More

    ಖಾಸಗೀಕರಣ ನೀತಿ ಕೈ ಬಿಡಿ

    ಬಾಗಲಕೋಟೆ: ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ನೇತೃತ್ವದಲ್ಲಿ ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್ ನೌಕರರು ಮುಷ್ಕರ ನಡೆಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

    ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಸೇರಿ 12 ಕ್ಕೂ ಹೆಚ್ಚು ಬ್ಯಾಂಕ್ ನೌಕರರು ಸೇವೆ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡ ಪರಿಣಾಮ ಗುರುವಾರ ಜಿಲ್ಲಾದ್ಯಂತ ಬಹುತೇಕ ಬ್ಯಾಂಕ್‌ಗಳ ಸೇವೆ ದೊರೆಯದೆ ಸಾರ್ವಜನಿಕರು ಪರದಾಡಿದರು.

    ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ, ಮುಧೋಳ, ಜಮಖಂಡಿ, ಬೀಳಗಿ, ಬಾದಾಮಿ, ಹುನಗುಂದ, ಇಳಕಲ್ಲ, ಲೋಕಾಪುರ, ರಬಕವಿ-ಬನಹಟ್ಟಿ, ತೇರದಾಳ, ಕಮತಗಿ ಸೇರಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ತಮ್ಮ ಬ್ಯಾಂಕ್‌ಗಳ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು. ಮುಷ್ಕರ ಬಗ್ಗೆ ಮಾಹಿತಿ ನೀಡಿದ್ದರು ಸಹ ಗ್ರಾಹಕರು ಬ್ಯಾಂಕ್‌ಗಳಿಗೆ ಭೇಟಿ ನೀಡಿ ಬರಿಗೈಯಲ್ಲಿ ವಾಪಸ್ ಆದ ದೃಶ್ಯ ಸಾಮಾನ್ಯವಾಗಿತ್ತು.

    ಬ್ಯಾಂಕ್‌ಗಳ ಹಿತ ಕಾಪಾಡಿ
    ಬಾಗಲಕೋಟೆ ನಗರದ ವಿವಿಧ ಬ್ಯಾಂಕ್ ನೌಕರರು ನವನಗರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ದೇಶದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬದಲಾವಣೆಯಲ್ಲಿ ಬ್ಯಾಂಕ್‌ಗಳ ಪಾತ್ರ ಹಿರಿದಾಗಿದೆ. ಕಳೆದ 70 ವರ್ಷದಲ್ಲಿ ದೇಶದ ಚಿತ್ರಣ ಹೊಸ ರೂಪ ಪಡೆಯಲು ನಮ್ಮ ಪಾತ್ರ ದೊಡ್ಡದಾಗಿದೆ. ಸರ್ಕಾರ, ಸಾರ್ವಜನಿಕರ ಕೊಂಡಿಯಾಗಿ ಕೆಲಸ ಮಾಡುತ್ತ ಬಂದಿದ್ದೇವೆ. ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ ಬ್ಯಾಂಕ್‌ಗಳ ಬಗ್ಗೆ ಕೆಟ್ಟ ಧೋರಣೆ ತಾಳುತ್ತಿದೆ. ವಾಸ್ತವ ಅಂಶ ಅರಿತುಕೊಳ್ಳದೆ ಕಾನೂನು ಮೂಲಕ ಗದಾ ಪ್ರಹಾರ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

    ವಿ.ಎ.ದೇಶಪಾಂಡೆ, ಆನಂದ ಕುಲಕರ್ಣಿ, ನಂದಕಿಶೋರ ಜೋಶಿ, ಪವನ ದೇಶಪಾಂಡೆ, ಮಧು ಪಾಟೀಲ, ಶ್ರೀನಿವಾಸ ಸಂಗಮ, ರಾಘವೇಂದ್ರ ಗಂಗಲ್, ವಿಶ್ವನಾಥ ಶೆಟ್ಟರ, ಅಂಜನಾ ಝಳಕಿ ನೇತೃತ್ವ ವಹಿಸಿದ್ದರು.

    ಬೇಡಿಕೆ ಈಡೇರಿಕೆಗೆ ಆಗ್ರಹ
    ಬ್ಯಾಂಕ್ ಉದ್ಯೋಗಿಗಳ ವಿರೋಧ ಧೋರಣೆ ಕೈ ಬಿಡಬೇಕು. ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಬಾರದು. ಜನ ಹಾಗೂ ರಾಷ್ಟ್ರೀಕರಣ ವಿರೋಧಿ ನೀತಿ ಸರಿಯಲ್ಲ. ಬಂಡವಾಳ ಶಾಹಿಗಳಿಗೆ ಬ್ಯಾಂಕ್ ಮಾರಾಟ ಮಾಡಬಾರದು. ಬ್ಯಾಂಕಿಂಗ್ ನಿಯಮಗಳಿಗೆ ತಿದ್ದು ಪಡಿ ತರಬಾರದು. ಹೊರಗುತ್ತಿಗೆ ಪದ್ಧತಿ ನಿಲ್ಲಿಸಬೇಕು. ಸಾರ್ವಜನಿಕರ ಬ್ಯಾಂಕಿಂಗ್ ವ್ಯವಸ್ಥೆ ಇನ್ನಷ್ಟು ವಿಸ್ತರಿಸಿ ಬಲಗೊಳಿಸಬೇಕು. ಬ್ಯಾಂಕ್‌ಗಳ ವಿಲೀನ ಮಾಡಬಾರದು. ಉದ್ದೇಶಪೂರ್ವಕವಾಗಿ ಬ್ಯಾಂಕ್ ಸಾಲ ಸುಸ್ತಿದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅನುತ್ಪಾದಕ ಸಾಲವನ್ನು ವಸೂಲಿ ಮಾಡಲು ಕಠಿಣ ಕ್ರಮ ಅನುಸರಿಸಬೇಕು. ಎನ್‌ಪಿಎಸ್ ಪಿಂಚಣಿ ಯೋಜನೆ ರದ್ದುಗೊಳಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕು. ಗ್ರಾಹಕರಿಗೆ ಹೆಚ್ಚಿನ ಸೇವಾ ಶುಲ್ಕವನ್ನು ವಿಧಿಸುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts