More

    ಕ್ರೀಡಾಂಗಣ ಅಭಿವೃದ್ಧಿಗೆ ವಿಶೇಷ ಒತ್ತು

    ಬಾಗಲಕೋಟೆ: ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಕ್ರೀಡಾಂಗಣದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ಅಲ್ಲದೆ, ಶಾಸಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ 2013-14 ರಿಂದ ಇಲ್ಲಿವರೆಗೆ ಒಟ್ಟು 22 ಕೋಟಿ ರೂ. ಬಾಕಿ ಉಳಿದುಕೊಂಡಿದೆ. ಸಂಪೂರ್ಣ ವಿನಿಯೋಗಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನ ಉಳಿಕೆಯಾಗಿರುವುದು ಬೇಸರ ತಂದಿದೆ. ಈ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

    ಇನ್ನು ರಾಜ್ಯದಲ್ಲಿ ಭೂ ಸೇನಾ ನಿಗಮ (ಲ್ಯಾಂಡ್ ಆರ್ಮಿ)ಗೆ ನೀಡಿದ ಯಾವುದೇ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ನಿಗದಿತ ಸಮಯಕ್ಕೆ ಪೂರ್ಣಗೊಳಿಸಿಲ್ಲ. ಕ್ರೀಡಾ ಇಲಾಖೆಯ ಹಲವಾರು ಕಾಮಗಾರಿಗಳಿಗೂ ಅವರಿಂದ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗಮನಕ್ಕೆ ತರಲಾಗುವುದು. ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಲ್ಯಾಡ್ ಆರ್ಮಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಅಧಿಕಾರಿಗಳೊಂದಿಗೆ ಸಭೆ
    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಧ್ಯಾಹ್ನ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವ ನಾರಾಯಣಗೌಡ, ಜಿಲ್ಲೆಯಲ್ಲಿ ಲ್ಯಾಂಡ್ ಆರ್ಮಿಗೆ ನೀಡಿದ ಕಾಮಗಾರಿಗಳು ಯಾವುದು, ಯಾವ ಕೆಲಸಗಳು ಆಗಿಲ್ಲ ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕು. ಈಗಾಗಲೇ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡಲಾದ ಅನುದಾನ ಖರ್ಚಾಗದೆ ಉಳಿದರೆ ಮುಂದಿನ ಯೋಜನೆಗಳಿಗೆ ಅನುದಾನ ತರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬಾಕಿ ಉಳಿದ ಅನುದಾನದಲ್ಲಿ ಕ್ರಿಯಾ ಯೋಜನೆ ರೂಪಿಸಬೇಕು. ಜಿಲ್ಲೆಯಲ್ಲಿ ಬಾಕಿ ಉಳಿದ ಅನುದಾನ ಸಂಪೂರ್ಣವಾಗಿ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರಿಗೆ ಸೂಚನೆ ನೀಡಿದರು.

    ಸರ್ಕಾರದ ಏಜೆನ್ಸಿಯಾಗಿರುವ ಲ್ಯಾಂಡ್ ಆರ್ಮಿಗೆ ಯಾವುದೇ ಕಾಮಗಾರಿ ನೀಡಬಾರದು. ಲೋಕೋಪಯೋಗಿ ಇಲಾಖೆಗೆ ಕಾಮಗಾರಿ ನೀಡಬೇಕು. ಅನುದಾನ ಉಳಿಕೆಯಾದಲ್ಲಿ ಅಂಗನವಾಡಿ ಹಾಗೂ ಶಾಲಾ ಅಭಿವೃದ್ಧಿಗೆ ಬಳಸಿಕೊಳ್ಳಲು ತಿಳಿಸಿದರು.

    ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಮಾತನಾಡಿ, ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಕ್ರೀಡಾಂಗಣ ರೂಪುಗೊಂಡಿಲ್ಲ. ಅವುಗಳ ಬಗ್ಗೆ ಗಮನ ಹರಿಸಬೇಕು ಎಂದರು. ಇದಕ್ಕೆ ಧ್ವನಿ ಗೂಡಿಸಿದ ಸಂಸದ ಪಿ.ಸಿ.ಗದ್ದಿಗೌಡರ, ಬಾದಾಮಿ ತಾಲೂಕಿನಲ್ಲಿ ಕ್ರೀಡಾಂಗಣದ ಕೊರತೆ ಇದ್ದು, ಬೇಗೆ ಅನುಷ್ಠಾನಕ್ಕೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎ.ವೈ.ಕುಂದರಗಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುದಾನಡಿ ಜಿಲ್ಲಾ ಕ್ರೀಡಾಂಗಣದ ಈಜುಕೊಳದ ಆಧುನೀಕರಣ, ಆಫೀಸರ್ಸ್‌ ಕ್ಲಬ್ ನವೀಕರಣ, ಜಿಲ್ಲಾ ಕ್ರೀಡಾ ವಸತಿ ನಿಲಯ ದುರಸ್ತಿ, ಒಳಾಂಗಣ ಕ್ರೀಡಾಂಗಣ ಕುಸ್ತಿಹಾಲ್ ಸಿಟ್ಟಿಂಗ್ ಬೆಂಚ್ ಅಳವಡಿಸುವ ಕಾಮಗಾರಿ, ಶೌಚಗೃಹಗಳಿಗೆ ಟ್ರಸ್ಟ್ ಹಾಗೂ ಶೀಟ್ ಅಳವಡಿಕೆ ಸೇರಿ ಒಟ್ಟು 236.74 ಕೋಟಿ ರೂ. ಕಾಮಗಾರಿ ಕೈಗೊಂಡಿದ್ದು, ಅವುಗಳು ಪ್ರಗತಿಯಲ್ಲಿವೆ. ಜಿಲ್ಲಾ ಪಂಚಾಯಿತಿ ವಲಯ ಕ್ರೀಡಾಂಗಣ ನಿರ್ವಹಣೆ, ಕಾಮಗಾರಿಗಳಡಿ ಜಿಲ್ಲಾ ಕ್ರೀಡಾಂಗಣದಲ್ಲಿ ಪೆವಿಲಿಯನ್ ಬ್ಲಾಕ್ ದುರಸ್ತಿ, ವೀಕ್ಷಕರ ಗ್ಯಾಲರಿ ಸುಣ್ಣ-ಬಣ್ಣ, ವೀಕ್ಷಕರ ಗ್ಯಾಲರಿ ನಿಮಾಣಕ್ಕೆ 47 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಜಿಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    193 ಕಾಮಗಾರಿಗಳು ಬಾಕಿ
    ಬಾಕಿ ಉಳಿದ ಶಾಸಕರ ಪ್ರದೇಶಾಭಿವೃದ್ಧಿ ಅನುದಾನವನ್ನು ಗಾಂಧಿ ಸಾಕ್ಷಿ ತಂತ್ರಾಂಶದಲ್ಲಿ ದಾಖಲು ಮಾಡಲು ತಡವಾಗಿದ್ದು, ಬಾಕಿ ಉಳಿದ ಅನುದಾನ ಖರ್ಚಿಗೆ ಕ್ರಮವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ 2013-14 ರಿಂದ 2020-21 ವರೆಗೆ ಪಿಆರ್.ಇಡಿ, ಕೆ.ಆರ್.ಐಡಿಎಲ್, ನಿರ್ಮಿತಿ ಕೇಂದ್ರ, ಪಿಡಬ್ಲುೃಡಿ ಸೇರಿ ಬಾಗಲಕೋಟೆ ಉಪ ವಿಭಾಗದಲ್ಲಿ ಒಟ್ಟು 277 ಕಾಮಗಾರಿಗಳನ್ನು ಕೈಗೊಂಡಿದ್ದು, 190 ಪ್ರಗತಿಯಲ್ಲಿದ್ದು, 87 ಮಾತ್ರ ಬಾಕಿ ಉಳಿದಿವೆ. ಜಮಖಂಡಿ ಉಪವಿಭಾಗದಲ್ಲಿ ಒಟ್ಟು 461 ಕಾಮಗಾರಿಗಳ ಪೈಕಿ 355 ಪ್ರತಿಯಲ್ಲಿದ್ದು, 106 ಬಾಕಿ ಉಳಿದಿದ್ದು, ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದರು.



    ಕ್ರೀಡಾಂಗಣ ಅಭಿವೃದ್ಧಿಗೆ ವಿಶೇಷ ಒತ್ತು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts