More

    ಕಳ್ಳಬಟ್ಟಿ ದಂಧೆಗೆ ಕಡಿವಾಣ ಹಾಕಿ

    ಬಾಗಲಕೋಟೆ: ಕಳ್ಳಬಟ್ಟಿ ಸಾರಾಯಿ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜಿಲ್ಲೆಯಲ್ಲಿ ಕಳ್ಳಬಟ್ಟಿಗಳ ಮೇಲೆ ಕಾಲ ಕಾಲಕ್ಕೆ ದಾಳಿ ನಡೆಸಿ ಪ್ರಕರಣ ದಾಖಲಿಸಬೇಕು. ಅದರಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾಡಳಿತ ಭವನದಲ್ಲಿರುವ ಸಭಾಭವನದಲ್ಲಿ ಸೋಮವಾರ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಬಕಾರಿ ದಾಳಿಗಳ ಸಮಯದಲ್ಲಿ ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ, ಅರಣ್ಯ ಇಲಾಖೆಗಳ ಸಿಬ್ಬಂದಿ ಸಹಕಾರ ಪಡೆದುಕೊಳ್ಳಬೇಕು. ಕಳ್ಳಬಟ್ಟಿ ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದರು.

    ಕಳ್ಳಬಟ್ಟಿ ತಯಾರಿಸಲು ಉಪಯೋಗಿಸುವ ಕಚ್ಚಾ ವಸ್ತುಗಳಾದ ಬೆಲ್ಲ ಮಾರಾಟ ಮಾಡುತ್ತಿರುವ ಹೋಲ್‌ಸೆಲ್ ಮಾರಾಟಗಾರರಿಗೆ, ಸಾರಾಯಿಗೆಂದೆ ಗಡಿಗೆ ತಯಾರಿಸುವ ಕುಂಬಾರರಿಗೆ ನೋಟಿಸ್ ಜಾರಿ ಮಾಡಬೇಕು. ಕೆಲವೊಂದು ಕೆರೆಯ ದಂಡೆಯ ಮೇಲೆ ಕಳ್ಳಬಟ್ಟಿ ತಯಾರಿಸಲು ಬೆಲ್ಲದ ಪಾಕವನ್ನು ಸಂಗ್ರಹಿಸುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಮೀನುಗಾರಿಗೆ ಇಲಾಖೆಯವರು ಕೆರೆ ಗುತ್ತಿಗೆ ಕೊಟ್ಟ ಗುತ್ತಿಗೆದಾರರಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

    ಕೆರೆ ಗುತ್ತಿಗೆಯನ್ನು ನೆಪ ಮಾತ್ರಕ್ಕೆ ಪಡೆದರೆ ಸಾಲದು. ಆ ಕೆರೆಯಲ್ಲಿ ಮೀನು ಸಾಕಣೆ ಮಾಡಬೇಕು. ಇಲ್ಲವಾದರೆ ಕೆರೆಯ ದಂಡೆಯ ಪ್ರದೇಶದಲ್ಲಿ ಅಕ್ರಮ ಕಳ್ಳಬಟ್ಟಿ ಕಾರ್ಯ ನಡೆಸಲು ಅವಕಾಶ ಕೊಟ್ಟಂತಾಗುತ್ತದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೆರ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದು ಮಾಡುವುದರ ಜತೆಗೆ ಅವರ ಮೇಲೆ ಪ್ರಕರಣ ಸಹ ದಾಖಲಿಸಲು ಸೂಚಿಸಿದರು. ಕಳ್ಳಬಟ್ಟಿ ಹೆಚ್ಚಾಗಿ ಕಂಡು ಬರುವ ಪ್ರದೇಶದಲ್ಲಿ ದಾಳಿ ಹೆಚ್ಚಾಗಿ ನಡೆಸಿ ನಿಯಂತ್ರಣಕ್ಕೆ ಕ್ರವಹಿಸಬೇಕು ಎಂದು ನಿರ್ದೇಶನ ನೀಡಿದರು.

    ಅಬಕಾರಿ ಉಪ ಆಯುಕ್ತ ರಮೇಶ ಕುಮಾರ ಎಚ್. ಮಾತನಾಡಿ, ಜಿಲ್ಲೆಯ ಮುಧೋಳ ಮತ್ತು ಜಮಖಂಡಿಯಲ್ಲಿ ಕಳ್ಳಬಟ್ಟಿ ಸಾರಾಯಿ ನಿಯಂತ್ರಣಕ್ಕೆ ಬಂದಿದೆ. ಸದ್ಯ ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾ ಮತ್ತು ಹುನಗುಂದ ತಾಲೂಕಿನ ಅಮೀನಗಡ ತಾಂಡಾಗಳಲ್ಲಿ ಕಳ್ಳಬಟ್ಟಿ ತಯಾರಿಕೆ ಹೆಚ್ಚಾಗಿ ಕಂಡುಬರುತ್ತಿದೆ. ಅಮೀನಗಡ ತಾಂಡಾದ ಕೆರೆಯ ನೀರಿನಲ್ಲಿ ಅಕ್ರಮವಾಗಿ ಬೆಲ್ಲದ ಕೊಳೆಯನ್ನು ಮುಚ್ಚಿಟ್ಟು ನಂತರ ಅದರಿಂದ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ತಯಾರಿಸುವ ಕೆಲಸವಾಗುತ್ತಿದೆ. ಇದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗುವುದು. ದಾಳಿಯ ಸಮಯದಲ್ಲಿ ಸಹಕರಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ನಿರ್ದೇಶನ ನೀಡಬೇಕು ಎಂದು ತಿಳಿಸಿದರು.

    ಜಿಲ್ಲೆಯ ಬಾಗಲಕೋಟೆ ಶಹರದಲ್ಲಿ ಬೆಲ್ಲವನ್ನು ಮಾರಾಟ ಮಾಡುತ್ತಿರುವ ಹೋಲ್‌ಸೇಲ್ ವ್ಯಾಪಾರಸ್ಥರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಕಳ್ಳಬಟ್ಟಿ ಸಾರಾಯಿ ತಯಾರಿಕೆಗೆ ಪೂರಕವಾದ ಕಚ್ಚಾ ವಸ್ತು ಬೆಲ್ಲವನ್ನು ಖರೀದಿಸುವಂತಹ ಜನರ ಮಾಹಿತಿಯನ್ನು ಸಹ ಕಲೆ ಹಾಕಲಾಗುತ್ತಿದೆ. ಕುಂಬಾರಿಕೆ ನಡೆಸುತ್ತಿರುವ ವ್ಯಕ್ತಿಗಳ ಖುದ್ದಾಗಿ ಸಂಪರ್ಕಿಸಿ ಗಡಿಗೆಯ ಮೇಲೆ ಮುಚ್ಚುವ ಮುಚ್ಚಳವನ್ನು ಅಕ್ರಮ ಕಳ್ಳಬಟ್ಟಿ ಸರಾಯಿ ತಯಾರಿಸುವಂತಹ ಸಲಕರಣೆ ತಯಾರಿಸದಂತೆ ತಿಳಿವಳಿಕೆ ಹಾಗೂ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಜಿಪಂ ಸಿಇಒ ಟಿ.ಭೂಬಾಲನ್, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಕಂದಾಯ ಇಲಾಖೆಯ ಶಿರಸ್ತೆದಾರ್ ಎನ್.ವೈ.ನಾಯ್ಕಲಮಠ, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

    383 ಲೀಟರ್, 31 ವಾಹನ ವಶ
    ಜಿಲ್ಲೆಯಲ್ಲಿ ಕಳೆದ ವರ್ಷ ಜುಲೈ ಮಾಹೆಯಿಂದ 2021 ಜನವರಿ ವರೆಗೆ ಒಟ್ಟು 1114 ಅಬಕಾರಿ ದಾಳಿ ನಡೆಸಲಾಗಿ 79 ಪ್ರಕರಣ ದಾಖಲಿಸಲಾಗಿದೆ. 60 ಜನ ಆರೋಪಿಗಳನ್ನು ಬಂಧಿಸುವುದರ ಜತೆಗೆ 383 ಲೀಟರ್ ಕಳ್ಳಬಟ್ಟಿ ಸಾರಾಯಿ, 465 ಲೀಟರ್ ಬೆಲ್ಲದ ಕೊಳೆ ಹಾಗೂ ಎರಡು ಆಟೋ ಮತ್ತು 29 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ರಮೇಶ ಕುಮಾರ ಎಚ್. ಸಭೆಗೆ ಮಾಹಿತಿ ನೀಡಿದರು.

    ಜಿಲ್ಲೆಯಲ್ಲಿ ನಡೆಸುತ್ತಿರುವ ಅಬಕಾರಿ ದಾಳಿಯ ವೇಳೆಯಲ್ಲಿ ತಾಂಡಾಗಳಲ್ಲಿರುವ ನೋಂದಣಿ ಹಾಗೂ ದಾಖಲೆ ಇಲ್ಲದಂತಹ ಗೂಡ್ಸ್ ವಾಹನ ಸೇರಿ ಇತರ ವಾಹನಗಳನ್ನು ಜಪ್ತಿಗೆ ಕ್ರಮವಹಿಸಬೇಕು. ಅರಣ್ಯ ಪ್ರದೇಶದಲ್ಲಿ ಕಳ್ಳಬಟ್ಟಿ ತಯಾರಿಸುತ್ತಿರುವುದು ಕಂಡು ಬಂದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಬಕಾರಿ ಇಲಾಖೆಗೆ ಮಾಹಿತಿ ನೀಡಬೇಕು.
    ಲೋಕೇಶ ಜಗಲಾಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ



    ಕಳ್ಳಬಟ್ಟಿ ದಂಧೆಗೆ ಕಡಿವಾಣ ಹಾಕಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts