More

    ತಾಕತ್ತಿದ್ದರೆ ತಮ್ಮೆಲ್ಲ ಕಾರ್ಖಾನೆ ರೈತರಿಗೆ ಬಿಟ್ಟುಕೊಡಲಿ

    ಬಾಗಲಕೋಟೆ: ನಿಮಗೆ ತಾಕತ್ತಿದ್ದರೆ ನಿಮ್ಮ ಎಲ್ಲ ಸಕ್ಕರೆ ಕಾರ್ಖಾನೆಗಳನ್ನು ರೈತರಿಗೆ ಬಿಟ್ಟು ಕೊಡಲು ಸಿದ್ಧರಿದ್ದೀರಾ? ನೀವು ಕಾರ್ಖಾನೆ ಬಿಟ್ಟುಕೊಟ್ಟರೆ ಅದೇ ಕ್ಷಣ ನಾನು ಸಹ ನನ್ನ ಸಕ್ಕರೆ ಕಾರ್ಖಾನೆ ರೈತರಿಗೆ ತ್ಯಾಗ ಮಾಡಲು ಸಿದ್ಧ ಎಂದು ಪರಿಷತ್ ವಿಪಕ್ಷ ನಾಯಕ, ಬೀಳಗಿ ಸಕ್ಕರೆ ಕಾರ್ಖಾನೆ ಮಾಲೀಕ ಎಸ್.ಆರ್.ಪಾಟೀಲ ಎದುರಾಳಿಗಳಿಗೆ ನೇರವಾಗಿ ಸವಾಲು ಎಸೆದರು.

    ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಬಾಪೂಜಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎದುರಾಳಿಗಳ ವಿರುದ್ಧ ಗಟ್ಟಿಧ್ವನಿಯಲ್ಲಿ ಗುಡುಗಿದರು.

    ಎಸ್.ಆರ್.ಪಾಟೀಲ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆಲ್ಲಿಸಿದ ಪಿಕೆಪಿಎಸ್ ಮತದಾರರಿಗೆ ಹಾಗೂ ಬೀಳಗಿ ಸಕ್ಕರೆ ವಿರುದ್ಧ ರಾಜಕೀಯ ಷಡ್ಯಂತ್ರದಿಂದ ನಡೆಯಲಿದ್ದ ಸತ್ಯಾಗ್ರಹವನ್ನು ವಿಫಲಗೊಳಿಸಿ ಕಾರ್ಖಾನೆ ಕಬ್ಬು ಪೂರೈಕೆದಾರರ ಸಂಘದ ಮುಖಂಡರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಎಸ್.ಆರ್.ಪಾಟೀಲ ಈ ಸವಾಲು ಎಸೆದರು.

    ನಾನು ಬಾಡಗಂಡಿಯಲ್ಲಿ ರೈತರಿಗಾಗಿ ಸಕ್ಕರೆ ಕಾರ್ಖಾನೆ ಕಟ್ಟಿದ್ದೇನೆ. ಅದನ್ನು ರೈತರಿಗಾಗಿ ತ್ಯಾಗ ಮಾಡಲು ಸಿದ್ಧನಿದ್ದೇನೆ. ಅದಕ್ಕೂ ಮೊದಲು ಅವರು ತಮ್ಮೆಲ್ಲ ಕಾರ್ಖಾನೆ ಬಿಟ್ಟುಕೊಡಬೇಕು ಎಂದು ತಮ್ಮ ಆ ಎದುರಾಳಿ ಹೆಸರು ಉಚ್ಛರಿಸಿದೆ ಹೇಳಿದರು.

    ಸಹಕಾರ ನನ್ನ ಮೆಚ್ಚಿನ ಕ್ಷೇತ್ರ. ಸಾಮಾಜಿಕ ಸೇವೆಗೆ ಇದೊಂದು ಸುವರ್ಣ ಅವಕಾಶ. ಇದನ್ನು ಕಾಯ, ವಾಚಾ, ಮನಸಾ ನಿರ್ವಹಿಸುತ್ತ ಬಂದಿದ್ದೇನೆ. ಸಹಕಾರಿ ಕ್ಷೇತ್ರದಲ್ಲಿ ನನ್ನ ಪ್ರಾಮಾಣಿಕ ಸೇವೆ ಗುರುತಿಸಿ ಅವರದ್ದೆ ಸರ್ಕಾರ ನನಗೆ ಸಹಕಾರಿ ರತ್ನ ಪ್ರಶಸ್ತಿ ಕೊಟ್ಟಿದೆ. ಆದರೆ, ಸಮೀಪದಲ್ಲಿ ಇರುವವರಿಗೆ ಅದು ಅರ್ಥವಾಗದೆ ಇರುವುದು ವಿಪರ್ಯಾಸ ಎಂದರು.

    ಮೊನ್ನೆ ನಡೆದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ನನ್ನ ಸೋಲಿಸಲು ಎದುರಾಳಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಷಡ್ಯಂತ್ರ ರೂಪಿಸಿದರು. ಆದರೆ, ನನ್ನ ಮತದಾರರ ಅದನ್ನು ವಿಫಲಗೊಳಿಸಿ ನನ್ನ ಗೆಲ್ಲಿಸಿದರು. ಚುನಾವಣೆಯಲ್ಲಿ ನನ್ನ ಸೋಲಿಸಲಾಗದ ಕುತಂತ್ರಿಗಳು ಬಳಿಕ ನಾನು ರೈತರಿಗಾಗಿ ಕಟ್ಟಿರುವ ಬೀಳಗಿ ಸಕ್ಕರೆ ಕಾರ್ಖಾನೆ ವಿರುದ್ಧ ಷಡ್ಯಂತ್ರ ರೂಪಿಸಿ, ಬಾಡಿಗೆ ಬಂಟರನ್ನು ಬಿಟ್ಟು ಕಾರ್ಖಾನೆ ವಿರುದ್ಧ ಸತ್ಯಾಗ್ರಹ ನಡೆಸಲು ಕುತಂತ್ರ ಮಾಡಿದರು. ಆದರೆ, ನನ್ನ ಕಾರ್ಖಾನೆ ಮೇಲೆ ನಿಷ್ಠೆ ಇರುವ ಕಬ್ಬು ಬೆಳೆಗಾರರು ಸೇರಿದ್ದು ನೋಡಿ ಆ ಬಾಡಿಗೆ ಬಂಟರೂ ಕಾರ್ಖಾನೆಯಿಂದ ಐದು ಕಿ.ಮೀ. ದೂರದಲ್ಲಿಯೇ ತೋಟದಲ್ಲಿ ಇದ್ದು ಅಲ್ಲಿಂದ ಜಾಗ ಖಾಲಿ ಮಾಡಿದರು. ಬೀಳಗಿ ರೈತ ಸಂಘದವರು ಸಹ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಅವರ ಕುತಂತ್ರ ಇಲ್ಲಿ ನಡೆಯಲಿಲ್ಲ ಎಂದು ಎದುರಾಳಿ ವಿರುದ್ಧ ಚಾಟಿ ಬೀಸಿದರು.

    ಹಿಂದೆ ನಿಂತು ಷಡ್ಯಂತರದ ರಾಜಕಾರಣ ಮಾಡುವುದು ಬೇಡ. ನಿಮಗೆ ಧೈರ್ಯ ಇದ್ದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ನಮ್ಮ ಕಾಂಗ್ರೆಸ್ ಪಕ್ಷ ಸಜ್ಜಾಗಿದೆ. ಅಲ್ಲಿ ಎದುರಿಸೋಣ. ಸಹಕಾರಿ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡಬೇಡಿ ಎಂದು ಹೇಳಿದರು.

    ತಮ್ಮ ಭಾಷಣದುದ್ದಕ್ಕೂ ‘ಅವರು’ ಎನ್ನುತ್ತಲೇ ಎದುರಾಳಿ ವಿರುದ್ಧ ಗುಡುಗಿದರು, ವಾಗ್ದಾಳಿ ನಡೆಸಿದರು, ಪಾಠಿ ಸವಾಲು ಎಸೆದರಾದರೂ ಅಪ್ಪಿತಪ್ಪಿ ಕೂಡ ಅವರು ಎಂದರೆ ಯಾರು? ಎಂದು ಬಾಯಿಬಿಟ್ಟು ಹೇಳಲಿಲ್ಲ.

    ಮಾಜಿ ಶಾಸಕ ಜೆ.ಟಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಜಿಪಂ ಸದಸ್ಯ ಹನುಮಂತ ಕಾಖಂಡಕಿ, ಸತ್ಯಪ್ಪ ಮೇಲ್ನಾಡ, ಎಂ.ಎನ್.ಪಾಟೀಲ, ಎಸ್.ಟಿ.ಪಾಟೀಲ, ಎಂ.ಎಲ್.ಕೆಂಪಲಿಂಗಣ್ಣವರ, ಎಲ್.ಬಿ.ಕುರ್ತಕೋಟಿ, ಜಿ.ಆರ್.ಪಾಟೀಲ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts