More

    ಕೋಟೆನಗರಿಯಲ್ಲಿ ಬಿಜೆಪಿ ಬೃಹತ್ ರ‌್ಯಾಲಿ

    ಬಾಗಲಕೋಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಕೋಟೆನಗರಿಯಲ್ಲಿ ಬೃಹತ್ ರ‌್ಯಾಲಿ ಭಾನುವಾರ ಜರುಗಿತು. ಸಾವಿರಾರು ಜನರು ತಿರಂಗಾ ಧ್ವಜ ಹಿಡಿದು ಪೌರತ್ವ ಕಾಯ್ದೆ ಬೆಂಬಲ ಘೋಷಣೆ ಕೂಗಿದರು.

    ನಗರದ ಶಿವಾನಂದ ಜೀನ್‌ನಲ್ಲಿರುವ ಬಿಜೆಪಿ ಕಾರ್ಯಲಯದಿಂದ ಆರಂಭವಾದ ರ‌್ಯಾಲಿ ಬಸವೇಶ್ವರ ವೃತ್ತ, ಎಂ.ಜಿ. ರಸ್ತೆ, ಅಡತ್ ಬಜಾರ್ ರಸ್ತೆ, ಟೆಂಗಿನಮಠ, ಪಶು ಆಸ್ಪತ್ರೆ, ಕಾಲೇಜು ರಸ್ತೆ ಮೂಲಕ ಚರಂತಿಮಠ ತಲುಪಿ ಸಮಾವೇಶವಾಗಿ ಮಾರ್ಪಟ್ಟಿತು. 5 ಅಡಿ ಅಗಲದ, 500 ಮೀಟರ್ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ಗಮನ ಸೆಳೆಯಿತು. ಅಲ್ಲದೆ, ರಾಷ್ಟ್ರ ಧ್ವಜಗಳನ್ನು ಹಿಡಿದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಪರ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.

    ಸಮಾವೇಶ ಉದ್ದೇಶಿಸಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಪೌರತ್ವ ಕಾಯ್ದೆ ಯಾವುದೇ ಧರ್ಮದ ಜನರ ವಿರೋಧಿಯಾಗಿಲ್ಲ. ಭಾರತದ ಮುಸ್ಲಿಂ ಜನಾಂಗ ಆತಂಕ ಪಡುವ ಅಗತ್ಯವಿಲ್ಲ. 2003 ರಲ್ಲಿ ಅಂದಿನ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಸಂಸತ್‌ನಲ್ಲಿ ಪೌರತ್ವ ವಿಷಯ ಮಂಡಿಸಿದಾಗ ಇದೇ ಕಾಂಗ್ರೆಸ್, ಎಡ ಪಕ್ಷಗಳು ಬೆಂಬಲಿಸಿದ್ದವು. ಆದರೆ, ಇಂದು ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಅಲ್ಪಸಂಖ್ಯಾತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅಧಿಕಾರ ಕಳೆದುಕೊಂಡು ಹತಾಶರಾಗಿ ಈ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ತನ್ನ ಅಧಿಕಾರ ಅವಧಿಯಲ್ಲಿ ದಲಿತರು, ಅಲ್ಪಸಂಖ್ಯಾತರಿಗೆ ಮೋಸ ಮಾಡಿದೆ. ಎಲ್ಲ ರಾಷ್ಟ್ರದಲ್ಲಿ ಪೌರತ್ವ ಕಾಯ್ದೆ ಇದೆ. ಭಾರತ ದೇಶಕ್ಕೆ ಹೊಸತು ಅಲ್ಲ. ದೇಶ ಬೇಕು ಪೌರತ್ವ ಕಾಯ್ದೆ ಬೇಡ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

    ದೇಶದ ವಿಭಜನೆ ವೇಳೆ ಪಾಕಿಸ್ತಾನದ ಪಠಾಣರ ಕೈಯಲ್ಲಿ ನಮ್ಮನ್ನು ಕೊಡಬೇಡಿ ಎಂದು ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫರ್ ಖಾನ್ ಸೇರಿ ಅನೇಕರು ಬೇಡಿಕೊಂಡರು. ಆದರೂ ಕೇಳಲಿಲ್ಲ. ಸ್ವಾತಂತ್ರೃದ ಬಳಿಕ ಹಿಂದುಗಳು, ಸಿಖ್ ಸೇರಿ ಅಲ್ಪಸಂಖ್ಯಾತರನ್ನು ಪಾಕಿಸ್ತಾನದಲ್ಲಿ ಕೊಲ್ಲಲಾಯಿತು. ಆದರೆ, ಭಾರತದಲ್ಲಿ ಯಾವ ಜನಾಂಗಕ್ಕೂ ಸಮಸ್ಯೆಯಾಗಲು ಅವಕಾಶ ನೀಡಿಲ್ಲ. ಬಾಂಗ್ಲಾ ದೇಶದಿಂದ ಬಂದ ವಲಸಿಗರಿಗೆ ದಿ.ಇಂದಿರಾ ಗಾಂಧಿ ಪ್ರಧಾನಿ ಇದ್ದಾಗ ಆಶ್ರಯ ನೀಡಲಾಯಿತು. ಈ ರೀತಿಯ ಎಲ್ಲ ನಿರಾಶ್ರಿಯತರಿಗೆ ಕಾಯ್ದೆ ಮೂಲಕ ನಾಗರಿಕ ಹಕ್ಕು ನೀಡಲಾಗುತ್ತಿದೆ. ಹೊರತು ಯಾರನ್ನು ದೇಶದಿಂದ ಹೊರಗೆ ಹಾಕುವ ಉದ್ದೇಶವಿಲ್ಲ ಎಂದರು.

    ಬೀದರ್ ಸಂಸದ ಭಗವಂತ ಖೋಬಾ, ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿದರು. ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರಾದ ಮಲ್ಲಿಕಾರ್ಜುನ ಬನ್ನಿ, ಪಿ.ಎಚ್. ಪೂಜಾರ, ಎಂ.ಕೆ. ಪಟ್ಟಣಶೆಟ್ಟಿ, ಶ್ರೀಕಾಂತ ಕುಲಕರ್ಣಿ, ರಾಜಶೇಖರ ಶೀಲವಂತ, ನಾರಾಯಣಸಾ ಭಾಂಡಗೆ ಇತರರು ಇದ್ದರು.

    ಬದುಕುವುದು ಕಷ್ಟವಾಗುತ್ತೆ
    ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಾಂಗ್ಲಾ, ಪಾಕಿಸ್ತಾನದಿಂದ ಬಂದ ಹಿಂದುಗಳಿಗೆ ಕಾಯ್ದೆ ಮೂಲಕ ಪೌರತ್ವ ನೀಡಲಾಗುತ್ತಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಿರೋಧ ಪಕ್ಷಗಳು ಮುಸ್ಲಿಂ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ಕಾಶ್ಮೀರ, ರಾಮಮಂದಿರ, ತಲಾಖ್‌ದಂತಹ ಜಟಿಲ್ ಸಮಸ್ಯೆಗಳನ್ನು ಬಗೆ ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಏಕರೂಪ ಕಾನೂನು ಜಾರಿಯಾಗಬೇಕು. ಪೌರತ್ವ ಕಾಯ್ದೆ ವಿಷಯದಲ್ಲಿ ಸರ್ಕಾರದ ಆಸ್ತಿ ಪಾಸ್ತಿ ನಷ್ಟ ಉಂಟು ಮಾಡಿದರೆ, ಉದ್ಧಟತನ ಪ್ರದರ್ಶಿದರೆ ಇಲ್ಲಿ ಬದುಕುವುದು ಕಷ್ಟವಾಗುತ್ತದೆ ಎಂದು ಕಿಡಿಕಾರಿದರು.

    ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಕಾಂಗ್ರೆಸ್ ಎನ್ನುವ ಸಂಸ್ಥೆ ಹುಟ್ಟು ಹಾಕಲಾಯಿತು. ಸ್ವಾತಂತ್ರೃದ ಬಳಿಕ ಇದನ್ನು ವಿಸರ್ಜನೆ ಮಾಡುವಂತೆ ಮಹಾತ್ಮ ಗಾಂಧಿ ತಮ್ಮ ಹರಿಜನ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಕೆಲವು ನಕಲಿ ಜನರು ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಇಟ್ಟುಕೊಂಡರು. ಭಾರತದಲ್ಲಿ ಎಲ್ಲ ಧರ್ಮಿರ ನಡುವೆ ಭಾವನಾತ್ಮಕವಾಗಿ ಗಟ್ಟಿಯಾದ ಸಂಬಂಧವಿದೆ. ಶರಣರು, ಸೂಫಿ ಸಂತರು ನೀಡಿದ ಸಂದೇಶದಲ್ಲಿ ನಾವು ಬದುಕುತ್ತಿದ್ದೇವೆ. ಪೌರತ್ವ ಕಾಯ್ದೆಯಿಂದ ಯಾರಿಗೂ ಸಮಸ್ಯೆ ಇಲ್ಲ.
    ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

    ಪೌರತ್ವ ಕಾಯ್ದೆ ಸುವರ್ಣ ಅಕ್ಷರದಲ್ಲಿ ಬರದಿಡುವಂತಹದು. ದೇಶದ ಯಾವ ಧರ್ಮಿಯರಿಗೂ ಇದರಿಂದ ಸಮಸ್ಯೆ ಇಲ್ಲ. ಸುಳ್ಳು ವದಂತಿಗಳಿಗೆ ಯಾರು ಕಿವಿಗೊಡಬಾರದು. ಬಿಜೆಪಿ ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಪ್ರತಿಯೊಂದು ಮನೆಗೆ ಭೇಟಿ ನೀಡಿ ಕಾಯ್ದೆ ಕುರಿತು ತಿಳಿವಳಿಕೆ ನೀಡಬೇಕು.
    ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ  

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts