸಾರಿಗೆ ಅಧಿಕಾರಿ ಪಿ.ವಿ. ಮೇತ್ರಿ ಸೇರಿ ಅಧಿಕಾರಿಗಳು ಮನವೊಲಿಸುವ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಹತ್ತು ಗಂಟೆ ವೇಳೆಗೆ ಕೆಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಂತೆ ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳ ಭದ್ರತೆಯಲ್ಲಿ ಬೆರಳೆಣಿಕೆ ಬಸ್‌ಗಳನ್ನು ರಸ್ತೆಗೆ ಇಳಿಸಲಾಯಿತು.

    ಇದರಿಂದ ಮುಷ್ಕರ ನಿರತರು ತೀವ್ರ ಬೇಸರ ಹೊರಹಾಕಿದರು. ಮಹಿಳಾ ಸಿಬ್ಬಂದಿ ಕಣ್ಣೀರು ಹಾಕಿ ಕಷ್ಟ ತೋಡಿಕೊಂಡರು. ನಿರ್ವಾಹಕಿ ನೂರಜಾನ್ ಎನ್ನುವವರು, ನೇರವಾಗಿ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ ಹಾಗೂ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಕಣ್ಣೀರಿಟ್ಟು ಗೋಳಾಡಿದರು.

    ಅನಂತ ಸುಬ್ಬರಾವ ನಿಮಗೆ ವಯಸ್ಸಾಗಿದೆ. ಈಗಲಾದರೂ ಕಾರ್ಮಿಕರಿಗೆ ಒಳ್ಳೆಯದನ್ನು ಮಾಡಿ, ಸಾಯುವ ಮುನ್ನ ಒಳ್ಳೆಯ ಕೆಲಸ ಮಾಡಿ, ನಿಮ್ಮ ಮೈಯಲ್ಲಿ ಹರಿಯುತ್ತಿರುವುದು ಸಾರಿಗೆ ನೌಕರರ ಪ್ರತಿ ತಿಂಗಳು ಕೊಡುವ ಬೆವರಿನ ಐದು ರೂಪಾಯಿ ಕಾರಣ. ನಿಮ್ಮ ಬೆಂಬಲಿಗರನ್ನು ಬಿಟ್ಟು ಬಸ್ ಸಂಚಾರ ಆರಂಭ ಮಾಡುತ್ತಿದ್ದೀರಿ ಎಂದು ಆರೋಪಿಸಿದರು. ಹಾಗೆಯೇ ಸಚಿವ ಆರ್. ಅಶೋಕ ಅವರು ಸಾರಿಗೆ ಮಂತ್ರಿ ಲಕ್ಷ್ಮಣ ಸವದಿ ಅವರಿಗೆ ನಮ್ಮ ಬೇಡಿಕೆ ಈಡೇರಿಸಬೇಡಿ ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ದೂರಿದರು. ಕೋಡಿಹಳ್ಳಿ ಚಂದ್ರಶೇಖರ ಅವರಿಗೆ ತುತ್ತೂರಿ ಊದುತ್ತಾರೆ ಎಂದಿದ್ದ ಡಿಸಿಎಂ ಗೋವಿಂದ ಕಾರಜೋಳ ಅವರಿಗೂ ಸರ್ ಅವರು ನ್ಯಾಯಯುತವಾದ ತುತ್ತೂರಿ ಊದುತ್ತಾರೆ. ನಿಮ್ಮಂತೆ ಹಾವು ಆಡಿಸುವ ಪುಂಗಿ ಊದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನೂರಜಾನ್ ಹಾಗೂ ನೀಲಮ್ಮ ಎನ್ನುವ ನಿರ್ವಾಹಕಿಯರು ತಮ್ಮ ತಮ್ಮ ಮನೆ ಸ್ಥಿತಿ ನೆನೆದು ಕಣ್ಣೀರ ಕೋಡಿ ಹರಿಸಿದರು. ನಮಗೆ ತಾರತಮ್ಯ ಆಗುತ್ತಿದೆ. ಕನಿಷ್ಠ ಸಂಬಳದಲ್ಲಿ ದುಡಿಯುತ್ತಿದ್ದೇವೆ. ನಮಗೆ ನ್ಯಾಯ ಕೊಡಿ ಎಂದು ಕಣ್ಣೀರು ಹಾಕಿದರು. ಆದರೆ, ಸಂಜೆ ಮುಷ್ಕರ ಮುಗಿದಾಗ ಎಲ್ಲ ಮಹಿಳಾ ಸಿಬ್ಬಂದಿ ಜತೆ ಸೇರಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಪನ್ನೀರು ಸುರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts