More

    ಜಿಲ್ಲಾಡಳಿತ ಲೆಕ್ಕಾಚಾರ ಉಲ್ಟಾಪಲ್ಟಾ..!

    ಅಶೋಕ ಶೆಟ್ಟರ
    ಬಾಗಲಕೋಟೆ: ‘ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ 100ರ ಆಸುಪಾಸಿನಲ್ಲಿ ಬಂದು ಹೋಗಬಹುದು. ತೀರಾ ಗಂಭೀರ ಕಾಯಿಲೆ ಇರುವವರು ಒಂದಿಬ್ಬರು ಸಾವನ್ನಪ್ಪಬಹುದು. ಉಳಿದಂತೆ ಜಿಲ್ಲೆ ಸೇಫ್ ಆಗಲಿದೆ…’

    ಜಿಲ್ಲೆಯಲ್ಲಿ ಕರೊನಾ ಕಾಣಿಸಿಕೊಂಡ ಆರಂಭದಲ್ಲಿ ಸೋಂಕಿನ ಚೈನ್ ಲಿಂಕ್ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದ ಜಿಲ್ಲಾಡಳಿತ ಖಾಸಗಿಯಾಗಿ ಅನೇಕ ಸಲ ಹೀಗಂತ ಹೇಳಿದ್ದಿದೆ.

    ಆದರೆ, ಅದೇನಾಯಿತೋ ಗೊತ್ತಿಲ್ಲ. ಕೆಲ ತಪ್ಪು ನಿರ್ಧಾರಗಳು, ಹಾಗೆಯೇ ಬಹು ಜನರ ನಿರ್ಲಕ್ಷ್ಯದ ಪರಮಾವಧಿ ಸೇರಿಕೊಂಡು ಜಿಲ್ಲಾಡಳಿತ, ಕರೊನಾ ವಾರಿಯರ್ಸ್ ಎಲ್ಲರ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗಿದೆ. ಅದರ ಫಲಿತಾಂಶ ಇದೀಗ ಕಣ್ಣೆದುರು ಇದೆ.

    ನೂರರ ಗಡಿ ಅಂದುಕೊಂಡಿದ್ದ ಜಿಲ್ಲೆಯಲ್ಲಿ ಇದೀಗ ಸೋಂಕು ಶರವೇಗದಲ್ಲಿ ಸಾಗಿ ಸಾವಿರದ ಗಡಿಯನ್ನು ನುಗ್ಗಿಕೊಂಡು 1168ಕ್ಕೆ ಬಂದು ನಿಂತಿದೆ. ಇದರ ಜತೆಗೆ ಸಾವಿನ ದವಡೆಗೂ ಜನರನ್ನು ನೂಕಿಕೊಂಡು ಹೋಗುತ್ತಿರುವುದು ಮಾತ್ರ ತೀವ್ರ ಆತಂಕಕ್ಕೆ ಕಾರಣವಾಗಿದೆ.

    ನಗರ ಪ್ರದೇಶದಲ್ಲಿ ಅಬ್ಬರಿಸಿದ್ದ ಸೋಂಕಿನ ಮಾಲೆಗೆ ಇದೀಗ ಜಿಲ್ಲೆಯ ಎಲ್ಲ ನಗರಗಳು, ಪಟ್ಟಣಗಳು, ಐವತ್ತಕ್ಕೂ ಹೆಚ್ಚು ಗ್ರಾಮಗಳು ಸೇರಿ ಸೋಂಕಿನ ಸರಮಾಲೆ ದೊಡ್ಡದಾಗಿದೆ. ಸಾವನ್ನಪ್ಪಿರುವ 42 ಜನರ ಪೈಕಿ ಅನೇಕರು ಬೇರೆ ಬೇರೆ ಗಂಭಿರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ವಾದವಾಗಿದೆ. ಅದೇನೇ ಇದ್ದರೂ ಸೋಂಕು ಸೇರಿಕೊಂಡ ಬಳಿಕ ಸಾವನ್ನಪ್ಪುತ್ತಿರುವುದು ಮಾತ್ರ ಕಹಿ ಸತ್ಯ.

    ಸದ್ಯಕ್ಕೆ ರಾಜ್ಯದಲ್ಲಿ ಸೋಂಕಿನ ಸರಾಸರಿ ಹಾಗೂ ಸಾವಿನ ಮಾರ್ಟಾಲಿಟಿ ರೇಟ್‌ನಲ್ಲಿ ಬಾಗಲಕೋಟೆ ಜಿಲ್ಲೆ ಹೆಚ್ಚು ಆತಂಕ ಮೂಡಿಸುವ ಹಂತದಲ್ಲಿ ಇದೆ. ರಾಜ್ಯದ ಸರಾಸರಿಗಿಂತ ಹೆಚ್ಚು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

    ಪರೀಕ್ಷಿತರಲ್ಲಿ ಐವರಿಗೆ ಸೋಂಕು ದೃಢ?
    ಬಾಗಲಕೋಟೆ ಜಿಲ್ಲೆಯಲ್ಲಿ ಈ ವರೆಗೂ 22142 ಜನರ ಗಂಟಲುದ್ರವ ಮಾದರಿ ಪರೀಕ್ಷೆ ಮಾಡಿದ್ದು, ಈ ಪೈಕಿ 113 ಜನರ ವರದಿ ಬಾಕಿ ಬರಬೇಕಿದೆ. ಅಲ್ಲಿಗೆ 22029 ಜನರು ವರದಿ ಬಂದಿದ್ದು, ಇದರಲ್ಲಿ 1168 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಅಂದರೆ ಪರೀಕ್ಷಿತರಲ್ಲಿ ಶೇ. 5ರಷ್ಟು ಜನರು ಸೋಂಕು ಪತ್ತೆ ಆಗುತ್ತಿದೆ. ಇನ್ನು ದೃಢಪಟ್ಟ ಸೋಂಕಿತರಲ್ಲಿ ಸಾವಿನ ಸರಾಸರಿಯೂ ಸಹ ದಿಗಿಲು ಮೂಡಿಸುವಂತಾಗಿದೆ. ಸಾವಿನ ಸರಾಸರಿ ಶೇ. 3.5ರ ವರೆಗೂ ಬಂದಿದೆ. ಕಳೆದ ವಾರ ಇದು 4.5 ವರೆಗೂ ಹೋಗಿತ್ತು. ಮೂರ್ನಾಲ್ಕು ದಿನಗಳಲ್ಲಿ ನಿತ್ಯ ಸಾವಿನ ಸಂಖ್ಯೆ ಒಂದಕ್ಕೆ ಇಳಿದಿದ್ದರಿಂದ ಇದೀಗ 3.5ಕ್ಕೆ ಬಂದು ನಿಂತಿದೆ. ಆದರೆ, ಇದು ಸಹ ರಾಜ್ಯದ ಸರಾಸರಿಗೆ ಹೋಲಿಕೆ ಮಾಡಿದರೆ ಜಾಸ್ತಿ ಎನ್ನುವುದು ಗಮನಾರ್ಹ ವಿಚಾರ.

    ಪರೀಕ್ಷೆ ವಿಳಂಬ ಆಗಲ್ಲ
    ನಿರೀಕ್ಷೆ ಮೀರಿ ಸೋಂಕು ಹಬ್ಬಿದ್ದಕ್ಕೆ ಪರೀಕ್ಷೆ ಹಾಗೂ ಅದರ ವರದಿ ಬರುವುದು ವಿಳಂಬ ಆಗುತ್ತಿದೆ. ಇದರಿಂದ ಸೋಂಕು ಇಟ್ಟುಕೊಂಡೇ ಅನೇಕರು ವ್ಯಾಪಾರ, ವಹಿವಾಟು, ಸಂಚಾರ ಮಾಡಿದ್ದಾರೆ. ಇದರಿಂದ ಸೋಂಕು ಮತ್ತಷ್ಟು ಜನರಿಗೆ ಹರಡಿರಲಿಕ್ಕೂ ಸಾಕು. ಇದರ ಜತೆಗೆ ಜಿಲ್ಲಾಡಳಿತ ಎಷ್ಟೇ ಮನವಿ ಮಾಡಿದರೂ ಕೂಗಾಟ, ಹಾರಾಟ ನಡೆಸಿದರೂ ಕೆಲವರ ಬೇಜವಾಬ್ದಾರಿ ವರ್ತನೆಗಳು ಜಿಲ್ಲೆಯ ಮಟ್ಟಿಗೆ ದುಬಾರಿ ಆಗಿದ್ದಿದೆ. ಮದುವೆ, ಅಂತ್ಯಸಂಸ್ಕಾರ, ಸೀಮಂತ ಕಾರ್ಯಕ್ರಮಗಳು ಜಿಲ್ಲೆಯನ್ನು ಹಿಂಡಿ ಹಿಪ್ಪೆ ಮಾಡಿವೆ ಎನ್ನುವುದು ಅತಿಶಯೋಕ್ತಿ ಅಲ್ಲ. ಇದೇ ಕಾರಣಕ್ಕೆ ಜಿಲ್ಲಾಡಳಿತ ಜನರನ್ನು ಸೇರಿಸಿ ಮದುವೆ ಮಾಡುವಂತಿಲ್ಲ. ತೀರಾ ಅನಿವಾರ್ಯ ಇದ್ದಲ್ಲಿ ರಿಜಿಸ್ಟಾರ್ ಮದುವೆ ಆಗಬಹುದು ಎಂದು ಫರ್ಮಾನು ಹೊರಡಿಸಬೇಕಾಯಿತು. ಅಷ್ಟರ ಮಟ್ಟಿಗೆ ಮದುವೆ ನಂಜು ಜಿಲ್ಲೆಯನ್ನು ನಜ್ಜುನುಜ್ಜು ಮಾಡಿದೆ.

    ಸಮುದಾಯಕ್ಕೆ ಹರಡಿಲ್ಲ
    ಗಂಟಲು ದ್ರವ ಮಾದರಿ ವರದಿ ವಿಳಂಬ ಆಗುತ್ತಿದೆ ಎನ್ನುವ ಕೂಗು ದಟ್ಟವಾಗಿತ್ತು. ಈಗ ಅದಕ್ಕೆ ವಿರಾಮ ಬೀಳಲಿದೆ ಎನ್ನಲಾಗುತ್ತಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲೇ ಆರ್‌ಟಿಪಿಸಿಆರ್ ಅಳವಡಿಸಿದ್ದರಿಂದ ಇಲ್ಲಿಯೇ ಪರೀಕ್ಷೆ ಮಾಡಿ ವರದಿ ಕೊಡಲಾಗುತ್ತದೆ. ಇದರಿಂದ ಸೋಂಕಿನ ಲಿಂಕ್ ಕಟ್ ಮಾಡಲು ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಶನಿವಾರದಿಂದಲೇ ಜಿಲ್ಲೆಯಲ್ಲಿ ವರದಿ ಪ್ರಕಟಿಸಲಾಗುತ್ತದೆ ಎನ್ನುವ ಡಿಎಚ್‌ಒ ಡಾ. ಅನಂತ ದೇಸಾಯಿ, ಜಿಲ್ಲೆಯಲ್ಲಿ ಸೋಂಕು ಸಮುದಾಯಕ್ಕೆ ಹರಡಿಲ್ಲ. ಪ್ರತಿಯೊಂದಕ್ಕೂ ಸಂಪರ್ಕ ಇದೆ. ಆದರೆ, ಅವುಗಳನ್ನು ಪತ್ತೆ ಮಾಡಬೇಕಿದೆ. ಸಮುದಾಯಕ್ಕೆ ಹರಡಿಲ್ಲ ಎನ್ನುತ್ತಾರೆ.

    ಜಿಲ್ಲೆಯಲ್ಲಿ ಬೆಡ್ ಸಮಸ್ಯೆ ಉಂಟಾಗಿಲ್ಲ. ಜಿಲ್ಲಾ ಕೋವಿಡ್ ಆಸ್ಪತ್ರೆ ಜತೆಗೆ ಒಂಬತ್ತು ಕೋವಿಡ್ ಕೇರ್ ಸೆಂಟರ್ ಹಾಗೂ ಖಾಸಗಿ ಆಸ್ಪತ್ರೆ ಸೇರಿ ಅಂದಾಜು ಒಂದು ಸಾವಿರ ಬೆಡ್‌ಗಳು ಲಭ್ಯ ಇವೆ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಬಾಗಲಕೋಟೆ ಸ್ಪಿನ್ನಿಂಗ್ ಮಿಲ್ನಲ್ಲಿ ಸಾವಿರ ಬೆಡ್‌ಗಳು ಸಿದ್ಧವಾಗಲಿವೆ. ಹೀಗಾಗಿ ಬೆಡ್ ಸಮಸ್ಯೆ ಆಗಲ್ಲ.
    ಡಾ. ಅನಂತ ದೇಸಾಯಿ ಡಿಎಚ್‌ಒ ಬಾಗಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts