More

    ಮೂರು ಏತ ನೀರಾವರಿ ಬೇಡಿಕೆ

    ಅಶೋಕ ಶೆಟ್ಟರ
    ಬಾಗಲಕೋಟೆ:
    ನಾಲ್ಕನೇ ಸಲ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಯಡಿಯೂರಪ್ಪ ಮಾರ್ಚ್ 4 ರಂದು ತಮ್ಮ ಮೊದಲ ಬಜೆಟ್ ಮಂಡನೆಯ ತಯಾರಿಯಲ್ಲಿ ಇದ್ದಾರೆ. ಬಿಎಸ್‌ವೈ ಆಯವ್ಯಯ ಅಂದರೆ ಬಾಗಲಕೋಟೆ ಜನರು ತುಸು ಹೆಚ್ಚು ಆಕಾಂಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ಕೋಟೆ ನಾಡಿನ ಜತೆಗೆ ವಿಶೇಷ ನಂಟು ಹೊಂದಿರುವ ಅವರು, ಇಲ್ಲಿಗೆ ಹೆಚ್ಚಿನ ಅನುದಾನ ಮತ್ತು ಯೋಜನೆಗಳನ್ನು ಘೋಷಣೆ ಮಾಡುತ್ತಾರೆ ಎಂದು.

    ಬಾಗಲಕೋಟೆ ಜಿಲ್ಲೆ ಅಂದಾಕ್ಷಣ ಪ್ರಮುಖ ಬೇಡಿಕೆ ಕೇಳಿಬರುವುದು ನೀರಾವರಿ. ಹೊಸ ಏತ ನೀರಾವರಿ ಮತ್ತು ಸಂತ್ರಸ್ತರ ಸಂತಸದ ಬದುಕಿಗೆ ಏನಾದರೂ ಸಿಕ್ಕಿತಾ ಎನ್ನುವುದು. ಇತ್ತೀಚಿನ ವರ್ಷಗಳಲ್ಲಿ ಕಾಯೋದೇ ಆಯಿತು ವಿನಾ ಸಿಕ್ಕಿದ್ದು ಅಲ್ಪಸ್ವಲ್ಪ. ಇದೀಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಿಎಂ ಸ್ವಯಂ ಆಗಿ ಈ ಬಜೆಟ್‌ನಲ್ಲಿ 20 ಸಾವಿರ ಕೋಟಿ ರೂ. ಅನುದಾನ ಒದಿಗಿಸುವುದಾಗಿ ವಾಗ್ದಾನ ಮಾಡಿದ್ದಾರೆ.
    ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಪಡೆದುಕೊಂಡಕ್ಕಿಂತ ಹೆಚ್ಚು ಕಳೆದುಕೊಂಡಿರುವ ಬಾಗಲಕೋಟೆ ಜಿಲ್ಲೆ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಇಲ್ಲಿನ ಮೂರು ಕ್ಷೇತ್ರಗಳಲ್ಲಿ ಅಲ್ಲಿನ ಶಾಸಕರು ತಮ್ಮ ಜನರಿಗೆ ಅನುಕೂಲವಾಗುವ ಏತ ನೀರಾವರಿ ಯೋಜನೆಗಳಿಗೆ ಡಿಪಿಆರ್ ತಯಾರಿಸಿ ಈ ಬಜೆಟ್‌ನಲ್ಲಿ ಅನುದಾನ ಒದಗಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.

    ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ತಮ್ಮ ಕ್ಷೇತ್ರದ ಏತ ನೀರಾವರಿಗೆ 525 ಕೋಟಿ ರೂಪಾಯಿ, ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ ನಿರಾಣಿ 305 ಕೋಟಿ ರೂಪಾಯಿ ಹಾಗೂ ಜಮಖಂಡಿ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ ಅವರು 216.50 ಕೋಟಿ ರೂ. ಅನುದಾನಕ್ಕೆ ಸಿಎಂ ಯಡಿಯೂರಪ್ಪ ಅವರಿಗೆ ಬೇಡಿಕೆ ಸಲ್ಲಿಸಿದ್ದಾರೆ.

    ಹೀಗಾಗಿ ಈ 2020-21ನೇ ಸಾಲಿನ ಆಯವ್ಯಯಕ್ಕೆ ಯಾವ ಕ್ಷೇತ್ರದ ಬೇಡಿಕೆಗೆ ಮುಖ್ಯಮಂತ್ರಿಗಳು ಅನುದಾನಕ್ಕೆ ಸೈ ಎನ್ನುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

    ಸಿದ್ದು ಕ್ಷೇತ್ರದ ಕೆರೂರ ಏತ ನೀರಾವರಿ
    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿರುವ ಬಾದಾಮಿ ಕ್ಷೇತ್ರಕ್ಕೆ ಹೆಚ್ಚಿನ ಕೆಲಸ ಮಾಡಿಸಬೇಕು ಎನ್ನುವ ಉತ್ಕಟತೆ. ಇದೇ ಕಾರಣಕ್ಕೆ ತಮ್ಮ ಕ್ಷೇತ್ರಕ್ಕೆ ಏನೇನು ಬೇಕು ಎನ್ನುವ ಬಗ್ಗೆ ವಿವಿಧ ಮಂತ್ರಿಗಳು ಹಾಗೂ ಸಿಎಂಗೆ ಆಗಾಗ್ಗೆ ಪತ್ರಗಳನ್ನು ಬರೆಯುತ್ತಲೇ ಇರುತ್ತಾರೆ. ಅದರಲ್ಲಿ ಕೆಲ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿದ್ದರೆ ಹಲವು ಪತ್ರಗಳ ಹಾಗೆಯೇ ಉಳಿದಿವೆ.

    ಇದೀಗ ರಾಜಕೀಯವಾಗಿ ಬೇರೆ ಬೇರೆ ಪಕ್ಷವಾಗಿದ್ದರೂ ಸಿಎಂ ಯಡಿಯೂರಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಿದ್ದರಾಮಯ್ಯ ಈ ಬಜೆಟ್‌ನಲ್ಲಿ ಭರ್ತಿ 1815 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಕೆರೂರ ಏತ ನೀರಾವರಿಯೂ ಒಂದು.

    ಬಾದಾಮಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 11 ಗ್ರಾಮಗಳ 16 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಕೆರೂರ ಏತ ನೀರಾವರಿ ಯೋಜನೆ. ಕೆಬಿಜೆಎನ್‌ಎಲ್‌ನಿಂದ ಘಟಪ್ರಭಾ ನದಿಯ ಹಿನ್ನೀರನ್ನು ಎತ್ತಿ ಒಟ್ಟು 2.981 ಟಿಎಂಸಿ ನೀರು ಒದಗಿಸುವುದಾಗಿದೆ. ಇದಕ್ಕಾಗಿ 525 ಕೋಟಿ ರೂ.ವನ್ನು ಈ ಸಾಲಿನ ಬಜೆಟ್‌ನಲ್ಲಿ ಒದಗಿಸುವಂತೆ ಸಿದ್ದರಾಮಯ್ಯ ಕೋರಿದ್ದಾರೆ.

    ಹಾಗೆ ನೋಡಿದರೆ ಇದು ಕಳೆದ ಬಜೆಟ್‌ನಲ್ಲಿ ಘೋಷಿತ ಯೋಜನೆ ಆಗಿದೆ. ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಇದಕ್ಕಾಗಿ 300 ಕೋಟಿ ರೂ. ಅನುದಾನ ಘೋಷಿಸಿದ್ದರು. ಆದರೆ, ಈವರೆಗೂ ಅನುದಾನ ಸಿಕ್ಕಿಲ್ಲ. ಹೀಗಾಗಿ ಸಿದ್ದರಾಮಯ್ಯ ಇದೀಗ ಯಡಿಯೂರಪ್ಪ ಅವರಿಗೆ ಈ ಬಜೆಟ್‌ನಲ್ಲಿ ಯೋಜನೆಗೆ 525 ಕೋಟಿ ರೂ. ಒದಗಿಸುವಂತೆ ಕೋರಿದ್ದಾರೆ.

    ನಿರಾಣಿ ಕೋರಿಕೆ ಏನು?
    ಇನ್ನು ಯಡಿಯೂರಪ್ಪ ಅವರ ಆಪ್ತ ಶಾಸಕ ಬೀಳಗಿ ಕ್ಷೇತ್ರದ ಮುರುಗೇಶ ನಿರಾಣಿ ತಮ್ಮ ಕ್ಷೇತ್ರದ 21 ಗ್ರಾಮಗಳ ರೈತರಿಗೆ ಅನುಕೂಲವಾಗುವಂತೆ ಘಟಪ್ರಭಾ ಬಲದಂಡೆ ಕಾಲುವೆಗೆ ಕೃಷ್ಣಾ ಹಿನ್ನೀರು ಹರಿಸಿ 22690.93 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು 305 ಕೋಟಿ ರೂ. ಅನುದಾನವನ್ನು ಈ ಬಜೆಟ್‌ನಲ್ಲಿ ಒದಗಿಸಲು ಮನವಿ ಮಾಡಿದ್ದಾರೆ.

    ಈಗಾಗಲೇ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡ ಯೋಜನೆ ಇದಾಗಿದ್ದರೂ ಕಾಲುವೆ ನಿರ್ಮಾಣವಾಗಿ 18 ವರ್ಷಗಳಾಗಿದ್ದರೂ ಬಾಗಲಕೋಟೆ ಮತ್ತು ಬೀಳಗಿ ತಾಲೂಕಿನ ಗ್ರಾಮಗಳಿಗೆ ಕಾಲುವೆ ನೀರು ಬಂದಿಲ್ಲ. ರೈತರ ಜಮೀನು ತೋಯಿಸಿಲ್ಲ. ಈ ಹಿನ್ನೆಲೆಯಲ್ಲಿ ಘಟಪ್ರಭಾ ಬಲದಂಡೆ ಕಾಲುವೆ 119 ಕಿ.ಮೀ. ನಿಂದ 199 ಕಿ.ಮೀ. ಕಾಲುವೆ ಜಾಲಕ್ಕೆ ನೀರು ಹರಿಸಲು ಹೆರಕಲ್ ಬಳಿಯಲ್ಲಿ ಕೃಷ್ಣಾ ನದಿ ಹಿನ್ನೀರು ಪಡೆದು ಬೀಳಗಿ ವಿಧಾನಸಭಾ ಕ್ಷೇತ್ರದ 21 ಗ್ರಾಮಗಳ ರೈತರ ಜಮೀನಿಗೆ ನೀರು ಒದಗಿಸಲು ಅಧಿಕಾರಿಗಳು ಡಿಪಿಆರ್ ತಯಾರಿಸಿದ್ದು, ಇದಕ್ಕೆ 305 ಕೋಟಿ ರೂ. ಖರ್ಚು ಬರಲಿದ್ದು, 2020-21ನೇ ಸಾಲಿನ ಆಯವ್ಯಯದಲ್ಲಿ ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಶಾಸಕ ಮುರುಗೇಶ ನೀರಾಣಿ ಅವರ ಜತೆಗೆ ಈ ಯೋಜನೆಗೆ ಅನುದಾನ ನೀಡುವಂತೆ ಸಂಸದ ಪಿ.ಸಿ.ಗದ್ದಿಗೌಡರ, ಬಾಗಲಕೋಟೆ ಶಾಸಕರಾದ ವೀರಣ್ಣ ಚರಂತಿಮಠ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಅವರ ಸಹ ಪ್ರತ್ಯೇಕವಾಗಿ ಸಿಎಂಗೆ ಪತ್ರ ಬರೆದಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಸಹ ಶಾಸಕರ ಅಭಿಪ್ರಾಯವನ್ನು ಸಿಎಂಗೆ ಪತ್ರದ ಮೂಲಕ ತಿಳಿಸಿದ್ದಾರೆ.

    ಮರೆಗುದ್ದಿ ಏತ ನೀರಾವರಿಗೆ 216 ಕೋಟಿ ರೂ.
    ಇನ್ನು ಮೊದಲ ಬಾರಿಗೆ ಶಾಸಕ ಆಗಿರುವ ಜಮಖಂಡಿಯ ಆನಂದ ನ್ಯಾಮಗೌಡ ಸಹ ತಮ್ಮ ಕ್ಷೇತ್ರಕ್ಕೆ ಈ ಬಜೆಟ್‌ನಲ್ಲಿ ಮುಖ್ಯವಾಗಿ ಏತ ನೀರಾವರಿಗೆ ಅನುದಾನ ಪಡೆಯುವ ನಿಟ್ಟಿನಲ್ಲಿ ಹೆಚ್ಚು ಒತ್ತುಕೊಟ್ಟಿದ್ದಾರೆ. ಮರೆಗುದ್ದಿ ಗಲಗಲಿ ಏತ ನೀರಾವರಿ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಈ ಬಜೆಟ್‌ನಲ್ಲಿ ಇದಕ್ಕೆ ಅಗತ್ಯ ಇರುವ 216.50 ಕೋಟಿ ರೂ. ಅನುದಾನ ಹೊಂದಿಸುವಂತೆ ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

    8 ಗ್ರಾಮಗಳ 2035 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಜತೆಗೆ 4 ಕೆರೆಗಳನ್ನು ತುಂಬಿಸುವುದಾಗಿದೆ. ಹಾಗೆಯೇ ಯೋಜನೆ ಅನುಷ್ಠಾನದಿಂದ ಮಾರ್ಗ ಮಧ್ಯದಲ್ಲಿ ಬರುವ 36 ಚೆಕ್ ಡ್ಯಾಂಗಳಿಗೂ ನೀರು ತುಂಬಿಸಿಕೊಳ್ಳಲು ಅನುಕೂಲವಾಗುತ್ತದೆ. ಹೀಗಾಗಿ ಪ್ರಸಕ್ತ ಬಜೆಟ್‌ನಲ್ಲಿ ಮರೆಗುದ್ದ-ಗಲಗಲಿ ಏತನೀರಾವರಿ ಯೋಜನೆಗೆ 216.50 ಕೋಟಿ ರೂ. ಒದಗಿಸುವಂತೆ ಕೋರಿದ್ದಾರೆ.

    ಪ್ರಸಕ್ತ ಬಜೆಟ್‌ನಲ್ಲಿ ಜಮಖಂಡಿ ಕ್ಷೇತ್ರಕ್ಕೆ ನಾನು ವಿಶೇಷವಾಗಿ ಮರೆಗುದ್ದಿ ಏತ ನೀರಾವರಿಗೆ ಅನುದಾನ ಕೇಳಿದ್ದೇನೆ. 216.50 ಕೋಟಿ ರೂ. ಯೋಜನೆ ಇದಾಗಿದ್ದು, ಇದು ಪೂರ್ಣಗೊಳ್ಳಲು ಎರಡು ವರ್ಷಗಳು ಬೇಕು. ಹೀಗಾಗಿ ಒಮ್ಮೆಲೇ ಅನುದಾನ ಕೊಡದಿದ್ದರೂ ಈ ಬಜೆಟ್‌ನಲ್ಲಿ ಮೊದಲ ಹಂತವಾಗಿ 100 ಕೋಟಿ ರೂ. ಹಾಗೂ ಮುಂದಿನ ಬಜೆಟ್‌ನಲ್ಲಿ ಉಳಿದ ಹಣ ಒದಗಿಸಿದರೆ ಯೋಜನೆ ಅನುಷ್ಠಾನಗೊಳ್ಳುತ್ತದೆ. ಬಜೆಟ್‌ನಲ್ಲಿ ಅನುದಾನ ಸಿಗುವ ವಿಶ್ವಾಸ ಇದೆ.
    ಆನಂದ ನ್ಯಾಮಗೌಡ, ಶಾಸಕ ಜಮಖಂಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts