More

    ಸಿದ್ಧರಾಮೇಶ್ವರ ತತ್ವಾದರ್ಶ ಪಾಲಿಸಿ

    ಬಾಗಲಕೋಟೆ: ಹಠ ಯೋಗಿಯಾಗಿ ಹುಟ್ಟಿ ಕರ್ಮ ಯೋಗಿಯಾಗಿ ಬೆಳೆದ ಶಿವಯೋಗಿ ಸಿದ್ಧರಾಮೇಶ್ವರರ ತತ್ವ, ಸಿದ್ಧಾಂತ ಹಾಗೂ ಸಾಮಾಜಿಕ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಹೇಳಿದರು.

    ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣರು ಒಂದೇ ಸಮಾಜಕ್ಕೆ ಸೀಮಿತರಾಗಿರದೆ ಎಲ್ಲೆಡೆ ಸಮಾನತೆ ಸಾರಿದವರು. ಅಂತಹ ಶರಣರು ಜೀವಿಸಿದ ನಾಡಿನಲ್ಲಿ ನಾವೆಲ್ಲ ಆದರ್ಶ ಜೀವನ ನಡೆಸಬೇಕು ಎಂದರು.

    ಡಾ.ಎಸ್.ಡಿ.ಕೆಂಗಲಗುತ್ತಿ ಉಪನ್ಯಾಸ ನೀಡಿ, ಶಿವಯೋಗಿ ಸಿದ್ಧರಾಮೇಶ್ವರರು ಬಸವಣ್ಣ, ಅಲ್ಲಮಪ್ರಭುಗಳು ಬಿಂಬಿಸಿದ ಆದರ್ಶ ಸಮಾಜದ ಕನಸು ನನಸಾಗಿಸುವ ನಿಟ್ಟಿನಲ್ಲಿ ಮುನ್ನಡೆದವರಾಗಿದ್ದಾರೆ. ಭಕ್ತಿಗೆ ಬಸವಣ್ಣ, ವೈರಾಗ್ಯಕ್ಕೆ ಅಲ್ಲಮ ಹೇಗೋ ಕಾಯಕಕ್ಕೆ ಸಿದ್ಧರಾಮೇಶ್ವರ. ಲೋಕದಲ್ಲಿ ಯಾರು ತಮಗಾಗಿ ಬದುಕುತ್ತಾರೋ ಅಂತಹವರನ್ನು ಮರೆಯುತ್ತೇವೆ. ಆದರೆ, ಇನ್ನೊಬ್ಬರಿಗಾಗಿ ಬದುಕುವರನ್ನು ಎಂದು ಮರೆಯಲು ಸಾಧ್ಯವಿಲ್ಲ ಎಂದರು.

    ಚಿಕ್ಕಂದಿನಿಂದಲೂ ಅಧಾತ್ಮದಲ್ಲಿ ಅಚಲ ನಂಬಿಕೆ, ಹಿರಿಯ ಶರಣರ ವಚನಗಳನ್ನು ತ್ರಿಪದಿಗಳ ಗುಂಗಿನಲ್ಲಿ ಅವುಗಳತ್ತ ಒಲವು ಬೆಳೆಸಿಕೊಂಡರು. ಲೋಕ ಕಲ್ಯಾಣಾಕ್ಕಾಗಿ 1990 ವಚನಗಳನ್ನು ರಚಿಸಿದ್ದಾರೆ. ಸಮಾಜ ಸುಧಾರಣೆಗೆ ಬೆಂಬಲವಾಗಿ ನಿಂತು ಕಾಯಕ ಮಾಡಿದ್ದಾರೆ. ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದಾರೆ ಎಂದು ಬಣ್ಣಿಸಿದರು.

    ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಸಮಾಜದ ಮುಖಂಡ ಅಶೋಕ ಲಿಂಬಾವಳಿ, ಸಿದ್ದರಾಮ ಪಾತ್ರೋಟ, ತಿಮ್ಮಣ್ಣ ಬಂಡಿವಡ್ಡರ, ಲಕ್ಷ್ಮಣ ವಡ್ಡರ, ಮಲ್ಲಪ್ಪ ಪಾತ್ರೋಟ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಶಿರೂರ ಸ್ವಾಗತಿಸಿ, ವಂದಿಸಿದರು. ಜಾಸ್ಮಿನ್ ಕಿಲ್ಲೆದಾರ ನಿರೂಪಿಸಿದರು.

    ಶಿಕ್ಷಣದಿಂದ ಮಾತ್ರ ಸಮಾಜ ಮುಂಚೂಣಿಗೆ ಬರಲು ಸಾಧ್ಯ. ಯಾವುದೇ ವೃತ್ತಿ ಇರಲಿ ಪಾಲಕರು, ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು.
    – ಕೆ.ರಾಜೇಂದ್ರ ಜಿಲ್ಲಾಧಿಕಾರಿ

    ಅದ್ದೂರಿ ಮೆರವಣಿಗೆ
    ಜಿಲ್ಲಾಡಳಿತ ಭವನದ ಆವರಣದಿಂದ ಆರಂಭವಾದ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರದ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಚಾಲನೆ ನೀಡಿದರು. ನಂತರ ನವನಗರದ ಬಸ್ ನಿಲ್ದಾಣ, ಎಲ್‌ಐಸಿ ವೃತ್ತದ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ತಲುಪಿ ಮುಕ್ತಾಯಗೊಂಡಿತು. ಝಾಂಜ್ ಪಥಕ್, ಡೊಳ್ಳು ಕುಣಿತ ಹಾಗೂ ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಡೊಳ್ಳು ಬಾರಿಸಿದ್ದು ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts