More

    ಐಪಿಎಸ್ ಅಧಿಕಾರಿಗಳ ಸಪ್ತಪದಿ: ಇದು ಕುಂದಾನಗರಿಯ ರಾಜ ಹಾಗೂ ದೂರದ ಕಳಿಂಗ ನಾಡಿನ ರಾಣಿಯ ಲವ್ ಸ್ಟೋರಿ

    ಬಾಗಲಕೋಟೆ: ಇದು ಕುಂದಾನಗರಿಯ ರಾಜ ಹಾಗೂ ದೂರದ ಕಳಿಂಗ ನಾಡಿನ ರಾಣಿಯ ಲವ್ ಸ್ಟೋರಿ. ಈಗ ಅದು ಮ್ಯಾರೇಜ್ ಸ್ಟೋರಿಯಾಗಿ ಪರಿವರ್ತನೆ ಆಗಿದೆ. ಎರಡು ಕುಟುಂಬಗಳ ಸಮ್ಮುಖದಲ್ಲಿ ವಿವಾಹ ಕಾರ್ಯ ಶಾಸ್ತ್ರೋಕ್ತವಾಗಿ ಭಾನುವಾರ ಸಡಗರದಿಂದ ನಡೆಯಿತು.

    ಐಪಿಎಸ್ ಬ್ಯಾಚ್‌ಮೇಟ್‌ಗಳ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ಅಂತಿಮವಾಗಿ ಹಿರಿಯರ ಒಪ್ಪಿಗೆಯೊಂದಿಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಕುಂದಾನಗರಿ (ಬೆಳಗಾವಿ ಜಿಲ್ಲೆ)ಯ ಕುವರ, ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಹಾಗೂ ದೂರದ ಕಳಿಂಗ ನಾಡಿನ ಕುವರಿ (ಒಡಿಶಾ ರಾಜ್ಯ) ಬರ್ಗಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೊ ಭಾನುವಾರ ಒಡಿಶಾದ ಭುವನೇಶ್ವರದಲ್ಲಿ ಹಸೆಮಣೆ ಏರಿದ್ದಾರೆ.

    ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಲೋಕೇಶ ಜಗಲಾಸರ್ ಹಾಗೂ ಒಡಿಶಾದ ಪದ್ಮಿನಿ ಸಾಹೊ ಇಬ್ಬರು 2015 ಐಪಿಎಸ್ ಬ್ಯಾಚ್‌ಮೇಟ್. ಇಬ್ಬರ ನಡುವಿನ ಪರಿಚಯ ಗಾಢ ಸ್ನೇಹಕ್ಕೆ ನಾಂದಿ ಹಾಡಿ ಪ್ರೀತಿಯತ್ತ ವಾಲಿತ್ತು. ಕಳೆದ ವರ್ಷ ಬಾಗಲಕೋಟೆ ಎಸ್ಪಿ ಲೋಕೇಶ ಅವರು ಪ್ರಪೋಸ್ ಮಾಡಿದ್ದರಿಂದ ಅದಕ್ಕೆ ಆ ಕಡೆಯಿಂದಲೂ ಒಪ್ಪಿಗೆ ಮುದ್ರೆ ಬಿದ್ದಿತ್ತು. ಈ ವಿಷಯ ಎರಡು ಕುಟುಂಬಗಳಿಗೂ ತಿಳಿಸಿದಾಗ ಹಿರಿಯರು ಕೂಡ ಒಪ್ಪಿಗೆ ಸೂಚಿಸಿದ್ದರು.

    ಐಪಿಎಸ್ ಅಧಿಕಾರಿಗಳ ಈ ಲವ್ ಕಂ ಅರೇಂಜ್ ಮ್ಯಾರೇಜ್‌ಗೆ ಒಡಿಶಾದ ಭುವನವೇಶ್ವರಿ ಭಾನುವಾರ ಸಾಕ್ಷಿಯಾಯಿತು. ಕುಟುಂಬ ಸದಸ್ಯರು, ಆಪ್ತರು, ಬಂಧುಗಳ ಸಮ್ಮುಖದಲ್ಲಿ ಲೋಕೇಶ ಜಗಲಾಸರ್ ಹಾಗೂ ಪದ್ಮಿನಿ ಸಾಹೊ ಸಪ್ತಪದಿ ತುಳಿದರು. ಫೆ.20 ರಂದು ಬೆಂಗಳೂರಿನ ಜಯನಗರದ ಪೂರ್ಣಿಮಾ ಕನ್ವೆಷನ್ ಸೆಂಟರ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

    ವರ ಕರ್ನಾಟಕ, ವಧು ಒಡಿಶಾ ಕೇಡರ್
    ಲೋಕೇಶ ಜಗಲಾಸರ್ ಹಾಗೂ ಪದ್ಮಿನಿ ಸಾಹೊ 2015ರ ಐಪಿಎಸ್ ಅಧಿಕಾರಿಗಳು. ಕರ್ನಾಟಕ ಕೇಡರ್‌ನ ಲೊಕೇಶ ಸದ್ಯ ಬಾಗಲಕೋಟೆ ಎಸ್ಪಿ ಹುದ್ದೆಯಲ್ಲಿ ಇದ್ದಾರೆ. ಪದ್ಮಿನಿ ಒಡಿಶಾ ಕೇಡರ್‌ಗೆ ಆಯ್ಕೆ ಆಗಿದ್ದು, ಅವರು ಬರ್ಗಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts