More

    ಯಾರೇ ವಿರೋಧಿಸಿದರೂ, ಹೋರಾಟ ಮಾಡಿದರೂ ಕಾರ್ಯಾಚರಣೆ ನಿಲ್ಲುವುದಿಲ್ಲ

    ಬಾಗಲಕೋಟೆ: ಅಧಿಕಾರ ಶಾಶ್ವತವಲ್ಲ ಎನ್ನುವುದು ನನಗೆ ಗೊತ್ತಿದೆ. ಅನಧಿಕೃತ ಕಟ್ಟಡ, ಶೆಡ್ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ಯಾರೇ ವಿರೋಧಿಸಿದರೂ, ಹೋರಾಟ ಮಾಡಿದರೂ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಸ್ಪಷ್ಟಪಡಿಸಿದರು.

    ನಾನು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ತೆರವು ಕಾರ್ಯಚರಣೆ ಮಾಡಿಲ್ಲ. ಕೋವಿಡ್ ಸೋಂಕು ಇದ್ದಾಗ ಅದರ ನಿಯಂತ್ರಣಕ್ಕೆ ಶ್ರಮಿಸಿದ್ದೇವೆ. ಇದೀಗ ಕೋವಿಡ್ ಮುಗಿದಿದೆ. ಹೀಗಾಗಿ ನಗರದ ಸೌಂದರ್ಯಕ್ಕೆ ಒತ್ತು ನೀಡಲಾಗುತ್ತಿದೆ. ಅದಕ್ಕೆ ಅನಧಿಕೃತ ಕಟ್ಟಡ, ಶೆಡ್ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ನಗರದ ಬಿಟಿಡಿಎ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಎಚ್.ವೈ.ಮೇಟಿ ಅಧಿಕಾರದಲ್ಲಿ ಇದ್ದಾಗ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಗೆ ಬಿಟಿಡಿಎದಿಂದ ಸರಬರಾಜಾಗುತ್ತಿದ್ದ ನೀರು ಕಟ್ ಮಾಡಿದರು. ಕಟ್ಟಡ ಒಡೆಯುವ ಪ್ರಯತ್ನ ಮಾಡಿದರು. ಬಿವಿವಿ ಸಂಘದ ಮಳಿಗೆಗಳನ್ನು ಕೆಡವಲು ಮುಂದಾಗಿದ್ದರು. ಅವರ ಅವಧಿಯಲ್ಲಿ ನಗರದ ಹೃದಯ ಭಾಗದಲ್ಲಿರುವ ಕಾಟನ್ ಮಾರ್ಕೆಟ್ ಬಂದ್ ಮಾಡಿದರು ಇದರ ಹಿಂದೆ ದ್ವೇಷದ ರಾಜಕಾರಣ ಇರಲಿಲ್ಲವೆ? ಎಂದು ಪ್ರಶ್ನೆ ಮಾಡಿದರು.

    ಬಿಟಿಡಿಎ ವ್ಯಾಪ್ತಿಯಲ್ಲಿದ್ದ ನವನಗರ ಯೂನಿಟ್-1ನ್ನು ನಗರಸಭೆಗೆ ಹಸ್ತಾಂತರ ಮಾಡಲಾಯಿತು. ಈ ವೇಳೆ 134 ಕೋಟಿ ರೂ. ತಂದಿದ್ದೇನೆ ಎಂದು ಮಾಜಿ ಸಚಿವರು ಹೇಳಿದ್ದಾರೆ. ಆದರೆ, ನಗರಸಭೆಯಲ್ಲಿ ಒಬ್ಬ ಇಂಜಿನಿಯರ್ ಮಾತ್ರ ಇದ್ದಾರೆ. ಅವರಿಂದ ನವನಗರದ 64 ಸೆಕ್ಟರ್ ನಿರ್ವಹಣೆ ಮಾಡಲು ಸಾಧ್ಯವಿತ್ತಾ? ನೀವು ಯಾವ ಕಾರಣಕ್ಕೆ 134 ಕೋಟಿ ರೂ. ಹಸ್ತಾಂತರ ಮಾಡಿದ್ದೀರಿ ಎನ್ನುವುದು ಬಿಡಿಸಿ ಹೇಳಬೇಕಿಲ್ಲ. ಅದು ನಿಮ್ಮ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮನೆಯಿಂದ ತಂದ ಹಣವಲ್ಲ ಎಂದು ಚುಚ್ಚಿದರು.

    ನವನಗರ ಯೂನಿಟ್-2 ಅಭಿವೃದ್ಧಿಗಾಗಿ 2009-13ರ ವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ 550 ಕೋಟಿ ರೂ. ಮಂಜೂರು ಆಗಿತ್ತು. ಆ ಅನುದಾನದಲ್ಲಿ ಯೂನಿಟ್‌ನಲ್ಲಿ ಕುಡಿಯುವ ನೀರು, ವಿದ್ಯುತ್, ಒಳ ಚರಂಡಿ, ರಸ್ತೆ ನಿರ್ಮಾಣವಾಗಿದೆ. ಈ ಕಾಮಗಾರಿ ನನ್ನಿಂದ ಆಗಿದೆ ಅಂತ ನಾನು ಹೇಳಿಕೊಂಡಿಲ್ಲ. 5 ವರ್ಷ ಶಾಸಕರಾಗಿ, ಕೆಲವು ತಿಂಗಳು ಬಿಟಿಡಿಎ ಅಧ್ಯಕ್ಷರಾಗಿ ಇದ್ದರೂ ಒಂದು ಹಕ್ಕು ಪತ್ರವನ್ನು ಯೂನಿಟ್ ವಿಭಾಗದಲ್ಲಿ ನೀಡಲಿಲ್ಲ. ನಾನು ಅಧಿಕಾರ ವಹಿಸಿಕೊಂಡ ಬಳಿಕ 11 ತಿಂಗಳಿನಲ್ಲಿ 1200 ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರ ಮಾಹಿತಿ ನೀಡಿದ ಶಾಸಕ ವೀರಣ್ಣ ಚರಂತಿಮಠ, ಪ್ರತಿ ಸಾರಿ ಅಲ್ಪಮತಗಳಿಂದ ಗೆಲ್ಲುವ ಎಚ್.ವೈ.ಮೇಟಿ ಅಧಿಕಾರದಲ್ಲಿ ಇದ್ದಾಗ ದೊಡ್ಡ ದೊಡ್ಡ ಅನಾಹುತ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

    ಬಾಗಲಕೋಟೆ ಹಿನ್ನೀರು ಪ್ರದೇಶದಲ್ಲಿ ಸಸಿ ನೆಟ್ಟು ನಗರ ಸೌಂದರ್ಯಕ್ಕೆ ಒಂದು ಕೋಟಿ ರೂ. ಅಧಿಕ ಅನುದಾನ ನನ್ನ ಅವಧಿಯಲ್ಲಿ ಬಂದಿದೆ ಎಂದು ಎಲ್ಲಿಯೂ ಹೇಳಿಲ್ಲ. ಅನುದಾನ ಸದ್ಬಳಕೆಯಾಗಬೇಕು. ನಗರದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ಗುಣಮುಟ್ಟ ಕಾಮಗಾರಿ ನಡೆಯಬೇಕು ಎನ್ನುವ ಉದ್ದೇಶದಿಂದ ತೆರವು ಕಾರ್ಯಚರಣೆ ನಡೆಯುತ್ತಿದೆ. ಇಷ್ಟಕ್ಕೂ ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಡ, ಶೆಡ್‌ಗಳ ಮಾಲೀಕರು ಈಗಾಗಲೇ ಪರಿಹಾರ ಪಡೆದು ನವನಗರದದಲ್ಲಿ ನಿವೇಶನ ಹೊಂದಿದ್ದಾರೆ. ಸರ್ಕಾರಕ್ಕೆ ಸೇರಿದ ಜಾಗವನ್ನು ಸಂರಕ್ಷಣೆ ಮಾಡುತ್ತಿದ್ದೇವೆ ಅಷ್ಟೇ ಎಂದರು.

    ಇನ್ನು ನಿವೇಶನ, ಪರಿಹಾರ ಪಡೆಯುವ ಉದ್ದೇಶದಿಂದ ಬಾಗಲಕೋಟೆ ನಗರಕ್ಕೆ ಎಲ್ಲಿಂದಲೋ ಜನ ಬಂದು ಹಿನ್ನೀರು ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಅನಧಿಕೃತ ಶೆಡ್‌ಗಳ ನಿರ್ಮಾಣದಿಂದ ಸ್ಲಂ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕು. ಜನಪ್ರತಿನಿಧಿಗಳು ಸ್ಲಂ ಬೆಳೆಸುವಲ್ಲಿ ಪ್ರೋತ್ಸಾಹ ನೀಡಬಾರದು. ಅದು ನಮ್ಮ ಡ್ಯೂಟಿ ಅಲ್ಲ ಎಂದು ಮಾಜಿ ಸಚಿವ ಎಚ್.ವೈ.ಮೇಟಿ ಆರೋಪಕ್ಕೆ ಶಾಸಕ ಚರಂತಿಮಠ ಪ್ರತಿ ವಿಷಯವನ್ನು ಪ್ರಸ್ತಾಪ ಮಾಡಿ ತಿರುಗೇಟು ನೀಡಿದರು.

    ಬಿಟಿಡಿಎ ಸದಸ್ಯರಾದ ಮೋಹನ ನಾಡಗೌಡ, ಕುಮಾರ ಯಳ್ಳಿಗುತ್ತಿ, ಶಿವಾನಂದ ಟವಳಿ, ಬಿಟಿಡಿಎ ಮಾಜಿ ಅಧ್ಯಕ್ಷರಾದ ಜಿ.ಎನ್.ಪಾಟೀಲ, ಸಿ.ವಿ.ಕೋಟಿ, ಕಾನೂನು ಸಲಹೆಗಾರ ಕೆ.ಎಸ್.ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಒತ್ತುವರಿ ತೆರವುಗೊಳಿಸಿ ಬಡವರಿಗೆ ತೊಂದರೆ ಕೊಡಬೇಕು ಎನ್ನುವ ಉದ್ದೇಶವಿಲ್ಲ. ಈಗಾಗಲೇ ನವಗರದಲ್ಲಿ ನಿವೇಶನ ಪಡೆದು ಹಿನ್ನೀರು ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಶೆಡ್, ಕಟ್ಟಡ ತೆರವುಗೊಳಿಸಲಾಗುತ್ತಿದೆ. ಇಂತಹ ವಿಷಯದಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರು ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಜಿಲ್ಲೆಯಲ್ಲಿನ ಅನಧಿಕೃತ ಕಟ್ಟಡಗಳಿಗೆ ಕಡಿವಾಣ ಹಾಕಬೇಕು.
    ವೀರಣ್ಣ ಚರಂತಿಮಠ ಬಿಟಿಡಿಎ ಅಧ್ಯಕ್ಷ, ಶಾಸಕ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts