More

    ಸಂಸ್ಕೃತ ಪರೀಕ್ಷೆಯಲ್ಲಿ ಸಾಮೂಹಿಕ ನಕಲು

    ಬಾಗಲಕೋಟೆ : ಜಮಖಂಡಿ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ನೂತನ ವಿದ್ಯಾಲಯದಲ್ಲಿ ಭಾನುವಾರ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳು ಸಾಮೂಹಿಕ ನಕಲು ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿವೆ.

    ನಗರದ ಲಕ್ಷ್ಮೀ ನರಸಿಂಹ ಸಂಸ್ಕೃತ ಪಾಠಶಾಲೆ ವತಿಯಿಂದ ಪರೀಕ್ಷೆಗಳನ್ನು ಏರ್ಪಡಿಸಲಾಗಿತ್ತು. ಪ್ರಥಮ, ಕಾವ್ಯ, ಸಾಹಿತ್ಯ ಪರೀಕ್ಷೆಗಳು ನಡೆಯುತ್ತಿದ್ದವು. ಜಮಖಂಡಿ ನಗರ ಸೇರಿ ವಿವಿಧ ಶಾಲೆ, ಕಾಲೇಜುಗಳ ಅಂದಾಜು ಇನ್ನೂರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರಿಗೂ ಸಾಮೂಹಿಕ ನಕಲು ಮಾಡಿಸಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

    ಪ್ರಶ್ನೆ ಪತ್ರಿಕೆಗಳ ಜತೆಗೆ ಉತ್ತರಗಳ ನೋಟ್ ಸಹ ಪರೀಕ್ಷಾರ್ಥಿಗಳಿಗೆ ಕೊಡಲಾಗಿತ್ತು. ಅನೇಕ ವಿದ್ಯಾರ್ಥಿಗಳು ಉತ್ತರಗಳನ್ನು ಮೊಬೈಲ್‌ನಲ್ಲಿ ಹಾಕಿಕೊಂಡು ಬಂದಿದ್ದು, ಬಿಂದಾಸ್ ಆಗಿ ಟೇಬಲ್ ಮೇಲೆ ಇಟ್ಟುಕೊಂಡು ಪರೀಕ್ಷೆ ಬರೆಯುತ್ತಿದ್ದರು. ಕೊಠಡಿ ಮೇಲ್ವಿಚಾರಕರು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಕಣ್ಣೆದುರೇ ಇದೆಲ್ಲ ನಡೆಯುತ್ತಿದ್ದರೂ ಕಂಡು ಕಾಣದಂತೆ ಮೌನಕ್ಕೆ ಶರಣಾಗಿ ಸಾಮೂಹಿಕ ನಕಲಿಗೆ ಸಹಕರಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.

    ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡುತ್ತಿದ್ದ ದೃಶ್ಯಗಳ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಈ ರೀತಿ ಸಾಮೂಹಿಕ ನಕಲು ಮಾಡಿಸಿ, ಪರೀಕ್ಷೆ ಬರೆಸುವುದು ಅಗತ್ಯ ಇದೆಯಾ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

    ತತ್ಸಮಾನ ಪರೀಕ್ಷೆಗಳು
    ಪ್ರಥಮ, ಕಾವ್ಯ, ಸಾಹಿತ್ಯ ಪರೀಕ್ಷೆಗಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ತತ್ಸಮಾನ ಪರೀಕ್ಷೆಗಳಾಗಿದ್ದು, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವಿವಿಧ ಶಾಲೆ, ಕಾಲೇಜುಗಳ 200 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಏಳನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಶುಲ್ಕ ಕಟ್ಟಿದ ಬಳಿಕ ವಿದ್ಯಾರ್ಥಿಗಳನ್ನು ನೇರವಾಗಿ ಪರೀಕ್ಷೆಗೆ ಹಾಜರಾಗುವಂತೆ ಮಾಡುತ್ತಾರೆ. ಯಾವುದೇ ತರಗತಿಗಳನ್ನು ನಡೆಸುವುದಿಲ್ಲ. ಹೀಗಾಗಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಿಸುವ ಪರಿಪಾಠ ಮೊದಲಿನಿಂದಲೂ ನಡೆದು ಬಂದಿದೆ. ಇದು ಬರೀ ಸಂಸ್ಕೃತ ಮಾತ್ರವಲ್ಲ. ಹಿಂದಿ ಪರೀಕ್ಷೆಯಲ್ಲೂ ಸಾಮೂಹಿಕ ನಕಲು ಪರಂಪರೆ ಇದೆ. ಇವೆಲ್ಲ ನೆಪಮಾತ್ರಕ್ಕೆ ಪರೀಕ್ಷೆಗಳು. ದುಡ್ಡು ಕೊಟ್ಟು ಪ್ರಮಾಣ ಪತ್ರ ಪಡೆಯುವುದಷ್ಟೆ ಎಂದು ಹೆಸರು ಹೇಳಲಿಚ್ಛಿಸದ ಪರೀಕ್ಷಾರ್ಥಿಯೊಬ್ಬರು ಹೇಳಿದರು.

    ಸಂಸ್ಕೃತ ಪರೀಕ್ಷೆಗಳಿಗೆ ಕೊಠಡಿ ಪಡೆದುಕೊಂಡಿದ್ದಾರೆ. ಆದರೆ, ಅಲ್ಲಿ ನಡೆಯುತ್ತಿರುವ ಪರೀಕ್ಷ್ಷೆ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ. ಅವರು ನಮ್ಮನ್ನು ಸಂಪರ್ಕಿಸಿಲ್ಲ. ಸಂಸ್ಕೃತ ವಿವಿ ಸಂಬಂಧಪಟ್ಟ ಪರೀಕ್ಷೆ ಇದಾಗಿದೆ. ಇದು ನಮ್ಮ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದಲ್ಲ.
    ಸಿ.ಎಂ.ನ್ಯಾಮಗೌಡ
    ಕ್ಷೇತ್ರಶಿಕ್ಷಣಾಧಿಕಾರಿ, ಜಮಖಂಡಿ

    ಶಾಲೆ ಕೊಠಡಿಯಲ್ಲಿ ಪರೀಕ್ಷೆ ನಡೆಸುವುದಾಗಿ ಪರವಾನಗಿ ಪಡೆದಿದ್ದಾರೆ. ಆದರೆ, ಅಲ್ಲಿ ನಡೆದ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿರುವುದು ನಮಗೆ ಸಂಬಂಧಿಸಿದ್ದಲ್ಲ. ನಮ್ಮ ಗಮನಕ್ಕೂ ತಂದಿಲ್ಲ.
    ಎಸ್.ಬಿ.ಹಿರೇಮನಿ ಮುಖ್ಯಶಿಕ್ಷಕರು, ಸರ್ಕಾರಿ ನೂತನ ವಿದ್ಯಾಲಯ, ಜಮಖಂಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts