More

    ದುಷ್ಕರ್ಮಿಗಳ ಕಲ್ಲೇಟಿಗೆ ಕರ್ತವ್ಯನಿರತ ಚಾಲಕ ಸಾವು

    ಬಾಗಲಕೋಟೆ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಹಿರಿಯ ಅಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ಸಾರಿಗೆ ಚಾಲಕ ಒಬ್ಬರು ದುಷ್ಕರ್ಮಿಗಳ ಕಲ್ಲೇಟಿಗೆ ಪ್ರಾಣವನ್ನು ಕಳೆದುಕೊಂಡಿರುವ ದುರ್ಘಟನೆ ಜಮಖಂಡಿ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ.

    ಜಮಖಂಡಿ ನಗರದ ನಬಿರಸೂಲ ಖಾದರಸಾಬ ಅವಟಿ (58) ಸಾವನ್ನಪ್ಪಿರುವ ದುರ್ದೈವಿ ಚಾಲಕ. ಜಮಖಂಡಿ ಸಾರಿಗೆ ಘಟಕದಲ್ಲಿ ಚಾಲಕನಾಗಿದ್ದನು. ವಿಜಯಪುರದಿಂದ ಜಮಖಂಡಿಗೆ ಬಸ್ ಬರುತ್ತಿದ್ದ ವೇಳೆ ಜಮಖಂಡಿ ತಾಲೂಕಿನ ಕವಟಗಿ ಪುನರ್ ವಸತಿ ಕೇಂದ್ರದ ಬಳಿ ಯಾರೋ ದುಷ್ಕರ್ಮಿಗಳು ಚಾಲಕನನ್ನು ಗುರಿಯಾಗಿಟ್ಟುಕೊಂಡು ಬಸ್‌ಗೆ ಕಲ್ಲೆಸೆದಿದ್ದಾರೆ. ಕಲ್ಲು ಚಾಲಕನ ಮುಂಭಾಗದ ಗಾಜನ್ನು ತೂರಿಕೊಂಡು ನೇರವಾಗಿ ಚಾಲಕನ ಕುತ್ತಿಗೆಗೆ ಬಲವಾಗಿ ಬಡಿದು ಈ ಘಟನೆ ಸಂಭವಿಸಿದೆ.

    ಈ ಕುರಿತು ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಲ್ಲೇಟಿನಿಂದ ಚಾಲಕ ಮೃತಪಟ್ಟಿದ್ದರಿಂದ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ದುಷ್ಕೃತ್ಯ ನಡೆಸಿದವರು ಯಾರು? ಎಂದು ಪತ್ತೆ ಮಾಡಲು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಅವರು ಒಂದು ವಿಶೇಷ ತಂಡವನ್ನು ರಚಿಸಿದ್ದಾರೆ.

    14 ತಿಂಗಳಲ್ಲಿ ನಿವೃತ್ತಿ ಆಗಲಿದ್ದ
    ಚಾಲಕ ನಬಿರಸೂಲ್ ಅವರು ನಿವೃತ್ತಿಯಾಗಲು ಕೇವಲ 14 ತಿಂಗಳಷ್ಟೆ ಉಳಿದಿತ್ತು. ಹೀಗಾಗಿ ಎರಡು ವರ್ಷಗಳಿಂದ ಜಮಖಂಡಿ ಡಿಪೋದಲ್ಲಿ ವಾಹನ ನಿಲ್ಲಿಸುವುದು, ಬಿಡುವು ಕೆಲಸ ಮಾತ್ರ ಮಾಡುತ್ತಿದ್ದರು. ಇದೀಗ ಸಾರಿಗೆ ನೌಕರರ ಮುಷ್ಕರ ಆರಂಭಿಸಿದ್ದರಿಂದ 55 ವರ್ಷ ವಯಸ್ಸು ಮೀರಿದ ಚಾಲಕರು ಆರೋಗ್ಯ ಪ್ರಮಾಣ ಪತ್ರ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾಗಬೇಕು ಎನ್ನುವ ಅಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಇಂದು ನಬಿರಸೂಲ್ ಕರ್ತವ್ಯಕ್ಕೆ ಹಾಜರಾಗಿದ್ದರು.

    ಬೆಳಗ್ಗೆ ಜಮಖಂಡಿಯಿಂದ ಕಲಬುರಗಿ ಜಿಲ್ಲೆಯ ಘತ್ತರಗಿಗೆ ಬಸ್ ಚಾಲನೆ ಮಾಡಿಕೊಂಡು ಹೋಗಿದ್ದರು. ವಾಪಸ್ಸು ಬರುವಾಗ ವಿಜಯಪುರದಿಂದ ಜಮಖಂಡಿ ಮಾರ್ಗ ಮಧ್ಯದಲ್ಲಿ ಜಮಖಂಡಿ ತಾಲೂಕಿನ ಕವಟಗಿ ಪುನರ್ ವಸತಿ ಕೇಂದ್ರದ ಬಳಿ ಬಸ್ ಚಾಲನೆಯಲ್ಲಿ ಇದ್ದಾಗ ಯಾರೋ ದುಷ್ಕರ್ಮಿಗಳು ಚಾಲಕನನ್ನು ಭಯ ಬೀಳಿಸುವ ಹಾಗೂ ಮುಷ್ಕರ ಮೀರಿ ಕರ್ತವ್ಯಕ್ಕೆ ತೆರಳುತ್ತಿದ್ದವರಲ್ಲಿ ಆತಂಕ ಮೂಡಿಸುವ ಉದ್ದೇಶದಿಂದ ಬಲವಾಗಿ ಕಲ್ಲು ಎಸೆದಿದ್ದಾರೆ ಎನ್ನಲಾಗಿದೆ. ಕಲ್ಲು ಗಾಜನ್ನು ಒಡೆದುಕೊಂಡು ನೇರವಾಗಿ ಚಾಲಕನ ಕುತ್ತಿಗೆಗೆ ಬಡಿದಿದೆ. ಕೊನೆಗೆ ಜೀವವನ್ನು ಕಳೆದುಕೊಂಡಿದ್ದಾರೆ.

    ಪ್ರಯಾಣಿಕರ ಜೀವ ಉಳಿಸಿ ಪ್ರಜ್ಞೆ ತಪ್ಪಿದ ಚಾಲಕ
    ಇನ್ನು ಬಸ್ ಚಾಲನೆ ಮಾಡುತ್ತಿದ್ದ ನಬಿರಸೂಲ್ ಅವರ ಕುತ್ತಿಗೆಗೆ ಬಲವಾದ ಕಲ್ಲು ಬೀಳುತ್ತಿದ್ದಂತೆ ವಾಹನದಲ್ಲಿ ಇದ್ದ ಪ್ರಯಾಣಿಕರೆಲ್ಲ ಸಂಪೂರ್ಣ ಗಾಬರಿ ಆಗಿದ್ದರು. ತಕ್ಷಣವೇ ವಾಹನ ನಿಲ್ಲಿಸಿದ ಚಾಲಕ ಮರುಕ್ಷಣದಲ್ಲೇ ಪ್ರಜ್ಞೆ ತಪ್ಪಿದ್ದಾನೆ. ಇದರಿಂದ ಆತಂಕದಲ್ಲಿ ಇದ್ದ ಪ್ರಯಾಣಿಕರು ಕೂಡಲೇ ಅವರನ್ನು ಬಸ್‌ನಿಂದ ಹೊರಗೆ ಎತ್ತಿಕೊಂಡು ಬಂದು ಆಂಬುಲೆನ್ಸ್ ಮೂಲಕ ಜಮಖಂಡಿ ತಾಲೂಕು ಆಸ್ಪತ್ರೆಗೆ ಸೇರಿಸಿದ್ದಾರೆ. ಪರಿಸ್ಥಿತಿ ತುಂಬಾ ಚಿಂತಾಜನಿಕವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಿದರಾದರೂ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದರಿಂದ ಚಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಚಾಲಕನಿಗೆ ಪತ್ನಿ ಹಾಗೂ ನಾಲ್ಕು ಜನ ಗಂಡು ಮಕ್ಕಳು ಇದ್ದಾರೆ. ನಮ್ಮ ಪತಿಯನ್ನು ಒತ್ತಾಯಪೂರ್ವಕವಾಗಿ ಡ್ಯೂಟಿಗೆ ಕಳಿಸಿದ್ದರಿಂದ ಇವತ್ತು ನಾವು ಅವರನ್ನು ಕಳೆದುಕೊಳ್ಳುವಂತಾಗಿದೆ ಎಂದು ಮೃತ ಚಾಲಕನ ಪತ್ನಿ ಸಹಿರಾಬಾನು ಕಣ್ಣೀರು ಸುರಿಸಿದರು.

    ಶಾಸಕ, ಡಿಸಿ, ಎಸ್ಪಿ ಭೇಟಿ
    ಕರ್ತವ್ಯದಲ್ಲಿ ಇದ್ದಾಗಲೇ ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ಚಾಲಕ ಸಾವನ್ನಪ್ಪಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲಿಸಿದರು. ಚಾಲಕ ದಾಖಲಾಗಿದ್ದ ಆಸ್ಪತ್ರೆಗೆ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಭೇಟಿ ನೀಡಿದರು. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸಂಜೆ ಜಮಖಂಡಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ. ರಾಜೇಂದ್ರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

    ಬಳಿಕ ಮಾತನಾಡಿದ ಶಾಸಕ ಆನಂದ ನ್ಯಾಮಗೌಡ, ಸಾರಿಗೆ ನೌಕರರು ಹತ್ತು ದಿನಗಳಿಂದ ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಇದರಿಂದ ಇವತ್ತು ಕರ್ತವ್ಯದಲ್ಲಿ ಇದ್ದ ಚಾಲಕ ನಬಿರಸೂಲ್ ಸಾವನ್ನಪ್ಪುವ ದುರ್ಘಟನೆ ನಡೆದಿದೆ. ಇದಲ್ಲದೇ ಈಗಾಗಲೇ ಮೂವರು ನೌಕರರು ಆತ್ಮಹತ್ಯೆಯನ್ನು ಸಹ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಇದೆ. ಹೀಗಾಗಿ ಈ ಸಾವುಗಳಿಗೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ಕೂಡಲೇ ಸರ್ಕಾರ ಮುಷ್ಕರ ನಿರತ ನೌಕರರ ಮುಖಂಡರ ಜೊತೆ ಚರ್ಚಿಸಿ, ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಇಂತ ಮತ್ತಷ್ಟು ಘಟನೆಗಳು ನಡೆಯಬಹುದು. ಹೀಗಾಗಿ ಸರ್ಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

    ಮರ್ಡರ್ ಕೇಸ್ ದಾಖಲು
    ಇನ್ನು ಕಲ್ಲೇಟಿನಿಂದ ಚಾಲಕ ಸಾವನ್ನಪ್ಪಿರುವ ಕಾರಣದಿಂದ ಚಾಲಕನ ಕುಟುಂಬದವರು ಇದನ್ನು ಕೊಲೆ ಎಂದು ಪ್ರಕರಣ ದಾಖಲಿಸಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡು ಈಗಾಗಲೇ ಪೊಲೀಸರು ತನಿಖೆಯನ್ನು ಸಹ ಕೈಗೊಂಡಿದ್ದು, ಆದಷ್ಟು ಶೀಘ್ರವೇ ಆರೋಪಿಯನ್ನು ಪತ್ತೆ ಮಾಡಲಾಗುವುದು ಎಂದು ಎಸ್ಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.

    ಅಧಿಕಾರಿಗಳು ದಿನಾಲು ಪದೇ ಪದೇ ಕರ್ತವ್ಯಕ್ಕೆ ಹಾಜರಾಗುವಂತೆ ನಮ್ಮ ಮನೆಯವರಿಗೆ ಅಧಿಕಾರಿಗಳು ಕರೆ ಮಾಡುತ್ತಿದ್ದರು. ಮನೆಗೂ ಬಂದು ಒತ್ತಾಯ ಮಾಡುತ್ತಿದ್ದರು. ಊಟ ಮಾಡಲು ಸಹ ಬಿಡದೇ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ ಹಾಕುತ್ತಿದ್ದರು. ಇವಾಗ ನೋಡಿ ಇಂತಹ ಗತಿ ಬಂದಿದೆ.
    ಶಹಿರಾಬಾನು ಅವಟಿ ಮೃತ ಚಾಲಕನ ಪತ್ನಿ

    ಸರ್ಕಾರ ಸಾರಿಗೆ ನೌಕರರ ಮುಷ್ಕರವನ್ನು ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಇಂದು ಕರ್ತವ್ಯದಲ್ಲಿ ಇದ್ದಾಗ ಚಾಲಕ ಕಲ್ಲೇಟಿಗೆ ಬಲಿಯಾಗಿದ್ದಾನೆ. ಇದಕ್ಕೆ ಸರ್ಕಾರವೇ ಹೊಣೆ. ಸರ್ಕಾರ ಕುಟುಂಬಕ್ಕೆ ಪರಿಹಾರ ಕೊಡಬಹುದು. ಆದರೆ, ಜೀವ ತಂದುಕೊಡಲು ಆಗುತ್ತಾ?
    ಆನಂದ ನ್ಯಾಮಗೌಡ ಶಾಸಕರು, ಜಮಖಂಡಿ.

    ಚಾಲಕನನ್ನು ಗುರಿಯಾಗಿಟ್ಟುಕೊಂಡು ಈ ಕೃತ್ಯ ಎಸೆಯಲಾಗಿದೆ. ಕರ್ತವ್ಯಕ್ಕೆ ತೆರಳುವವರಲ್ಲಿ ಆತಂಕ, ಭಯ ಸೃಷ್ಟಿಸುವ ಉದ್ದೇಶ ಇದರ ಹಿಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಲ್ಲು ಎಸೆತದಲ್ಲಿ ಎಷ್ಟು ಜನರು ಇದ್ದರು ಅವರು ಯಾರು ಎಂದು ಪತ್ತೆ ಮಾಡಲು ಒಂದು ವಿಶೇಷ ತಂಡ ರಚಿಸಿದ್ದೇವೆ. ಆದಷ್ಟು ಬೇಗ ಆರೋಪಿಗನ್ನು ಪತ್ತೆ ಮಾಡುತ್ತೇವೆ. ಇದು ಸಾರ್ವಜನಿಕರಿಂದ ಆಗಿರುವ ಕೃತ್ಯವಲ್ಲ.
    ಲೋಕೇಶ್ ಜಗಲಾಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಗಲಕೋಟೆ

    
    
    ದುಷ್ಕರ್ಮಿಗಳ ಕಲ್ಲೇಟಿಗೆ ಕರ್ತವ್ಯನಿರತ ಚಾಲಕ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts