More

    ಕನ್ನಡದ ಆಸ್ತಿ ಸಂತಕವಿ ಸರ್ವಜ್ಞ

    ಬಾಗಲಕೋಟೆ: ಸರ್ವಜ್ಞ ಕನ್ನಡ ಸಾಹಿತ್ಯದಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ತ್ರಿಪದಿಗಳ ಮೂಲಕ ಸರ್ವರಿಗೂ ಜೀವನ ಮಾರ್ಗ ಹಾಗೂ ನೀತಿಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದು ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಹೇಳಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

    ಸಮಾಜದ ಅಂಕುಡೊಂಕುಗಳನ್ನು ತ್ರಿಪದಿಗಳ ಮೂಲಕ ತಿದ್ದಿ ಕನ್ನಡದ ಆಸ್ತಿಯಾಗಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ರಚಿಸದ ತ್ರಿಪದಿಗಳಿಲ್ಲ ಎಂಬ ಗಾದೆ ಪ್ರಚಲಿತವಾಗಿದೆ ಎಂದರು.

    ಸರ್ವಜ್ಞ ರಚಿಸಿದ್ದು 7070 ತ್ರಿಪದಿಗಳು. ಆದರೆ, ನಮಗೆ ದೊರೆತಿದ್ದು, ಕೇವಲ 1000 ತ್ರಿಪದಿಗಳು. ಇಂತಹ ಮಹಾನ್ ಕವಿಯ ಜಯಂತಿ ಆಚರಣೆ ಮೂಲಕ ಅವರ ತತ್ವದಾರ್ಶ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸರ್ವಜ್ಞನ ತ್ರಿಪದಿಗಳ ಮೇಲೆ ಸ್ಪರ್ಧೆ ಏರ್ಪಡಿಸಬೇಕು ಎಂದು ತಿಳಿಸಿದರು.

    ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಎಸ್.ಡಿ .ಕೆಂಗಲಗುತ್ತಿ ಉಪನ್ಯಾಸ ನೀಡಿ, ಕನ್ನಡ ಸಾಹಿತ್ಯದ ಜನ ಮನ ಧ್ವನಿ ಎಂದರೆ ಸರ್ವಜ್ಞ. ನಮ್ಮ ದೇಶದ ಚರಿತ್ರೆ ಪುಟಗಳಲ್ಲಿ ಅನೇಕ ಮಹಾನ ಕವಿಗಳು, ದಾರ್ಶನಿಕರು ಹಾಗೂ ಸಂತರನ್ನು ನಾವು ಕಂಡಿದ್ದೇವೆ. ತನಗಾಗಿ ಕೆಲಸ ಮಾಡಿದವರನ್ನು ಲೋಕ ಮರೆಯುತ್ತದೆ. ಲೋಕದ ಉದ್ಧಾರಕ್ಕೆ ಕೆಲಸ ಮಾಡಿದವನ್ನು ಕೊಂಡಾಡುತ್ತದೆ. ಇದಕ್ಕೆ ಸರ್ವಜ್ಞನ ವಚನಗಳು ಸಾಕ್ಷಿ ಎಂದು ಬಣ್ಣಿಸಿದರು.

    ಮನುಷ್ಯನ ಜೀವನಕ್ಕೆ ಅವಶ್ಯವಾದ ಅನ್ನ ಮತ್ತು ಮಾತುಗಳ ಮಹತ್ವವನ್ನು ತಿಳಿಸಿದ್ದಾರೆ. ಅನ್ನಕ್ಕಿಂತ ಇನ್ನೊಂದು ದೇವರಿಲ್ಲ ಎಂದು ಸಾರಿ ಸಾರಿ ಹೇಳಿದ್ದಾರೆ. ತ್ರಿಕಾಲ ಜ್ಞಾನಿಯಾದ ಸಂತ ಕವಿ ಸವರ್ಜ್ಞನ ತ್ರಿಪದಿಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

    ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ, ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಜಿಪಂ ಉಪಕಾರ್ಯದರ್ಶಿ ಎ.ಜಿ. ತೋಟದ, ಎಂ.ಎನ್.ಸಂಗಮ, ಮಂಜುನಾಥ ಕುಂಬಾರ ಸೇರಿ ಸಮಾಜದ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಬಸವರಾಜ ಶಿರೂರ ಸ್ವಾಗತಿಸಿ, ವಂದಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts