More

    19 ರಿಂದ ಪೋಲಿಯೋ ಲಸಿಕಾ ಅಭಿಯಾನ

    ಬಾಗಲಕೋಟೆ: ಜಿಲ್ಲೆಯಲ್ಲಿ ಜ.19 ರಿಂದ 22 ವರೆಗೆ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೋಲಿಯೋ ಒಂದು ಮಾರಕ ರೋಗವಾಗಿದ್ದು, ಐದು ವರ್ಷದೊಳಗಿನ ಯಾವುದೇ ಮಗು ಈ ಕಾರ್ಯಕ್ರಮದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಈ ಕುರಿತು ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲ ತರಹದ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕೇವಲ ಗುರಿ ಸಾಧನೆಗೆ ಸೀಮಿತಗೊಳಿಸದೆ ಲಸಿಕೆ ಹಾಕಿಸಿಕೊಳ್ಳುವ ಮನೋಭಾವ ಹೊಂದುವಂತೆ ಮಾಡಬೇಕು. ನಗರ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಬೇಕು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಲಸಿಕಾ ಕೇಂದ್ರಗಳಿಗೆ ಕರೆದುಕೊಂಡು ಬರಬೇಕು. ನಗರ ಪ್ರದೇಶಗಳಲ್ಲಿ, ಸ್ಲಂ ಪ್ರದೇಶಗಳಲ್ಲಿ ವಿಶೇಷ ಗಮನ ಹರಿಸಬೇಕು. ಅಲ್ಲದೆ, ಜಿಲ್ಲೆಯ ಕಬ್ಬು ಕಡೆಯುವ ಗ್ಯಾಂಗ್ ಮತ್ತು ಇಟ್ಟಂಗಿ ಬಟ್ಟಿಯಲ್ಲಿನ ಮಕ್ಕಳು ಸಹ ಲಸಿಕೆಯಿಂದ ವಂಚಿತರಾಗದಂತೆ ಕ್ರಮವಹಿಸಿಸಬೇಕು. ನರ್ಸಿಂಗ್ ವಿದ್ಯಾರ್ಥಿಗಳು, ರೋಟರಿ, ಲಯನ್ಸ್ ಕ್ಲಬ್, ಮಹಿಳಾ ಸಂಘ ಸಂಸ್ಥೆಗಳ ಸಹಕಾರ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು.

    ಜಿಪಂ ಸಿಇಒ ಗಂಗೂಬಾಯಿ ಮಾನಕರ, ವಿಶ್ವ ಆರೊಗ್ಯ ಸಂಶೋಧನಾ ಸರ್ವೇಕ್ಷಣಾಧಿಕಾರಿ ಡಾ.ಮುಕುಂದ ಗಲಗಲಿ, ಜಿಲ್ಲಾ ಶಸ ಚಿಕಿತ್ಸಕ ಪ್ರಕಾಶ ಬಿರಾದಾರ, ಡಿಡಿಪಿಐ ಎಸ್.ಎಸ್. ಬಿರಾದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ಡಾ.ವಿಜಯ ಕಂಠಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಆಯಾ ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

    ಬೂತ್ ಮಟ್ಟದ ಅಧಿಕಾರಿಗಳ ನೇಮಕ
    ನಾಲ್ಕು 4 ದಿನ ಲಸಿಕಾ ಅಭಿಯಾನ ನಡೆಯಲಿದ್ದು, ಮೊದಲನೇ ದಿನ ಬೂತ್ ಮಟ್ಟದಲ್ಲಿ ನಂತರ ಮೂರು ದಿನ ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುತ್ತಿದೆ. ಪ್ರತಿ ಬೂತ್ ಮಟ್ಟದ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ತೆರಳಿ ತಪ್ಪದೆ ಪೋಲಿಯೋ ಹನಿ ಹಾಕುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್. ದೇಸಾಯಿ ಹೇಳಿದರು.

    ಪ್ರತಿ ಬೂತ್‌ಗೆ ಇಬ್ಬರು ಸದಸ್ಯರು, ಐದು ತಂಡಕ್ಕೆ ಒಬ್ಬ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಪಲ್ಸ್ ಪೋಲಿಯೋ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಶಾಲೆಗಳಲ್ಲಿ ಪ್ರಭಾತ ಫೆೇರಿ ಹಾಗೂ ಪಲ್ಸ್ ಪೋಲಿಯೋ ಕಾರ್ಯಕ್ರಮದ ಒಂದು ದಿನ ಮುನ್ನ ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts